ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಷನಲ್‌ ಕಾಲೇಜು ಮೈದಾನ ಕ್ರೀಡೆಗೆ ಸೀಮಿತವಾಗಲಿ’

Last Updated 29 ಜುಲೈ 2018, 11:53 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಷನಲ್‌ ಕಾಲೇಜು ಮೈದಾನವನ್ನು ಕ್ರೀಡೇತರ ಚಟುವಟಿಕೆಗಳಿಗೆ ನೀಡಲಾಗುತ್ತಿದೆ ಎನ್ನುವ ಕೂಗು ಮತ್ತೊಮ್ಮೆ ಕೇಳಿಬಂದಿದೆ.–ಭಾನುವಾರ ಈ ಮೈದಾನದಲ್ಲಿ ಸೇರಿದ್ದಕ್ರೀಡಾಪಟುಗಳು ಹಾಗೂ ಶಂಕರಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ‘ಮೈದಾನ ಉಳಿಸಿ’ ಅಭಿಯಾನ ನಡೆಸಿದರು.

‘ಕಳೆದ ಬಾರಿ ಗಣೇಶ ಉತ್ಸವ ಸಮಿತಿ ಇದೇ ಮೈದಾನದಲ್ಲಿ ಕಾರ್ಯಕ್ರಮ ನಡೆಸಿತ್ತು. 10 ದಿನಗಳ ಕಾರ್ಯಕ್ರಮಕ್ಕೆ 15 ದಿನಗಳ ಮುಂಚೆಯೇ ಶಾಮಿಯಾನ ಹಾಕಲು ಪ್ರಾರಂಭಿಸಿದರು. ಕಾರ್ಯಕ್ರಮ ಮುಗಿದ 10 ದಿನಗಳವರೆಗೂ ಅದನ್ನು ತೆರವು ಮಾಡಲಿಲ್ಲ. ಸುಮಾರು ಒಂದುವರೆ ತಿಂಗಳು ಆಟವಾಡಲು, ನಡಿಗೆಗೆ ಮೈದಾನದಲ್ಲಿ ಅವಕಾಶವೇ ಸಿಗಲಿಲ್ಲ. ಇದು ಈ ಬಾರಿಯೂ ಪುನರಾವರ್ತನೆ ಆಗುವುದು ಬೇಡ’ ಎಂದು ಶಂಕರಪುರ ನಿವಾಸಿಗಳ ಸಂಘದ ಸದಸ್ಯ ನೀಲಕಂಠ ಒತ್ತಾಯಿಸಿದರು.

‘ಉತ್ಸವದ ಸಮಯದಲ್ಲಿ ಬೆಳಿಗ್ಗೆ 7 ಗಂಟೆಗೆ ಧ್ವನಿವರ್ಧಕಗಳನ್ನು ಹಾಕಿದವರು ರಾತ್ರಿ 11.30 ಆದರೂ ನಿಲ್ಲಿಸುವುದಿಲ್ಲ. ಮೈದಾನದ ಪಕ್ಕದಲ್ಲಿಯೇ ನಮ್ಮ ಮನೆಗಳು ಇರುವುದರಿಂದ ವಯಸ್ಸಾದವರಿಗೆ ತೊಂದರೆ ಆಗುತ್ತಿದೆ. ಮಕ್ಕಳಿಗೂ ಓದಲು ಕಿರಿಕಿರಿ ಆಗುತ್ತದೆ. ಇದನ್ನು ಕ್ರೀಡೆಗೆ ಮಾತ್ರ ಸೀಮಿತಗೊಳಿಸಿದರೆ ಎಲ್ಲಾ ರೀತಿಯಿಂದ ಅನುಕೂಲ ಆಗುತ್ತದೆ’ ಎಂದು ಹೇಳಿದರು.

‘ಕೋರ್ಟ್‌ ನಿರ್ದೇಶನದಂತೆ ಕೇವಲ 5 ದಿನ ಕ್ರೀಡಾಂಗಣ ಬಳಸಲು ಅವಕಾಶ ನೀಡಬೇಕು. ಆರನೇ ದಿನ ಆಟವಾಡಲು ಮೈದಾನ ದೊರೆಯುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಾಕೀತು ಮಾಡಬೇಕು’ ಎಂದರು.

‘ಕಾರ್ಯಕ್ರಮಗಳಿಂದ ರಾಶಿ ರಾಶಿ ಕಸ ಮೈದಾನದಲ್ಲಿ ಬಿದ್ದಿರುತ್ತದೆ. ಅದನ್ನು ನಾವೇ ಶುಚಿಗೊಳಿಸುತ್ತೇವೆ. ಮೈದಾನ ಬಾಡಿಗೆ ಪಡೆದವರು ಕಾರ್ಯಕ್ರಮದ ನಂತರ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಕಸವನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ’ ಎಂದು ಸ್ಥಳೀಯ ನಿವಾಸಿ ನಟರಾಜ್‌ ದೂರಿದರು.

‘ಕೆ.ಚಂದ್ರಶೇಖರ್‌ ಅವರು ಮೇಯರ್‌ ಆಗಿದ್ದಾಗ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಮೈದಾನ ನೆಲವನ್ನು ಸಮತಟ್ಟು ಮಾಡಿ, ಆಟಕ್ಕೆ ಯೋಗ್ಯವಾಗುವಂತೆ ಮಾಡಿದ್ದರು. ಈಗ ಅದೆಲ್ಲವೂ ಹಾಳಾಗಿ ಹೋಗಿದೆ. ಎಲ್ಲೆಂದರಲ್ಲಿ ಮೊಳೆಗಳು ಸಿಗುತ್ತವೆ. ಬರಿಗಾಲಿನಲ್ಲಿ ಆಟವಾಡಲು ಆಗದ ಸ್ಥಿತಿ ಇದೆ’ ಎಂದು ಕ್ರೀಡಾಪಟು ಲೋಕೇಶ್‌ ಬೇಸರ ವ್ಯಕ್ತಪಡಿಸಿದರು.

‘ಮೈದಾನ ಆಟಕ್ಕೆ ಸೀಮಿತವಾಗಬೇಕು. ಬಸವನಗುಡಿಯ ಸುತ್ತಮುತ್ತ ಇಷ್ಟು ವಿಶಾಲವಾದ ಮೈದಾನ ಮತ್ತೊಂದಿಲ್ಲ. ಕ್ರಿಕೆಟ್‌ ಕೋಚಿಂಗ್‌, ‌ಬ್ಯಾಸ್ಕೆಟ್‌ ಬಾಲ್‌ ಕೋಚಿಂಗ್ ನಡೆಯುತ್ತದೆ. ನಮಗೆ ಸಮಯ ಸಿಗುವುದೇ ಶನಿವಾರ, ಭಾನುವಾರ. ಅಂದೇ ಕಾರ್ಯಕ್ರಮಗಳು ನಡೆದರೆ ಹೇಗೆ’ ಎಂದು ವಿದ್ಯಾರ್ಥಿ ಸಂತೋಷ್‌ ಪ್ರಶ್ನಿಸಿದರು.

ಕ್ರಿಕೆಟ್‌ ಜಗತ್ತಿನಲ್ಲಿ ಮಿಂಚಿದ ಜಿ.ಆರ್‌. ವಿಶ್ವನಾಥ್‌, ಇ.ಎ.ಎಸ್‌. ಪ್ರಸನ್ನ, ಬಿ.ಎಸ್‌. ಚಂದ್ರಶೇಖರ್‌ ಮುಂತಾದವರು ತಮ್ಮ ಸಾಧನೆಯ ಕನಸನ್ನು ನನಸಾಗಿಸಲು ಇಲ್ಲಿಯೇ ತಾಲೀಮು ನಡೆಸಿದ್ದರು. ಈಗಲೂ ಅನೇಕ ಕ್ರಿಕೆಟ್‌ ತಂಡಗಳು ಈ ಮೈದಾನದಲ್ಲೇ ಅಭ್ಯಾಸ ಮಾಡುತ್ತಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT