ಮಳೆಗೆ ಬಿರುಸು ಪಡೆದುಕೊಂಡ ಕೃಷಿ ಚಟುವಟಿಕೆ

ಬೀದರ್: ಜಿಲ್ಲೆಗೆ ಮುಂಗಾರು ತಡವಾಗಿ ಪ್ರವೇಶ ಮಾಡಿದೆ. ಆಗೊಮ್ಮೆ, ಈಗೊಮ್ಮೆ ಜಿಟಿ ಜಿಟಿ ಮಳೆಯಾಗುತ್ತಿದ್ದರೂ ಭೂಮಿಯಲ್ಲಿ ನೀರು ಇಂಗುವಷ್ಟು ಮಳೆ ಸುರಿದಿಲ್ಲ. ಭೂಮಿ ಮೇಲ್ಮೈ ಹಸಿಯಾದ ತಕ್ಷಣ ನೇಗಿಲು ಹೊಡೆದು ಬಹುತೇಕ ರೈತರು ಭೂಮಿಯನ್ನು ಬಿತ್ತನೆಗೆ ಹದ ಮಾಡಿಕೊಂಡಿದ್ದಾರೆ.
ಮಳೆಯ ನಿರೀಕ್ಷೆಯಲ್ಲೇ ಶೇಕಡ 41ರಷ್ಟು ಪ್ರದೇಶದಲ್ಲಿ ರೈತರು ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದು, ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ.
ರೈತ ಸಂಪರ್ಕ ಕೇಂದ್ರ ಮತ್ತು ಬೀಜ ವಿತರಣಾ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ವಿತರಿಸುವುದನ್ನುಮುಂದುವರಿಸಿದೆ.
ಒಂದು ವಾರದ ಹಿಂದೆ ಮಳೆ ಹನಿ ಉದುರುತ್ತಲೇ ರೈತರು ಬೀದರ್ ನಗರದ ಗಾಂಧಿಗಂಜ್‌ನಲ್ಲಿರುವ ಬಿತ್ತನೆ ಬೀಜ ಹಾಗೂ ಗೊಬ್ಬರ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ ತಮಗೆ ಬೇಕಿರುವ ಬೀಜ ಹಾಗೂ ಗೊಬ್ಬರವನ್ನು ಪಡೆದುಕೊಂಡಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಸರ್ಕಾರದಿಂದ ದೊರೆಯುತ್ತಿರುವ ರಿಯಾಯಿತಿ ದರದ ಬೀಜಗಳನ್ನೂ ರೈತ ಖರೀದಿಸಿದ್ದಾರೆ.
‘ಕೃಷಿ ಇಲಾಖೆಯು ಪ್ರಸಕ್ತ ವರ್ಷ 74,898 ಕ್ವಿಂಟಲ್ ಸೋಯಾ, 82.8 ಕ್ವಿಂಟಲ್ ಹೈಬ್ರೀಡ್ ಜೋಳ, 79 ಕ್ವಿಂಟಲ್ ತೊಗರಿ, 97 ಕ್ವಿಂಟಲ್ ಹೆಸರು ಹಾಗೂ 51.4 ಕ್ವಿಂಟಲ್ ಉದ್ದನ್ನು ರೈತರಿಗೆ ವಿತರಿಸಲಾಗಿದೆ. ರೈತರಿಂದ ದೂರುಗಳು ಬರದಂತೆ ಎಚ್ಚರಿಕೆಯಿಂದ ಬೀಜ ವಿತರಣೆ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ. ಹೇಳುತ್ತಾರೆ.
ಜಿಲ್ಲೆಯ 1,50,000 ಹೆಕ್ಟೇರ್್ ಪೈಕಿ 78.72 ಹೆಕ್ಟೇರ್ ಪ್ರದೇಶದಲ್ಲಿ ಸೋಯಾ, 80,000 ಹೆಕ್ಟೇರ್ ಪೈಕಿ 22904 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 25,000 ಹೆಕ್ಟೇರ್ ಪೈಕಿ 9,897 ಹೆಕ್ಟೇರ್ ಪ್ರದೇಶದಲ್ಲಿ ಉದ್ದು, ತಲಾ 30,000 ಹೆಕ್ಟೇರ್ ಪ್ರದೇಶ ಪೈಕಿ 10278 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಹಾಗೂ 927 ಹೆಕ್ಟೇರ್ ಪ್ರದೇಶದಲ್ಲಿ ಹೈಬ್ರೀಡ್ ಜೋಳ ಬಿತ್ತನೆ ನಡೆದಿದೆ. ಶೇಕಡ 41 ರಷ್ಟು ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಪೂರ್ಣಗೊಂಡಿದೆ. ವಾರದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬಿತ್ತನೆಗೆ ಸಕಾಲ
ಬೀದರ್: ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಎರಡು ದಿನಗಳಲ್ಲಿ ಉತ್ತಮ ಮಳೆ ನಿರೀಕ್ಷಿಸಲಾಗಿದೆ. ರೈತರು ಉತ್ತಮ ಮಳೆಯಾದರೆ ಹೆಸರು ಹಾಗೂ ಉದ್ದು ಬಿತ್ತನೆ ಮಾಡಬಹುದು. ಬಿತ್ತನೆ ಮಾಡುವಾಗ ಬಿತ್ತನೆ ಬೀಜಳಿಗೆ ಶೇ 2ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಿಂದ ಬೀಜೋಪಚಾರ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರವಿ ದೇಶಮುಖ ತಿಳಿಸಿದ್ದಾರೆ.
ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನು ಬೆಳೆಯ ಸಾಲಿನಲ್ಲಿ ಬರುವಂತೆ ಹಾಕಬೇಕು. ಹೀಗೆ ಮಾಡುವುದರಿಂದ ಬೆಳೆಯಲ್ಲಿ ತೇವಾಂಶ ಕೊರತೆಯನ್ನು ತಡೆಯಬಹುದು ಎಂದು ಹೇಳಿದ್ದಾರೆ.
‘ಜೂನ್‌ನಲ್ಲಿ ಜಿಲ್ಲೆಯಲ್ಲಿ 118 ಮಿಲಿ ಮೀಟರ್ ಮಳೆ ಸುರಿಯಬೇಕಿತ್ತು. ಕೇವಲ 69 ಮಿಲಿ ಮೀಟರ್ ಮಳೆ ಸುರಿದಿರುವ ಕಾರಣ ಭೂಮಿ ನಿರೀಕ್ಷಿತ ಪ್ರಮಾಣದಲ್ಲಿ ಹಸಿಯಾಗಿಲ್ಲ. ಬುಧವಾರ ಹಾಗೂ ಗುರುವಾರ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ತಿಂಗಳಲ್ಲಿ ಚೆನ್ನಾಗಿ ಮಳೆ ಬರುವ ನಿರೀಕ್ಷೆ ಇದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಹಮಾಮಾನ ತಜ್ಞ ಬಸವರಾಜ ಬಿರಾದಾರ ಹೇಳುತ್ತಾರೆ.
‘ರೈತರು ಮತ್ತೆ ಮಳೆಯ ನಿರೀಕ್ಷೆಯಲ್ಲಿ ಕಾಯ್ದು ಕುಳಿತುಕೊಳ್ಳುವುದಕ್ಕಿಂತ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸುವುದು ಒಳಿತು’ ಎಂದು ತಿಳಿಸುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.