ಬುಧವಾರ, ಆಗಸ್ಟ್ 10, 2022
23 °C
ಶುದ್ಧ ನೀರಿಗಾಗಿ ಅಲೆಯುತ್ತಿರುವ ಗ್ರಾಮಸ್ಥರು

ಬೀದರ್‌ನಲ್ಲಿ ಬಾಗಿಲು ಮುಚ್ಚಿರುವ 123 ಶುದ್ಧ ನೀರಿನ ಘಟಕಗಳು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ನೀರಿನ ಘಟಕಗಳಿಗೆ ಬೇಡಿಕೆ ಇದ್ದರೂ ನಿರ್ವಹಣೆಯ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಹಳ್ಳಿಗಳಲ್ಲಿನ 123 ಶುದ್ಧ ನೀರಿನ ಘಟಕಗಳು ಬಂದ್‌ ಆಗಿವೆ. ಜನರು ಶುದ್ಧ ನೀರಿಗಾಗಿ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲೆಂದೇ ರಾಜ್ಯ ಸರ್ಕಾರ ಬೀದರ್‌ ಜಿಲ್ಲೆಗೆ 434 ಘಟಕಗಳನ್ನು ಮಂಜೂರು ಮಾಡಿತ್ತು. 2019ರಲ್ಲಿ 301 ಹಾಗೂ 2020ರಲ್ಲಿ 56 ಸೇರಿ ಒಟ್ಟು 357 ಘಟಕಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ 234 ಘಟಕಗಳು ಮಾತ್ರ ಚಾಲ್ತಿಯಲ್ಲಿವೆ. ಉಳಿದ 123 ಘಟಕಗಳು ಕೆಟ್ಟು ಹೋಗಿವೆ.

ಆರಂಭದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಕ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧೀನಕ್ಕೆ ನೀಡಲಾಗಿದೆ. ಹಲವು ಕಾರಣಗಳಿಂದಾಗಿ ಯೋಜನೆಯ ಮೂಲ ಉದ್ದೇಶವೇ ಬುಡ ಮೇಲಾಗಿದೆ.

ಔರಾದ್ ತಾಲ್ಲೂಕಿನ ಗಡಿ ಗ್ರಾಮಗಳ ಜನ ₹100 ರಿಚಾರ್ಜ್ ಮಾಡಿಸಿ ಸ್ಮಾರ್ಟ್‌ ಕಾರ್ಡ್‌ ಮೂಲಕ ನೀರು ಒಯ್ಯುತ್ತಿದ್ದರು. ₹2 ಗೆ 20 ಲೀಟರ್‌ ನೀರು ದೊರಕುತ್ತಿತ್ತು. ಕಳಪೆ ಕಾಮಗಾರಿ, ನಿರ್ವಹಣೆ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಮತ್ತೆ ಅಶುದ್ಧ ನೀರನ್ನೇ ಕುಡಿಯಬೇಕಾಗಿದೆ ಎಂದು ಗ್ರಾಮಸ್ಥರು ಬೇಸರದಿಂದ ಹೇಳುತ್ತಾರೆ.

ಶುದ್ಧ ನೀರಿನ ಘಟಕಗಳು ಸಮಪರ್ಕವಾಗಿ ಕಾರ್ಯನಿರ್ವಹಿಸದ ಬಗ್ಗೆ ಕೆಡಿಪಿ ಹಾಗೂ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಅನೇಕ ಬಾರಿ ಸದಸ್ಯರು ಪ್ರಸ್ತಾಪ ಮಾಡಿದ್ದಾರೆ. ಘಟಕಗಳಲ್ಲಿ ಉಪಕರಣಗಳನ್ನು ಅಳವಡಿಸದೇ ಹಣ ಪಡೆದುಕೊಂಡಿರುವ ಬಗ್ಗೆಯೂ ಸಭೆಯಲ್ಲಿ ಹೇಳಿದ್ದಾರೆ. ಆದರೆ, ಕಳಪೆ ಕಾಮಗಾರಿ ಕೈಗೊಂಡ ಒಂದು ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ಧ ಇವತ್ತಿಗೂ ಕ್ರಮ ಕೈಗೊಂಡಿಲ್ಲ.

‘ಕೆಲ ರಾಜಕಾರಣಿಗಳು ಹಾಗೂ ಕೆಲ ಭ್ರಷ್ಟ ಅಧಿಕಾರಿಗಳು ಸೇರಿಕೊಂಡು ಕಳಪೆ ಗುಣಮಟ್ಟದ ಉಪಕರಣಗಳನ್ನು ಅಳವಡಿಸಿರುವ ಕಾರಣ ಅನೇಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಆರೋಪಿಸುತ್ತಾರೆ.

‘ಕೆಟ್ಟು ಹೋಗಿರುವ 89 ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡಲು ನಿರ್ಧರಿಸಲಾಗಿದೆ. ಗ್ರಾಮ ಪಂಚಾಯಿತಿಗಳ ಚುನಾವಣೆ ಮುಗಿದ ತಕ್ಷಣ ಟೆಂಡರ್ ಕರೆದು ಘಟಕಗಳಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಿ ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ ಹೇಳುತ್ತಾರೆ.

ಬಳಕೆಗೆ ಬಾರದ ಶುದ್ಧೀಕರಣ ಘಟಕಗಳು

ಔರಾದ್: ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಳವಡಿಸಿದ ಬಹುತೇಕ ಶುದ್ಧ ನೀರಿನ ಘಟಕಗಳು ನಿರುಪಯುಕ್ತವಾಗಿವೆ.

ಬಹುತೇಕ ಎಲ್ಲ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳಿದ್ದರೂ ಬೆರಳೆಣಿಕೆಯಷ್ಟು ಮಾತ್ರ ಬಳಕೆಯಾಗುತ್ತಿವೆ. ಕರಂಜಿ (ಬಿ), ಮುಂಗನಾಳ, ಸಂತಪುರ, ಬೋರಾಳ, ಎಕಲಾರ ಗ್ರಾಮಗಳಲ್ಲಿ ಎರಡು ವರ್ಷಗಳ ಹಿಂದೆ ಅಳವಡಿಸಿದ ಶುದ್ಧ ನೀರಿನ ಘಟಕಗಳು ಸ್ಮಾರಕವಾಗಿ ನಿಂತಿವೆ. ಕೆಲ ಘಟಕಗಳಲ್ಲಿ ಒಂದು ಹನಿ ನೀರು ಬಂದಿಲ್ಲ. ಕೆಲ ಘಟಕಗಳು ತಿಂಗಳ ನಂತರ ಕೆಟ್ಟು ಇಂದಿಗೂ ರಿಪೇರಿಯಾಗಿಲ್ಲ.
'ಶುದ್ಧ ನೀರಿನ ಘಟಕ ಅಳವಡಿಸುವ ಹೊಣೆಗಾರಿಕೆಯನ್ನು ಗ್ರಾಮೀಣ ನೀರು ಸರಬಾರಾಜು ಇಲಾಖೆಗೆ ವಹಿಸಲಾಗಿದೆ. ಬಹುತೇಕ ಗ್ರಾಮಗಳಲ್ಲಿ ಅವರು ಅಳವಡಿಸಿದ ಘಟಕಗಳು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿಲ್ಲ. ಹೀಗಾಗಿ ಅವು ಇದ್ದಲ್ಲಿ ಹಾಳಾಗುತ್ತಿವೆ. ಆದರೆ, ಪಂಚಾಯಿತಿ ಅಧೀನದಲ್ಲಿರುವ ಬಹುತೇಕ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ' ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ.

ಉದ್ಘಾಟನೆಗೂ ಮುನ್ನವೇ ಹಾಳಾದ ಶುದ್ಧೀಕರಣ ಘಟಕ

ಭಾಲ್ಕಿ: ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಶಾಂತಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿರುವ ನೀರು ಶುದ್ಧೀಕರಣ ಘಟಕ ಉದ್ಘಾಟನೆಗೂ ಮುನ್ನವೇ ಪಾಳು ಬಿದ್ದಿದ್ದು, ಘಟಕದೊಳಗಿನ ಕೆಲ ಸಾಮಗ್ರಿಗಳು ಕಳ್ಳರ ಪಾಲಾಗಿವೆ.
ಜನರಿಗೆ ಶುದ್ಧ ಕುಡಿಯುವ ನೀರು ಸಿಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿದೆ. ಆದರೆ, ತಾಲ್ಲೂಕಿನ ಮಳಚಾಪುರ, ಹಲಬರ್ಗಾ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿನ ನೀರು ಶುದ್ಧೀಕರಣ ಘಟಕಗಳು ಕಾರ್ಯಾರಂಭದ ಮುನ್ನವೇ ಹಾಳಾಗಿವೆ. ಇನ್ನು ಸಿಕಿಂದ್ರಾಬಾದ್‌ ವಾಡಿ, ಚಳಕಾಪುರ ಗ್ರಾಮಗಳಲ್ಲಿನ ಘಟಕಗಳು ಹಲವು ಕಾರಣಗಳಿಂದ ಆರಂಭವಾಗಿಲ್ಲ ಎನ್ನುತ್ತಾರೆ ನಿವಾಸಿಗಳಾದ ರೇವಣಸಿದ್ಧ ಜಾಡರ್‌, ಸುಭಾಷ ಕೆನಡೆ.
‘ತರನಳ್ಳಿ, ಏಣಕೂರು ಸೇರಿದಂತೆ ಇತರ ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕದ ಸಮಸ್ಯೆಗಳ ಮೇಲೆ ಪ್ರಜಾವಾಣಿ ಬೆಳಕು ಚೆಲ್ಲದ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿಪಡಿಸಿದ್ದಾರೆ’ ಎಂದು ಉಮೇಶ, ಮಲ್ಲಿಕಾರ್ಜುನ ಚಳಕಾಪೂರೆ ಹೇಳುತ್ತಾರೆ.

ಶುದ್ಧ ನೀರಿನ ಘಟಕದ ನಿರ್ವಹಣೆಯೇ ಇಲ್ಲ

ಬಸವಕಲ್ಯಾಣ: ಸರಿಯಾದ ನಿರ್ವಹಣೆ ಇಲ್ಲದೆ‌ ಬಸವಕಲ್ಯಾಣ ಹಾಗೂ ಹುಲಸೂರ ತಾಲ್ಲೂಕಿನ ಅರ್ಧದಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ಬಾಗಿಲು ಮುಚ್ಚಿವೆ.

ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಎರಡು ವರ್ಷಗಳ ಹಿಂದೆ 52 ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಕೆಲವೆಡೆ ಇವುಗಳ ಕಾಮಗಾರಿ ಸರಿಯಾಗಿ ನಡೆದಿಲ್ಲ ಆದರೂ, ತರಾತುರಿಯಲ್ಲಿ ಇವುಗಳನ್ನು ಗ್ರಾಮ ಪಂಚಾಯಿತಿಯವರು ಹಸ್ತಾಂತರ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಗೋರಟಾದ ಲಕ್ಷ್ಮಿ ದೇವಸ್ಥಾನದ ಎದುರಿನಲ್ಲಿನ ಘಟಕ ಕೆಲ ತಿಂಗಳವರೆಗೆ ಕಾರ್ಯನಿರ್ವಹಿಸಿ ನಂತರ ಬಂದ್ ಆಗಿದೆ. ಅನೇಕ ದಿನಗಳಿಂದ ಘಟಕದಿಂದ ನೀರು ಪೊರೈಸಲಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಹುಮನಾಬಾದ್ ತಾಲ್ಲೂಕಿನ ಕುಮಾರಚಿಂಚೋಳಿ ಗ್ರಾಮದ ಹನುಮಾನ ದೇವಸ್ಥಾನ ಸಮೀಪ ಹಾಗೂ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮದಿಂದ ಮೂಲಕ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಇವು ನಿರ್ವಹಣೆ ಇಲ್ಲದೆ ಹಾಳು ಬಿದ್ದಿವೆ.

ಚಿಟಗುಪ್ಪ ತಾಲ್ಲೂಕಿನ ಉಡಬಾಳ, ಮುಸ್ತರಿ, ನಿರ್ಣಾ ಮುತ್ತಂಗಿ ಗ್ರಾಮಗಳಲ್ಲಿ ಗ್ರಾಮ ಪಂಚಾಯಿಂದ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ಇದುವರೆಗೂ ಕಾರ್ಯ ಆರಂಭಿಸಿಲ್ಲ, ಸರ್ಕಾರದ ದುಡ್ಡು ಪೋಲಾಗಿದೆ, ಅ‌ಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆಯ ಸಮರ್ಪಕ ಅನುಷ್ಠಾನವಾಗಿಲ್ಲ.

ಕಮಲನಗರ ತಾಲ್ಲೂಕಿನ ತೋರಣಾ ವಾಡಿ ಗ್ರಾಮದಲ್ಲಿ 2018ರಲ್ಲಿ ₹ 12 ಲಕ್ಷ ವೆಚ್ಚದಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದ್ದು, ಕಳೆದ ಒಂದು ವರ್ಷದಿಂದ ಘಟಕ ಬಂದ್‌ ಆಗಿದೆ. ಕ್ವಾನ್‌ ಬಾಕ್ಸ್‌ ಹಾಳಾಗಿದೆ. ಜನರಿಗೆ ಶುದ್ಧ ನೀರು ದೊರೆಯುತ್ತಿಲ್ಲ.
ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರಿಗೆ ದೂರು ನೀಡಿದ ನಂತರ ಅಧಿಕಾರಿಗಳು ದುರಸ್ತಿ ಮಾಡಿಸಿ ಒಂದು ಫಲಕ ತೂಗು ಹಾಕಿದರು. ಆದರೆ, ಅದರಲ್ಲೇ ನೀರೇ ಬಂದಿಲ್ಲ ಎಂದು ಭೀಮರಾವ್ ಕಸ್ತೂರೆ, ಮನೋಜ್ ಜಾಧವ, ವಿನೋದ ಡಾಲಡೆ ಬೇಸರ ವ್ಯಕ್ತಪಡಿಸುತ್ತಾರೆ.

(ಸಹಕಾರ: ಮನ್ಮಥ ಸ್ವಾಮಿ, ಮಾಣಿಕ ಭುರೆ, ಬಸವರಾಜ ಪ್ರಭಾ, ಪ್ರಶಾಂತ ಹೊಸಮನಿ, ವೀರೇಶ ಮಠಪತಿ, ಮನೋಜಕುಮಾರ ಹಿರೇಮಠ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು