ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‍ನಲ್ಲಿ ಅಪಹೃತ ಔರಾದ್ ವಿದ್ಯಾರ್ಥಿ ಶೀಘ್ರ ಸ್ವದೇಶಕ್ಕೆ

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಪ್ರಯತ್ನ
Last Updated 19 ಜನವರಿ 2021, 14:25 IST
ಅಕ್ಷರ ಗಾತ್ರ

ಬೀದರ್: ಉಕ್ರೇನ್ ದೇಶದಲ್ಲಿ ಅಪಹರಣಗೊಂಡಿದ್ದ ಔರಾದ್ ತಾಲ್ಲೂಕಿನ ಹುಲ್ಯಾಳ ಗ್ರಾಮದ ವಿದ್ಯಾರ್ಥಿಯೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರ ಪ್ರಯತ್ನದಿಂದಾಗಿ ಶೀಘ್ರ ಸ್ವದೇಶಕ್ಕೆ ಮರಳಲಿದ್ದಾರೆ.

ವಿದ್ಯಾರ್ಥಿ ಅಜಯಕುಮಾರ ರಾಮರಾವ್ ರಾಠೋಡ್ ವೈದ್ಯಕೀಯ ವ್ಯಾಸಂಗಕ್ಕಾಗಿ 2020ರ ಡಿಸೆಂಬರ್ 13ರಂದು ಉಕ್ರೇನ್ ದೇಶಕ್ಕೆ ತೆರಳಿದ್ದರು. ಜನವರಿ 16ರಂದು ಅಪರಿಚಿತ ವ್ಯಕ್ತಿಗಳು ವಿದ್ಯಾರ್ಥಿಯನ್ನು ಅಪಹರಣ ಮಾಡಿದ್ದಾರೆ ಎಂಬ ಮಾಹಿತಿ ದೊರಕಿತ್ತು.

ವಿಷಯ ತಿಳಿದ ಕೂಡಲೇ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದ ವಿದ್ಯಾರ್ಥಿಯ ಪಾಲಕರನ್ನು ಸಂಪರ್ಕಿಸಿದ ಸಚಿವರು, ತಮ್ಮ ಮಗನನ್ನು ಮರಳಿ ತರುತ್ತೇನೆ. ಯಾವುದೇ ಕಾರಣಕ್ಕೂ ಎದೆಗುಂದದಿರಿ ಎಂದು ಧೈರ್ಯ ತುಂಬಿದ್ದರು.

ತಕ್ಷಣ ವಿಷಯವನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ತಂದರು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಮೂಲಕ ಉಕ್ರೇನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರು. ವಿದ್ಯಾರ್ಥಿಯು ಕಿರ್ಗಿಸ್ತಾನ್‍ದಲ್ಲಿ ಇರುವ ಮಾಹಿತಿ ಲಭಿಸಿತು. ನಂತರ ಕಿರ್ಗಿಸ್ತಾನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ವಿದ್ಯಾರ್ಥಿಯನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಲಾಯಿತು. ಕಿರ್ಗಿಸ್ತಾನ್‍ದಿಂದ ಅಜಯಕುಮಾರ ಶೀಘ್ರದಲ್ಲೇ ಭಾರತಕ್ಕೆ ಆಗಮಿಸಲಿದ್ದಾರೆ.

ಅಪಹರಣವಾಗಿದ್ದ ವಿದ್ಯಾರ್ಥಿಯನ್ನು ಕೇವಲ ಮೂರು ದಿನಗಳಲ್ಲಿ ಪತ್ತೆ ಮಾಡಿಸುವಲ್ಲಿ ಸಂಸದ ಭಗವಂತ ಖೂಬಾ ಅವರು ಸಾಕಷ್ಟು ಸಹಕಾರ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಅವರು ವೈಯಕ್ತಿಕ ಕಾಳಜಿ ವಹಿಸಿ ವಿದ್ಯಾರ್ಥಿಗೆ ನೆರವಾಗಿದ್ದಾರೆ ಎಂದು ಸಚಿವ ಚವಾಣ್ ತಿಳಿಸಿದ್ದಾರೆ.

ಸಾರ್ವಜನಿಕರಲ್ಲಿ ಮನವಿ: ದೇಶದಲ್ಲಿರುವ ಕಾಲೇಜುಗಳು ಯಾರಿಗೂ ಕಮ್ಮಿಯಿಲ್ಲದಂತೆ ಶಿಕ್ಷಣ ನೀಡುತ್ತಿವೆ. ಹಲವು ಖಾಸಗಿ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಬೇರೆ ದೇಶಗಳ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಅಪರಿಚಿತ ವ್ಯಕ್ತಿಗಳು ಅಥವಾ ಏಜೆನ್ಸಿಗಳ ಆಕರ್ಷಕ ಸೌಲಭ್ಯಗಳಿಗೆ ಮಾರು ಹೋಗಿ ವಿದೇಶಗಳಿಗೆ ಹೋಗಬಾರದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT