ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಸಂಸದ ಭಗವಂತ ಖೂಬಾ ಸೇರಿ 36 ಜನರಿಗೆ ಕೋವಿಡ್‌ ಸೋಂಕು

ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಎಲ್ಲ ಅಂಗಡಿಗಳು ಬಂದ್
Last Updated 15 ಜುಲೈ 2020, 17:55 IST
ಅಕ್ಷರ ಗಾತ್ರ

ಬೀದರ್‌: ಸಂಸದ ಭಗವಂತ ಖೂಬಾ ಸೇರಿ ಜಿಲ್ಲೆಯಲ್ಲಿ ಒಟ್ಟು 36 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ವೈರಾಣು ಪೀಡಿತರ ಸಂಖ್ಯೆ 1,139ಕ್ಕೆ ತಲುಪಿದೆ.

ನಾಲ್ಕು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಖೂಬಾ ಅವರು ಜುಲೈ 13 ರಂದು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವ ಮೂಲಕ ಗಂಟಲು ದ್ರವ ಮಾದರಿ ಕೊಟ್ಟಿದ್ದರು. ವರದಿ ಪಾಸಿಟಿವ್‌ ಬಂದಿದೆ. ಹೀಗಾಗಿ ಬುಧವಾರ ಖೂಬಾ ಅವರ ಕುಟುಂಬದ ನಾಲ್ವರು ಸದಸ್ಯರು, ಕಾರು ಚಾಲಕ, ಅಂಗರಕ್ಷಕ ಹಾಗೂ ಕಚೇರಿ ಸಿಬ್ಬಂದಿ ಸೇರಿ ಒಟ್ಟು 10 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಎಲ್ಲರನ್ನೂ ಹೋಮ್‌ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಖೂಬಾ ಅವರು ಜುಲೈ 10 ರಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಪತ್ರಕರ್ತರು, ಕ್ಯಾಮೆರಾಮನ್‌, ಫೋಟೊಗ್ರಾಫರ್ ಹಾಗೂ ಯುಟ್ಯೂಬ್‌ ಚಾನೆಲ್‌ ಎಂದು ಹೇಳಿಕೊಂಡು ಬಂದಿದ್ದ 45ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ಹೀಗಾಗಿ ಮಾಧ್ಯಮ ಪ್ರತಿನಿಧಿಗಳಲ್ಲೂ ಆತಂಕ ಮನೆ ಮಾಡಿದೆ.

ಸಂಸದರಿಗೆ ಕೊರೊನಾದ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ವರದಿ ಪಾಸಿಟಿವ್ ಬಂದಿದೆ. ಒಂದು ತಿಂಗಳಲ್ಲಿ ಎರಡು ಬಾರಿ ವಿಮಾನದಲ್ಲಿ ಬೆಂಗಳೂರಿಗೆ ಹೋಗಿ ಬಂದಿದ್ದಾರೆ. ಜುಲೈ ಆರಂಭದಲ್ಲಿ ಒಂದು ಬಾರಿ ಪರೀಕ್ಷೆ ಮಾಡಿಸಿಕೊಂಡಾಗ ವರದಿ ನೆಗೆಟಿವ್ ಬಂದಿತ್ತು. ಎರಡನೇ ಬಾರಿಯ ವರದಿ ಪಾಸಿಟಿವ್ ಬಂದಿದೆ. ಅನೇಕ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಪತ್ರಕರ್ತರು ಇವರ ಸಂಪರ್ಕಕ್ಕೆ ಬಂದಿದ್ದಾರೆ.
ಖೂಬಾ ಅವರು ಶಿವನಗರದ ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ರಿಮ್ಸ್ ಹಾಗೂ ಖಾಸಗಿ ವೈದ್ಯರು ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಇಬ್ಬರು ಶಾಸಕರು ಕ್ವಾರಂಟೈನ್‌ಗೆ


ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಹಾಗೂ ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಹೋಮ್‌ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇವರಿಗೆ ಕೋವಿಡ್ 19 ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಸ್ವಯಂ ಪ್ರೇರಣೆಯಿಂದ ಕ್ವಾರಂಟೈನ್‌ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಶಾಸಕದ್ವಯರಿಗೆ ಕೋವಿಡ್‌ 19 ಸೋಂಕು ತಗುಲಿರುವುದನ್ನು ಜಿಲ್ಲಾಡಳಿತ ದೃಢಪಡಿಸಿಲ್ಲ.

ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಂಜಯ್ ಖೇಣಿ ಅವರ ಪತ್ನಿ, ತಾಯಿ ಹಾಗೂ ಪುತ್ರನಿಗೂ ಕೋವಿಡ್‌ ಸೋಂಕು ತಗುಲಿದೆ. ಇವರು ಕಲಬುರ್ಗಿಯ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇವರಿಗೆ ಸೋಂಕಿನ ಲಕ್ಷಣಗಳು ಇರಲಿಲ್ಲ. ಆದರೆ, ಗಂಟಲು ಮಾದರಿ ಪರೀಕ್ಷೆ ನಡೆಸಿದಾಗ ವರದಿ ಪಾಸಿಟಿವ್‌ ಬಂದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬುಧವಾರ ಬೀದರ್‌ ತಾಲ್ಲೂಕಿನಲ್ಲಿ 12, ಭಾಲ್ಕಿ ತಾಲ್ಲೂಕಿನಲ್ಲಿ 11, ಬಸವಕಲ್ಯಾಣ ತಾಲ್ಲೂಕಿನಲ್ಲಿ 3, ಹುಮಮಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ ತಲಾ ಐವರು ಸೋಂಕಿತರು ಪತ್ತೆಯಾಗಿದ್ದಾರೆ. ಇಬ್ಬರು ಬಾಲಕರು, ಮೂವರು ಬಾಲಕಿಯರು, 12 ಮಹಿಳೆಯರು ಹಾಗೂ 19 ಪುರುಷರಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬರಬೇಕಿದೆ 3,628 ಮಂದಿಯ ವರದಿ


ಬೀದರ್: ಜಿಲ್ಲೆಯಲ್ಲಿ ಈವರೆಗೆ 44,171 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಇವರಲ್ಲಿ 39,404 ಮಂದಿಯ ವೈದ್ಯಕೀಯ ವರದಿ ನೆಗೆಟಿವ್ ಹಾಗೂ 1,139 ಪಾಸಿಟಿವ್‌ ಬಂದಿವೆ.
ಬುಧವಾರ 58 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 3,628 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬರಬೇಕಿದೆ.


ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳದ ಜಿಲ್ಲಾಡಳಿತ


ಬೀದರ್‌: ಮದುವೆ, ನಾಮಕರಣ ಇನ್ನಿತರ ಕಾರ್ಯಕ್ರಮಗಳಲ್ಲಿ 50ಕ್ಕಿಂತ ಹೆಚ್ಚು ಜನ ಸೇರಬಾರದು. ಕಾರ್ಯಕ್ರಮದ ಆಯೋಜಕರು ತಹಶೀಲ್ದಾರರಿಂದ ಅನುಮತಿ ಪಡೆಯುವುದು ಅಗತ್ಯ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ರಾಜಕಾರಣಿಗಳು ನಡೆಸುವ ಪತ್ರಿಕಾಗೋಷ್ಠಿಯಲ್ಲಿ 50ಕ್ಕೂ ಅಧಿಕ ಜನ ಪಾಲ್ಗೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ.
ಲಾಕ್‌ಡೌನ್‌ ಅವಧಿಯಲ್ಲೂ ರಾಜಕಾರಣಿಗಳು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಗಳಲ್ಲಿ 50ರಿಂದ 60 ಜನ ಪಾಲ್ಗೊಂಡರೂ ಆಯೋಜಕರ ವಿರುದ್ಧ ಕ್ರಮ ಕೈಗೊಂಡಿಲ್ಲ.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 180 ರಿಂದ 200 ರ ವರೆಗೆ ಇದ್ದಾಗ ಜಿಲ್ಲಾಧಿಕಾರಿ ಕಚೇರಿ ಹಿಂಬದಿ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಆದರೆ, ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವುದು ಸಹ ಆತಂಕಕ್ಕೆ ಕಾರಣವಾಗಿದೆ.

ನಗರದಲ್ಲಿ 75 ಪತ್ರಕರ್ತರು ಇದ್ದಾರೆ. ಕ್ಯಾಮೆರಾಮನ್‌, ಫೋಟೊಗ್ರಾಫರ್‌ ಹಾಗೂ ಮಿಡಿಯಾ ಎಂದು ಹೇಳಿಕೊಂಡು ಬರುವ ಸೋಸಿಯಲ್‌ ಮಿಡಿಯಾದವರು ಸೇರಿ ನೂರಕ್ಕೂ ಹೆಚ್ಚು ಜನರಿದ್ದಾರೆ. ಒಂದು ಪತ್ರಿಕಾಗೋಷ್ಠಿಯಲ್ಲಿ ಕನಿಷ್ಠ 40 ರಿಂದ 45 ಜನ ಪಾಲ್ಗೊಳ್ಳುತ್ತಾರೆ. ಮಾಧ್ಯಮ ಗೋಷ್ಠಿಗಳಲ್ಲಿ ಅಂತರ ಪಾಲನೆಯಾಗುತ್ತಿಲ್ಲ. ಹೀಗಾಗಿ ಮಾಧ್ಯಮ ಪ್ರತಿನಿಧಿಗಳಲ್ಲೂ ಸೋಂಕು ಹರಡುವ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT