ಮಂಗಳವಾರ, ಜೂನ್ 22, 2021
24 °C
ಲಸಿಕೆ ಪಡೆಯಲು ಬಂದವರಿಗೆ ವಾಪಸ್ ಕಳುಹಿಸದಿರಲು ಸಚಿವರ ಸೂಚನೆ

ಕೋವಿಡ್ ನಿಯಮ ಪಾಲಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡುವುದರ ಜತೆಗೆ ಕೋವಿಡ್ ನಿಯಮವನ್ನು ಚಾಚು ತಪ್ಪದೇ ಪಾಲನೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಿಳಿಸಿದರು.

ಮಂಗಳವಾರ ಪಟ್ಟಣದ ವಿವಿಧೆಡೆ ಸುತ್ತಾಡಿ, ಇಂತಹ ಸಂಕಷ್ಟದ ಸಮಯದಲ್ಲಿ ಎಲ್ಲರೂ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಪಟ್ಟಣ ಪಂಚಾಯಿತಿಯವರು ನಿಯಮಿತವಾಗಿ ಕಸ ವಿಲೇವಾರಿ ಮಾಡಬೇಕು. ತಗ್ಗು ಪ್ರದೇಶ ಹಾಗೂ ಚರಂಡಿಯಲ್ಲಿ
ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ಪಟ್ಟಣ
ಪಂಚಾಯಿತಿ ಸದಸ್ಯರು ತಮ್ಮ ವಾರ್ಡ್‍ಗಳಲ್ಲಿ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು.

ಪಟ್ಟಣದಲ್ಲಿ ಮನೆ ಮನೆಗೆ ನೀರು ಪೂರೈಸುವ ಕೆಲಸ ನಡೆಯುತ್ತಿದೆ. ಅದನ್ನು ಸರಿಯಾಗಿ ಮತ್ತು ಕಾಲಮಿತಿಯಲ್ಲಿ ಪೂರ್ಣ ಆಗಬೇಕು. ಈಗಾಗಲೇ ಜಾರಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು. ಈ ವೇಳೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುವಂತೆ ಮುಖ್ಯಾಧಿಕಾರಿ ರವಿ ಸುಕುಮಾರ ಅವರಿಗೆ ಸೂಚಿಸಿದರು.

ಕೋವಿಡ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಕಠಿಣ ಲಾಕ್‍ಡೌನ್ ಮಾಡಲಾಗಿದೆ. ಜನ ಇದನ್ನು ಅರ್ಥ ಮಾಡಿಕೊಂಡು ಸರ್ಕಾರಕ್ಕೆ ಸಹಕಾರ ನೀಡಬೇಕು. ರೋಗಿಗಳು ಹಾಗೂ ಅಗತ್ಯ ಸೇವೆಯಲ್ಲಿ ತೊಡಗುವವರಿಗೆ ಪೊಲೀಸರು ಸಹಕರಿಸಬೇಕು. ವಿನಾ ಕಾರಣ ರಸ್ತೆಗೆ ಬಂದವರಿಗೆ ಪಾಠ ಕಲಿಸಲು ತಮ್ಮ ತಕರಾರು ಇಲ್ಲ ಎಂದು ತಿಳಿಸಿದರು.

ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಈಗ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.

ಧುರೀಣ ಶ್ರೀಮಂತ ಪಾಟೀಲ, ಶರಬನಸವ ಸಾವಳೆ, ಕೇರಬಾ ಪವಾರ, ಯಾದವರಾವ ಮೇತ್ರೆ, ಶಿವಾಜಿ ಚವಾಣ್, ಜೈಪಾಲ್ ರಾಠೋಡ, ಸಿಪಿಐ ರವೀಂದ್ರನಾಥ, ಪಿಎಸ್‍ಐ ಮಂಜುನಾಥಗೌಡ ಇದ್ದರು.

‘ಉಚಿತ ಆಹಾರ ವಿತರಣೆಗೆ ವ್ಯವಸ್ಥೆ’

ಲಾಕ್‍ಡೌನ್‍ನಿಂದ ತೊಂದರೆಗೊಳಗಾದ ಕ್ಷೇತ್ರದ ಜನರಿಗೆ ವೈಯಕ್ತಿಕ ಖರ್ಚಿನಿಂದ ಉಚಿತ ಆಹಾರ ವಿತರಿಸುವುದಾಗಿ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.

‘ಕಳೆದ ವರ್ಷದ ಲಾಕ್‍ಡೌನ್ ವೇಳೆ ಬಡವರು ಹಾಗೂ ಕೂಲಿ ಕಾರ್ಮಿಕರಿಗಾಗಿ ನೆರವು ಕೇಂದ್ರ ಆರಂಭಿಸಲಾಗಿತ್ತು. ಅದೇ ಮಾದರಿ ಯಲ್ಲಿ ಈ ವರ್ಷವೂ ಆಹಾರ ವಿತರಣೆ ವ್ಯವಸ್ಥೆ ಮಾಡಲಾಗುವುದು. ಅಂತಹ ಸಂತ್ರಸ್ತರ ಪಟ್ಟಿ ಮಾಡಿ ನಿತ್ಯ ಅವರ ಮನೆಗೆ ಆಹಾರ ಕಿಟ್ ಪೂರೈಸಲಾಗುವುದು’ ಎಂದರು.

ವಿಶೇಷವಾಗಿ ನನ್ನ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಎಷ್ಟೇ ಖರ್ಚಾದರೂ ಎಲ್ಲರಿಗೂ ನಾನು ನಿತ್ಯ ಆಹಾರ ಪೂರೈಸಲು ಬದ್ಧನಾಗಿದ್ದೇನೆ. ಕೆಲವೆಡೆ ಸ್ವತಃ ನಾನೇ ಹೋಗಿ ಅವರಿಗೆ ಆಹಾರ ಕೊಡುತ್ತೇನೆ. ತೊಂದರೆ ಇದ್ದವರು ನೇರವಾಗಿ ನನಗೆ ಸಂಪರ್ಕಿಸಬೇಕು ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು