ಬುಧವಾರ, ಏಪ್ರಿಲ್ 21, 2021
27 °C
ವಿಧಾನಸಭಾ ಉಪ ಚುನಾವಣೆ

ಅಭ್ಯರ್ಥಿ ಆಯ್ಕೆಗೆ ಬಸವಕಲ್ಯಾಣಕ್ಕೆ ವೀಕ್ಷಕರ ತಂಡ: ಬಂಡೆಪ್ಪ ಕಾಶೆಂಪೂರ್ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಜೆಡಿಎಸ್ ವೀಕ್ಷಕರ ತಂಡ ಶೀಘ್ರವೇ ಬಸವಕಲ್ಯಾಣಕ್ಕೆ ಭೇಟಿ ನೀಡಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಹೇಳಿದರು.

ನಗರದ ಎಸ್.ಆರ್.ಎಸ್ ಫಂಕ್ಷನ್ ಹಾಲ್‍ನಲ್ಲಿ ಶನಿವಾರ ನಡೆದ ಜೆಡಿಎಸ್ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ವೀಕ್ಷಕರು ಕ್ಷೇತ್ರದ ವಾಸ್ತವ ಚಿತ್ರಣ ಕುರಿತು ಅಧ್ಯಯನ ನಡೆಸಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಹೇಳಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಎಚ್.ಡಿ. ಕುಮಾರಸ್ವಾಮಿ ಅವರು ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಆಧಾರದಲ್ಲಿ ದೇವೇಗೌಡರಿಗೆ ಮನವರಿಕೆ ಮಾಡಿದ್ದಾರೆ. ಎಲ್ಲ ಉಪ ಚುನಾವಣೆಗಳಿಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ದಿನಾಂಕ ಘೋಷಣೆಯಾಗಲಿದೆ. ಮುಖಂಡರು ಹಾಗೂ ಕಾರ್ಯಕರ್ತರು ಈಗಿನಿಂದಲೇ ಚುನಾವಣೆ ಸಿದ್ಧತೆ ನಡೆಸಬೇಕು ಎಂದು ಸಲಹೆ ಮಾಡಿದರು.

2023 ರ ಚುನಾವಣೆಯಲ್ಲಿ ಜೆಡಿಎಸ್ 50-60 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳುವುದಿಲ್ಲ. 120 ಸ್ಥಾನಗಳನ್ನು ಗೆದ್ದು ಸಂಪೂರ್ಣ ಬಹುಮತದ ಸರ್ಕಾರ ರಚಿಸುವುದು ಪಕ್ಷದ ಗುರಿಯಾಗಿದೆ ಎಂದು ತಿಳಿಸಿದರು.

ಈಗ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವುದು ದುಡ್ಡು ಕೊಟ್ಟು ಶಾಸಕರನ್ನು ಖರೀದಿ ಮಾಡಿ ರಚಿಸಿದ ಸರ್ಕಾರವಾಗಿದೆ. ನಾವು ಜನರ ಸರ್ಕಾರವನ್ನು ಒಪ್ಪುತ್ತೇವೆಯೇ ಹೊರತು ಇದನ್ನಲ್ಲ ಎಂದು ಮಾಜಿ ಸಚಿವ ಎನ್.ಎಂ. ನಬಿ ಹೇಳಿದರು.

ಈಗ ಚುನಾವಣೆ ‘ಪೈಸಾ ಫೆಕೋ ತಮಾಷಾ ದೇಖೋ’ ಎಂಬಂತಾಗಿದೆ. 1994 ರ ಚುನಾವಣೆಯಲ್ಲಿ ಜನರು ದುಡ್ಡು ಕೊಟ್ಟು ತಮ್ಮನ್ನು ಗೆಲ್ಲಿಸಿದ್ದರು. ಎಚ್.ಡಿ. ಕುಮಾರಸ್ವಾಮಿ ಅವರು ಕೊಟ್ಟಿರುವ ಜನಪರ ಯೋಜನೆಗಳೇ ಜೆಡಿಎಸ್‍ಗೆ ಶ್ರೀರಕ್ಷೆಯಾಗಲಿವೆ ಎಂದು ಸ್ಮರಿಸಿಕೊಂಡರು.

ಮೋದಿ ಅಲೆಯಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಬಳಿ ಯೋಜನೆಗಳಿಲ್ಲ. ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ಭವಿಷ್ಯ ಇಲ್ಲ. ಬಿಜೆಪಿ ಆಡಳಿತದಲ್ಲಿ ಸಿಲಿಂಡರ್, ಪೆಟ್ರೋಲ್ ಬೆಲೆಗಳು ಗಗನಕ್ಕೆ ಏರಿವೆ ಎಂದು ವೀಕ್ಷಕಿ ಕರಿಯಮ್ಮ ಜೆ. ನಾಯಕ್ ಟೀಕಿಸಿದರು.

ಶಾಸಕ ವೆಂಕಟರಾವ್ ನಾಡಗೌಡ, ಮುಖಂಡರಾದ ತಿಮ್ಮಯ್ಯ ಪುರ್ಲೆ, ಉಸ್ತಾದ್ ನಾಸಿರ್ ಹುಸೇನ್, ಐಲಿನ್ ಜಾನ್ ಮಠಪತಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.