ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: 39,000 ಕ್ವಿಂಟಲ್ ಬಿತ್ತನೆ ಬೀಜ ಸಂಗ್ರಹ

Last Updated 25 ಮೇ 2022, 2:39 IST
ಅಕ್ಷರ ಗಾತ್ರ

ಔರಾದ್: ಪ್ರಸಕ್ತ ವರ್ಷದ ಮುಂಗಾರು ಆರಂಭವಾಗಲು ಎರಡು ವಾರ ಬಾಕಿ ಇರುವಾಗಲೇ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ತಾಲ್ಲೂಕಿನಲ್ಲಿ 99 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿದೆ. ಈ ಪೈಕಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬಿತ್ತಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ 38 ಸಾವಿರ ಕ್ವಿಂಟಲ್ ಸೋಯಾ ಬೀಜದ ಅಗತ್ಯವಿದೆ. ಈಗಾಗಲೇ 30 ಸಾವಿರ ಕ್ವಿಂಟಲ್ ಬೀಜ ದಾಸ್ತಾನು ಮಾಡಿ ಕೊಳ್ಳಲಾಗಿದೆ. ಉಳಿದಂತೆ ತೊಗರಿ, ಉದ್ದು, ಹೆಸರು, ಜೋಳ ಸೇರಿದಂತೆ 39 ಸಾವಿರ ಬಿತ್ತನೆ ಬೀಜ ದಾಸ್ತಾನು ಇದೆ.

ಔರಾದ್, ಸಂತಪುರ, ಚಿಂತಾಕಿ, ಕಮಲನಗರ, ದಾಬಕಾ, ಠಾಣಾಕುಶನೂರ ರೈತ ಸಂಪರ್ಕ ಕೇಂದ್ರದ ಜತೆಗೆ 25 ಉಪ ಕೇಂದ್ರಗಳಲ್ಲಿ ಬೀಜ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ 50 ಹಾಗೂ ಪರಿಶಿಷ್ಟ ಜಾತಿ ಪಂಗಡ ರೈತರಿಗೆ ಶೇ 75ರಷ್ಟು ಬೀಜ ವಿತರಣೆಯಲ್ಲಿ ವಿನಾಯಿತಿ ನೀಡಲಾಗಿದೆ. 30 ಕೆ.ಜಿ ತೂಕದ ಸೋಯಾ ಬೀಜ ಖರೀದಿಸಲು ಸಾಮಾನ್ಯ ವರ್ಗದ ರೈತರು ₹2,970 ಕೊಡಬೇಕು. ಪರಿಶಿಷ್ಟ ಜಾತಿ ಪಂಗಡ ರೈತರು ₹2,595 ಕೊಟ್ಟು ಖರೀದಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಹೇಳಿಕೆ.

ಮುಂಗಾರು ಬಿತ್ತನೆಗೆ ಡಿಎಪಿ ಮತ್ತು ಯುರಿಯಾ ಗೊಬ್ಬರದ ಅಗತ್ಯವಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲ ಪಿಕೆಪಿಎಸ್ ಮೂಲಕ ಗೊಬ್ಬರ ವಿತರಿಸಲಾಗುತ್ತದೆ. 3,400 ಮೆಟ್ರಿಕ್ ಟನ್ ಡಿಎಪಿ, 2 ಸಾವಿರ ಮೆಟ್ರಿಕ್ ಟನ್ ಯುರಿಯಾ ಗೊಬ್ಬರದ ಅಗತ್ಯವಿದೆ. ಈಗಾಗಲೇ 400 ಮೆಟ್ರಿಕ್ ಟನ್ ಡಿಎಪಿ, 500 ಮೆಟ್ರಿಕ್ ಟನ್ ಯುರಿಯಾ ಗೊಬ್ಬರದ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂಎಕೆ ಅನ್ಸಾರಿ ತಿಳಿಸಿದರು.

ಬಿತ್ತನೆಗೆ ಆತುರ ಬೇಡ; ಅನ್ಸಾರಿ

ಮುಂಗಾರು ಬಿತ್ತನೆಗೆ ರೈತರು ಅವಸರ ಪಡಬಾರದು ಎಂದು ಸಹಾಯಕ ಕೃಷಿ ನಿರ್ದೇಶಕ ಎಂಎಕೆ ಅನ್ಸಾರಿ ಸಲಹೆ ಮಾಡಿದರು.

80ರಿಂದ 90 ಮಿ.ಮೀ. ಮಳೆಯಾದರೆ ಮಾತ್ರ ಭೂಮಿ ಚೆನ್ನಾಗಿ ಹದವಾಗುತ್ತದೆ. ಹಾಗಾಗಿ ರೈತರು ಅದರಲ್ಲೂ ಸೋಯಾ ಬಿತ್ತನೆ ಮಾಡುವ ಬೆಳೆಗಾರರು ಜಮೀನು ಪೂರ್ಣ ಹದವಾದ ನಂತರ ಬಿತ್ತಬೇಕು ಎಂದರು.

ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪಂಗಡ ರೈತರು ಇಲಾಖೆಯಿಂದ ಹಂಚಿಕೆಯಾದ ಹಳೆ ಜಾತಿ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ ಕೆ-ಕಿಸಾನ್ ತಂತ್ರಾಂಶದಲ್ಲಿ ಸ್ವೀಕರಿಸುತ್ತಿಲ್ಲ. ಹೀಗಾಗಿ ಹೊಸ ಆರ್‌ಡಿ ಸಂಖ್ಯೆಯನ್ನು ರೈತರು ಆಯಾ ರೈತ ಸಂಪರ್ಕದಲ್ಲಿ ಕೊಡಬೇಕು ಎಂದು ಅವರು ತಿಳಿಸಿದ್ದಾರೆ.

‘ಕಳಪೆ ಬೀಜ ಮಾರಾಟ ತಡೆಯಿರಿ’

ಭಾಲ್ಕಿ: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆಗಾಗಿ ಬೇಕಾಗಿರುವ ಬೀಜ, ರಸಗೊಬ್ಬರ ದಾಸ್ತಾನು ಶೇಖರಿಸಿ ರೈತರಿಗೆ ಕುಂದುಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಭಾರತಿಯ ಕಿಸಾನ್ ಸಂಘದ ಅಧ್ಯಕ್ಷ ಪ್ರಭು ಮೂಲಗೆ ಮನವಿ ಮಾಡಿದ್ದಾರೆ.

ಗುಣಮಟ್ಟದ ಬೀಜ, ರಸಗೊಬ್ಬರ ಸಮರ್ಪಕವಾಗಿ ವಿತರಿಸಬೇಕು. ಕಾಳಸಂತೆಯಲ್ಲಿ ಕಳಪೆ ಬೀಜ, ರಸಾಗೊಬ್ಬರ ಮಾರಾಟವಾಗದಂತೆ ಕ್ರಮ ವಹಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿ ಅಮಿತ್ ಪಾಟೀಲ, ಜಿಲ್ಲಾ ಪದಾಧಿಕಾರಿಗಳಾದ ಪ್ರಭುರಾವ್ ಕಾಮಣ್ಣ, ಶಿವಶಂಕರ ಪಂಚಾಕ್ಷರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT