ಭಾನುವಾರ, ಏಪ್ರಿಲ್ 11, 2021
33 °C
ಜಿಲ್ಲೆಯಲ್ಲಿ 1,999 ಮತಗಟ್ಟೆಗಳ ಸ್ಥಾಪನೆ

ಬೀದರ್: 22 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲು ಕ್ಷಣಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಬಯಸಿ ರಾಜಕೀಯ ಪಕ್ಷಗಳು ಸೇರಿ ಒಟ್ಟು 22 ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಇಳಿದಿದ್ದು, ಮಂಗಳವಾರ ಮತದಾರರು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ ಮಾಡಲಿದ್ದಾರೆ.

ಕಾಂಗ್ರೆಸ್‌ನ ಈಶ್ವರ ಖಂಡ್ರೆ, ಬಿಜೆಪಿಯ ಭಗವಂತ ಖೂಬಾ, ಬಿಎಸ್‌ಪಿಯ ಎಸ್. ಎಚ್. ಬುಖಾರಿ, ಅಖಿಲ ಭಾರತೀಯ ಮುಸ್ಲಿಂ ಲೀಗ್ (ಸೆಕ್ಯುಲರ್)ನ ಅಬ್ದುಲ್‌ ಸತ್ತಾರ್‌ ಮುಜಾಹೀದ್, ಉತ್ತಮ ಪ್ರಜಾಕೀಯ ಪಕ್ಷದ ಅಂಬರೀಶ ಕೆಂಚಾ, ಅಂಬೇಡ್ಕರ್‌ ಪಾರ್ಟಿ ಆಫ್ ಇಂಡಿಯಾದ ದಯಾನಂದ ಗೋಡಬೋಲೆ, ಭರತ ಪ್ರಭಾತ್ ಪಾರ್ಟಿಯ ಮೊಹ್ಮದ್ ಅಬ್ದುಲ್ ವಕೀಲ, ಪ್ರಜಾ ಸತ್ತಾ ಪಾರ್ಟಿಯ ಮೊಹ್ಮದ್‌ ಯುಸೂಫ್‌ ಖದೀರ್, ಬಹುಜನ ಮಹಾ ಪಾರ್ಟಿಯ ಎಂ.ಡಿ.ಮಿರಾಜೊದ್ದಿನ್, ನ್ಯಾಷನಲ್ ಡೆವಲೆಪ್‌ಮೆಂಟ್ ಪಾರ್ಟಿಯ ಮೌಲ್ವಿ ಜಮಿರೋದ್ದಿನ್, ಪೂರ್ವಾಂಚಲ ಜನತಾ ಪಾರ್ಟಿ(ಸೆಕ್ಯುಲರ್)ಯ ರಾಜಕುಮಾರ, ಭಾರತೀಯ ಬಹುಜನ ಕ್ರಾಂತಿ ದಳದ ರಾಜಮಾಬಿ ದಸ್ತಗೀರ್‌, ಭಾರತೀಯ ಜನಕ್ರಾಂತಿ ದಳದ ಸಂತೋಷ ರಾಠೋಡ, ಕ್ರಾಂತಿಕಾರಿ ಜೈಹಿಂದ್ ಸೇನಾ ಪಾರ್ಟಿಯ ಸುಗ್ರೀವ ಕಚುವೆ ಕಣದಲ್ಲಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾಗಿ ಮೌಲಪ್ಪ ಅಮೃತ ಮಾಳಗೆ, ಮೌಲಾಸಾಬ ದಡಕಲ್, ರವಿಕಾಂತ ಹೂಗಾರ, ಶರದ್ ಗಂದಗೆ, ಶಿವರಾಜ ತಮ್ಮಣ್ಣ ಬೊಕ್ಕೆ, ಶ್ರೀಮಂತ ಪಾಟೀಲ, ಶೇಖ್ ಅಬ್ದುಲ್ ಗಫಾರ್, ಸೈಬಣ್ಣ ನಾಗೇಂದ್ರ ಜಮಾದಾರ ಸ್ಪರ್ಧಿಸಿದ್ದಾರೆ.

ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲೇ ಪ್ರಮುಖ ರಾಷ್ಟ್ರೀಯ ಪಕ್ಷಗಳ ಮುಖಂಡರು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬೀದರ್‌ ಜಿಲ್ಲೆಗೆ ಬಂದು ಬಹಿರಂಗ ಪ್ರಚಾರ ಮಾಡಿ ಹೋಗಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ಶಕ್ತಿ ಪ್ರದರ್ಶನ ನಡೆಸುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸಿವೆ. ಕೊನೆಯ ಕ್ಷಣದಲ್ಲಿ ಮರಿ ನಾಯಕರಿಂದ ಹಿಡಿದು ರಾಷ್ಟ್ರೀಯ ನಾಯಕರೂ ಸರತಿ ಸಾಲಿನಂತೆ ಮಾಧ್ಯಮಗೋಷ್ಠಿಗಳನ್ನು ನಡೆಸಿ ಮತದಾರರನ್ನು ತಲುಪಲು ಪ್ರಯತ್ನಿಸಿದ್ದಾರೆ.

ಕ್ಷೇತ್ರದಲ್ಲಿ 17.73 ಲಕ್ಷ ಮತದಾರರು:  ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ 9,18,595 ಪುರುಷರು, 8,55,214 ಮಹಿಳೆಯರು ಹಾಗೂ 103 ಇತರೆ ಮತದಾರರು ಸೇರಿ 17,73,912 ಮತದಾರರು ಇದ್ದಾರೆ. 2,745 ಅಂಧರು, 1,810 ಶ್ರವಣದೋಷವುಳ್ಳವರು, 8,025 ದೈಹಿಕ ಅಂಗವಿಕಲರು, 7,604 ಬುದ್ಧಿಮಾಂದ್ಯರು ಸಹಿತ ಬೀದರ್‌ ಜಿಲ್ಲೆಯಲ್ಲಿ 20,184 ಅಂಗವಿಕಲ ಮತದಾರರಿದ್ದಾರೆ.

ದೃಷ್ಟಿ ಸಮಸ್ಯೆ ಇರುವವರಿಗೆ ಮತಗಟ್ಟೆಗಳಲ್ಲಿ ಭೂತಕನ್ನಡಿ ಮತ್ತು ವಾಕರ್‌ ಮಾಡಲಾಗಿದೆ. ಅಂಗವಿಕಲರು ಹಾಗೂ ವೃದ್ಧರು ಮತಗಟ್ಟೆಯೊಳಗೆ ಬರಲು ಅನುಕೂಲವಾಗುವಂತೆ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.

ಬೀದರ್‌ ಜಿಲ್ಲೆಯಲ್ಲಿ ಒಟ್ಟು 1,999 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ 1,504 ಮತಗಟ್ಟೆಗಳ ಪೈಕಿ 70 ಅತಿಸೂಕ್ಷ್ಮ ಹಾಗೂ 283 ಸೂಕ್ಷ್ಮ ಮತಗಟ್ಟೆಗಳು ಇವೆ.

ಬಿಗಿ ಭದ್ರತೆ:  ಬೀದರ್‌ ಜಿಲ್ಲೆಯ ಪೊಲೀಸ್‌ ಸಿಬ್ಬಂದಿ ಈಗಾಗಲೇ ಸೂಕ್ಷ್ಮ ಪ್ರದೇಶದಲ್ಲಿ ಪಥ ಸಂಚಲನ ನಡೆಸುವ ಮೂಲಕ ಮತದಾರರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

‘ಚುನಾವಣಾ ಬಂದೋಬಸ್ತ್‌ಗೆ 2,228 ಪೊಲೀಸ್ ಸಿಬ್ಬಂದಿ, ಸಿಆರ್‌ಪಿಎಫ್‌ನ ಎರಡು ಕಂಪನಿಗಳು ಹಾಗೂ ಜಿಲ್ಲಾ ಸಶಸ್ತ್ರ ಪಡೆಯ 12 ತುಕ್ಕಡಿಗಳನ್ನು ನಿಯೋಜಿಸಲಾಗಿದೆ. ಪ್ರತಿಯೊಂದು ಮತಗಟ್ಟೆಗೆ ವೈರ್‌ಲೆಸ್‌ ಸಂಪರ್ಕ ಕಲ್ಪಿಸಲಾಗಿದೆ. ಇಬ್ಬರನ್ನು ಗಡಿ ಪಾರು ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ತಿಳಿಸಿದ್ದಾರೆ

ಬೀದರ್ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆಯ ಹೊಣೆಯನ್ನು ಜಿಲ್ಲಾ ಪೊಲೀಸ್‌ ಇಲಾಖೆಗೆ ನೀಡಲಾಗಿದೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು