ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜಿಲ್ಲೆಯಲ್ಲಿ ಮತ್ತೆ ಕ್ಯಾಟ್‌ಫಿಶ್‌ ಉತ್ಪಾದನೆ

ಬೀದರ್‌, ಹುಮನಾಬಾದ್ ತಾಲ್ಲೂಕುಗಳಲ್ಲಿ ನೂರಾರು ಹೊಂಡ
Last Updated 5 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಬೀದರ್: ಕಳೆದೊಂದು ವರ್ಷದಲ್ಲಿ ಬೀದರ್‌ ಹಾಗೂ ಹುಮನಾಬಾದ್‌ ತಾಲ್ಲೂಕಿನ ಕಾರಂಜಾ ಜಲಾಶಯದ ಹಿನ್ನೀರ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ನಿಷೇಧಿತ ಆಫ್ರಿಕನ್ ಕ್ಯಾಟ್ ಫಿಶ್ ಸಾಕಾಣಿಕೆ ಎಗ್ಗಿಲ್ಲದೆ ನಡೆದಿದೆ.

ಕಾರಂಜಾ ಜಲಾಶಯದ ಹಿನ್ನೀರ ಪ್ರದೇಶದಲ್ಲಿ 2015ರಲ್ಲಿ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಆಗಿದ್ದ ಹರ್ಷ ಗುಪ್ತ ದಾಳಿ ನಡೆಸಿ 60ಕ್ಕೂ ಅಧಿಕ ಕ್ಯಾಟ್‌ ಫಿಶ್‌ ಸಾಕಾಣಿಕೆ ಹೊಂಡಗಳನ್ನು ಪತ್ತೆ ಮಾಡಿ ಮೀನು ಸಾಕಾಣಿಕೆದಾರರು ಬೆಚ್ಚಿ ಬೀಳುವಂತೆ ಮಾಡಿದ್ದರು. ಅಷ್ಟೇ ಅಲ್ಲ ಅಧಿಕಾರಿಗಳ ಬೆವರು ಕೂಡ ಇಳಿಸಿದ್ದರು.

ನಂತರ ಅಧಿಕಾರಿಗಳು ಎಲ್ಲ ಹೊಂಡಗಳನ್ನು ತೆರವುಗೊಳಿಸಿ ಕ್ಯಾಟ್‌ಫಿಶ್‌ ಉತ್ಪಾದನೆ ಅಕ್ರಮ ಜಾಲಕ್ಕೆ ಕಡಿವಾಣ ಹಾಕಿದ್ದರು. ಈಗ ಕ್ಯಾಟ್ ಫಿಶ್ ಸಾಕಾಣಿಕೆ ಹಾಗೂ ಮಾರಾಟಗಾರರ ಜಾಲ ಮತ್ತೆ ಸಕ್ರಿಯವಾಗಿದೆ.

ಜಿಲ್ಲೆಯ ಖೇಣಿರಂಜೋಳ್, ಅತಿವಾಳವಾಡಿ, ಡಾಕುಳಗಿ, ಅಮಿರಾಬಾದ್ ವಾಡಿ ಹೊರ ವಲಯದಲ್ಲಿ ಜೆಸಿಬಿಯಿಂದ ಪುನಃ ಹೊಂಡಗಳನ್ನು ನಿರ್ಮಾಣ ಮಾಡಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡಲಾಗಿದೆ.

ಬೆಚ್ಚಗಿನ ಪ್ರದೇಶ ಹಾಗೂ ಕೊಳಕು ನೀರಿನಲ್ಲಿ ಬಹುಬೇಗ ಬೆಳೆಯುವುದರಿಂದ ಕಾರಂಜಾ ಜಲಾಶಯದ ಹಿನ್ನೀರ ಪ್ರದೇಶವನ್ನೇ ಉತ್ಪಾದನಾ ಕೇಂದ್ರವನ್ನಾಗಿ ಮಾಡಿಕೊಳ್ಳಲಾಗಿದೆ.

ಕ್ಯಾಟ್‌ ಫಿಶ್‌ ಉತ್ಪಾದನೆಯಲ್ಲಿ ತೊಡಗಿರುವವರು ರಾಜಕಾರಣಿಗಳೊಂದಿಗೆ ನಂಟು ಹೊಂದಿದ್ದಾರೆ. ತೆಲಂಗಾಣದ ಜಹೀರಾಬಾದ್ ಹಾಗೂ ನಾರಾಯಣಖೇಡ್‌ದಿಂದ ಕೋಳಿ ಹಾಗೂ ಜಾನುವಾರುಗಳ ಮಾಂಸದ ತ್ಯಾಜ್ಯವನ್ನು ತಂದು ಬೆಳಗಿನ ಜಾವ ಹೊಂಡದಲ್ಲಿ ಸುರಿದು ಅವುಗಳನ್ನು ಬೆಳೆಸುತ್ತಿದ್ದಾರೆ.

ಬಲಿತ ಮೀನುಗಳನ್ನು ಬೇರೆ ಕಡೆಗೆ ಸಾಗಣೆ ಮಾಡಿದ ನಂತರ ಗಾಢ ಹಸಿರು ಬಣ್ಣಕ್ಕೆ ತಿರುಗುವ ಕಲುಷಿತ ನೀರನ್ನು ಡೀಸೆಲ್ ಯಂತ್ರಗಳಿಂದ ಹೊರಗೆ ಚೆಲ್ಲಿ ಹೊಸ ನೀರು ಸಂಗ್ರಹಿಸುತ್ತಿದ್ದಾರೆ. ಇದರಿಂದಾಗಿ ಕೊಳಕು ನೀರು ಜಲಾಶಯ ಸೇರುತ್ತಿದೆ.

‘ಕಾರಂಜಾ ಹಿನ್ನೀರ ವ್ಯಾಪ್ತಿಯಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಕಾರಂಜಾ ಹಿನ್ನೀರ ಪ್ರದೇಶದ ಮೇಲೆ ನಿಗಾ ವಹಿಸಲು ಸಾಧ್ಯವಾಗಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ನಿಷೇಧಿತ ಮೀನು ಸಾಕಾಣಿಕೆ ನಡೆಸುತ್ತಿರುವ ಪ್ರದೇಶದ ವ್ಯಾಪ್ತಿಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗುವುದು’ ಎಂದು ಹೇಳುತ್ತಾರೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಹಮ್ಮದ್ ರೆಹಮಾನ್.

ತೆಲಂಗಾಣದ ಕೆಲವರು ಕ್ಯಾಟ್ ಫಿಶ್ ಉತ್ಪಾದನೆ ಹಾಗೂ ಮಾರಾಟವನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ಮೀನುಗಳನ್ನು ತಿಂದು ಅನೇಕ ಜನ ಅರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ದಂಧೆಗೆ ಕಡಿವಾಣ ಹಾಕುವವರೇ ಇಲ್ಲವಾಗಿದ್ದಾರೆ’ ಎಂದು ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿಯ ಸಂಜುಕುಮಾರ ಮೀನುಗಾರ ಬೇಸರ ವ್ಯಕ್ತಪಡಿಸುತ್ತಾರೆ.

‘ಕಾರಂಜಾ ಜಲಾಶಯಕ್ಕೆ ಕಲುಷಿತ ನೀರು ಸೇರಿಕೊಂಡು ಉತ್ತಮ ತಳಿಯ ಮೀನುಗಳು ಸಾಯುತ್ತಿವೆ. ನೀರಿನಿಂದ ಚರ್ಮರೋಗಗಳು ಬರುತ್ತಿವೆ. ಮೂರು ತಾಲ್ಲೂಕಿಗೆ ಇಲ್ಲಿಂದಲೇ ನೀರು ಪೂರೈಕೆ ಮಾಡುತ್ತಿರುವ ಕಾರಣ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದು ಬ್ಯಾಲಹಳ್ಳಿಯ ನಿವಾಸಿ ಅಮರ ಬಾಬುರಾವ್‌ ಹೇಳುತ್ತಾರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT