ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿ 46ನೇ ಘಟಿಕೋತ್ಸವ .208 ಚಿನ್ನದ ಪದಕ ಪ್ರದಾನ: ಪ್ರಭುದೇವ್

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯ ಈ ಬಾರಿ 208 ಪದಕಗಳನ್ನು ಚಿನ್ನದ ಪದಕಗಳನ್ನು ಪ್ರದಾನ ಮಾಡುತ್ತಿದ್ದು ಇದೇ 15ರಂದು ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ 46ನೇ  ವಾರ್ಷಿಕ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಪದಕ ಸ್ವೀಕರಿಸಲಿದ್ದಾರೆ’ ಎಂದು ವಿವಿ ಕುಲಪತಿ ಡಾ. ಎನ್. ಪ್ರಭುದೇವ್ ತಿಳಿಸಿದರು.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಚಿನ್ನದ ಬೆಲೆ ಹೆಚ್ಚಾದ್ದರಿಂದ 40ನೇ ಘಟಿಕೋತ್ಸವದಿಂದೀಚೆಗೆ ಚಿನ್ನದ ಪದಕ ನೀಡುವ ಪರಿಪಾಠ ಕಡಿಮೆಯಾಗಿತ್ತು. ಕೆಲವು ಘಟಿಕೋತ್ಸವಗಳಲ್ಲಿ ಚಿನ್ನದ ಪದಕ ಘೋಷಣೆಯಾಗಿರಲಿಲ್ಲ. ಈ ಸಾಲಿನ ಘಟಿಕೋತ್ಸವದಲ್ಲಿ ಚಿನ್ನದ ಪದಕ ನೀಡುವ ಸಂಪ್ರದಾಯಕ್ಕೆ ಮತ್ತೆ ಚಾಲನೆ ನೀಡಲಾಗಿದೆ’ ಎಂದರು.

‘ವಿಶೇಷ ಆಹ್ವಾನಿತರಿಗೆ, ವಿದೇಶಿ ಗಣ್ಯರಿಗೆ ನೀಡುತ್ತಿದ್ದ ಭೋಜನ ವ್ಯವಸ್ಥೆಯ ವೆಚ್ಚವನ್ನು ಕಡಿತಗೊಳಿಸಿ ಉಳಿತಾಯವಾದ ಹಣದಲ್ಲಿ ಚಿನ್ನದ ಪದಕಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ದತ್ತಿನಿಧಿಗಳ ಬಹುಮಾನವನ್ನು ಹಣದ ರೂಪದಲ್ಲಿ ವಿತರಿಸಲಾಗುವುದು’ ಎಂದರು. ‘ಪುರುಷರು 40 ಚಿನ್ನದ ಪದಕಗಳನ್ನು ಪಡೆದಿದ್ದು 100 ಪದಕಗಳು ವಿದ್ಯಾರ್ಥಿನಿಯರ ಪಾಲಾಗಿವೆ. ಈ ಬಾರಿ ಪದಕಗಳಿಸಿದ ವಿದ್ಯಾರ್ಥಿನಿಯರ ಸಂಖ್ಯೆ ದುಪ್ಪಟ್ಟಾಗಿದೆ. ಕೆಲವು ವಿಷಯಗಳಲ್ಲಿ ಒಬ್ಬರೇ ಅನೇಕ ಪದಕಗಳನ್ನು ಗಳಿಸಿದ್ದು 140 ವಿದ್ಯಾರ್ಥಿಗಳಿಗೆ 208 ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಪ್ರತಿ ಚಿನ್ನದ ಪದಕದ ತೂಕ 6ರಿಂದ 7 ಗ್ರಾಂ ಇದೆ. ಚಿನ್ನದ ಗುಣಮಟ್ಟ ಪರೀಕ್ಷೆ ನಡೆಸಲು ಪ್ರೊ. ನಾಡಗೌಡ ಅವರ ನೇತೃತ್ವದಲ್ಲಿ ಸಮತಿ ರಚಿಸಲಾಗಿದೆ. ಚಿನ್ನದ ಪದಕಗಳ ತಯಾರಿಗೆ ಒಟ್ಟು 24 ಲಕ್ಷ ರೂಪಾಯಿ ವೆಚ್ಚವಾಗಿದೆ’ ಎಂದು ಮಾಹಿತಿ ನೀಡಿದರು. ‘ಈ ಬಾರಿ ಸ್ನಾತಕೋತ್ತರ ಹಾಗೂ ಪದವಿ ವಿಭಾಗದಲ್ಲಿ 43,429 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಇವರಲ್ಲಿ ಪದವಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 29,252. ಒಟ್ಟು 134 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುವುದು’ ಎಂದು ಹೇಳಿದರು.
‘ದೇಶದಲ್ಲಿ ಕೇವಲ 2 ಲಕ್ಷ ವಿದೇಶಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಇವರ ಸಂಖ್ಯೆ ವೃದ್ಧಿಸುವ ನಿಟ್ಟಿನಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕಿದೆ. ಅಂತರರಾಷ್ಟ್ರೀಯ ದರ್ಜೆಯ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸುವ ಅಗತ್ಯವಿದೆ’ ಎಂದು ಹೇಳಿದರು.
ಸಾಮಾಜಿಕ ಆರ್ಥಿಕ ಬದಲಾವಣೆ ಸಂಸ್ಥೆ (ಐಎಸ್‌ಇಸಿ)ಯ ನಿರ್ದೇಶಕ ಆರ್.ಎಸ್.ದೇಶಪಾಂಡೆ ಮಾತನಾಡುತ್ತಾ ‘ಸಮಾಜ ವಿಜ್ಞಾನ ಪ್ರತಿಭಾನ್ವೇಷಣಾ ಯೋಜನೆಯಡಿ ವಿವಿ ಕುಲಪತಿಗಳು 25 ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 500 ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಕುಲಸಚಿವ ಆರ್.ಎಂ.ರಂಗನಾಥ್, ಮೌಲ್ಯಮಾಪನ ಕುಲಸಚಿವ ಟಿ.ಆರ್. ಸುಬ್ರಮಣ್ಯ ಉಪಸ್ಥಿತರಿದ್ದರು.

ನಕಲಿ ಪ್ರಮಾಣಪತ್ರ ತಡೆಯಲು ಕ್ರಮ

ಆಧುನಿಕ ತಂತ್ರಜ್ಞಾನ ಬಳಸಿ ಘಟಿಕೋತ್ಸವ ಪ್ರಮಾಣಪತ್ರಗಳ ನಕಲು ತಡೆಯಲು ಬೆಂಗಳೂರು ವಿಶ್ವವಿದ್ಯಾಲಯ ಮುಂದಾಗಿದೆ. ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್. ಪ್ರಭುದೇವ್ ‘ವೀಸಾ ನೀಡುವ ಪ್ರಕ್ರಿಯೆಯಲ್ಲಿ ತಗೆದುಕೊಳ್ಳುವ ಕಟ್ಟುನಿಟ್ಟಿನ ಕ್ರಮಗಳನ್ನೇ ಇಲ್ಲಿಯೂ ತೆಗೆದುಕೊಳ್ಳಲಾಗಿದೆ. ಜೆರಾಕ್ಸ್ ಯಂತ್ರಗಳಿಂದ ಪ್ರಮಾಣಪತ್ರದ ನಕಲು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದರು. ಹೈ ರೆಸಲ್ಯೂಷನ್ ಚೌಕಟ್ಟುಗಳನ್ನು ಹೊಂದಿರುವ ಪ್ರಮಾಣ ಪತ್ರವನ್ನು ಈ ಬಾರಿಯ ಘಟಿಕೋತ್ಸವದಲ್ಲಿ ವಿತರಿಸಲಾಗುತ್ತಿದೆ. ಪ್ರಮಾಣಪತ್ರದಲ್ಲಿರುವ ವಿವಿ ಲಾಂಛನವನ್ನು ಬಂಗಾರದ ಬಣ್ಣದಿಂದ ಅಲಂಕರಿಸಲಾಗಿದೆ. ಪ್ರಮಾಣ ಪತ್ರದ ಕ್ರಮ ಸಂಖ್ಯೆ ಒಂದು ಬದಿಯಲ್ಲಿ ಕಪ್ಪು ಹಾಗೂ ಮತ್ತೊಂದು ಬದಿಯಲ್ಲಿ ಕೆಂಪು ಬಣ್ಣದಿಂದ ಗೋಚರಿಸುವಂತೆ ಮಾಡಲಾಗಿದೆ. ನೇರಳಾತೀತ ಬೆಳಕಿನಲ್ಲಿ ವಿಶ್ವವಿದ್ಯಾಲಯದ ಸಂಯುಕ್ತಾಕ್ಷರಗಳನ್ನು ಕಾಣುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

ಪ್ರಮಾಣ ಪತ್ರದ ಪದಗಳನ್ನು ವಿಶೇಷವಾದ ಬಣ್ಣದಿಂದ ಅಲಂಕರಿಸಲಾಗಿದ್ದು ಇದರ ಕಾಪಿರೈಟ್ ಹಕ್ಕನ್ನು ಕಾಯ್ದಿರಿಸಲಾಗಿದೆ. ಅಭ್ಯರ್ಥಿಯ ಸ್ಕ್ಯಾನ್ ಮಾಡಿದ ಭಾವಚಿತ್ರವನ್ನು ಪ್ರಮಾಣಪತ್ರಕ್ಕೆ ಲಗತ್ತಿಸಲಾಗಿದೆ.

 ಬೆಂಗಳೂರು ವಿಶ್ವವಿದ್ಯಾಲಯದ 46ನೇ ಘಟಿಕೋತ್ಸವದಲ್ಲಿ ಮೊದಲ ರ್ಯಾಂಕ್ ಗಳಿಸಿ ಅತಿಹೆಚ್ಚು ಚಿನ್ನದ ಪದಕ ಪಡೆದವರಲ್ಲಿ ಎಲ್ಲರೂ ವಿದ್ಯಾರ್ಥಿನಿಯರೇ ಆಗಿದ್ದಾರೆ ಎಂಬುದು ವಿಶೇಷ. ಸ್ನಾತಕೋತ್ತರ ಕಲಾ ವಿಭಾಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಿ.ಜಿ. ಲಕ್ಷ್ಮಿ 7,  ವಿಜ್ಞಾನ ವಿಭಾಗದಲ್ಲಿ  ಭೌತಶಾಸ್ತ್ರ ವಿಭಾಗದ ಕೆ. ಸೌಮ್ಯ 6,  ಎಂಜಿನಿಯರಿಂಗ್ ವಿಭಾಗದಲ್ಲಿ ಯುವಿಸಿಇ ವಿದ್ಯಾರ್ಥಿನಿ ಎಸ್. ನಾಗದೀಪಿಕಾ 4, ವಾಣಿಜ್ಯ ವಿಭಾಗದಲ್ಲಿ ಆರ್.ಸಿ. ಕಾಲೇಜಿನ ಸಿ. ಉಷಾ 3, ಶಿಕ್ಷಣ ವಿಭಾಗದಲ್ಲಿ  ವಿವಿಯ ದೈಹಿಕ ಶಿಕ್ಷಣ ಸ್ನಾತಕೋತ್ತರ ವಿದ್ಯಾರ್ಥಿನಿ ಚಂದನಾ ಈಶ್ವರ್ 2, ಕಾನೂನು ವಿಭಾಗದಲ್ಲಿ ವಿವಿ ಕಾನೂನು ಕಾಲೇಜಿನ ಪೊಂಚಿ ಪುಕಾನ್ 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.









 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT