ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನಯಾನ ಸೇವೆಯಿಂದ ಅಭಿವೃದ್ಧಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ

Last Updated 8 ಫೆಬ್ರುವರಿ 2020, 9:50 IST
ಅಕ್ಷರ ಗಾತ್ರ

ಬೀದರ್: ‘ಜನತೆಯ ದಶಕಗಳ ಕನಸು ನನಸಾಗಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ನಾಗರಿಕ ವಿಮಾನಯಾನ ಸೇವೆ ನೆರವಾಗಲಿದೆ. ಇನ್ನು ಜಿಲ್ಲೆಯಲ್ಲಿ ಕೈಗಾರಿಕಾದ್ಯೋಮಗಳು ಬೆಳವಣಿಗೆ ಹೊಂದಲಿವೆ ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಹೊರವಲಯದಲ್ಲಿ ನಿರ್ಮಿಸಿದ ಬೀದರ್‌ ವಿಮಾನ ನಿಲ್ದಾಣ ಹಾಗೂ ನಾಗರಿಕ ವಿಮಾನಯಾನ ಸೇವೆಗೆ ಚಾಲನೆ ನೀಡಿ ಮಾತನಾಡಿದರು.

‘ಬೀದರ್‌ ಇತಿಹಾಸದಲ್ಲಿ ಇಂದು ಮಹತ್ವದ ದಿನವಾಗಿದೆ. ಇದೀಗ ದೂರದ ಬೆಂಗಳೂರು ಬೀದರ್‌ಗೆ ಸಮೀಪವಾಗಿದೆ. ಈ ಮೊದಲು ಬೆಂಗಳೂರಿನಿಂದ ಬೀದರ್‌ಗೆ ಬರಲು ಹಾಗೂ ಬೀದರ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಚಿಸಬೇಕಾಗಿತ್ತು. ಈಗ ಎಲ್ಲ ಗೊಂದಲಗಳು ನಿವಾರಣೆ ಯಾಗಿವೆ’ ಎಂದು ತಿಳಿಸಿದರು.

‘ಸವಲತ್ತುಗಳು ಇದ್ದರೆ ಕೈಗಾರಿಕೆಗಳು ಬರುತ್ತವೆ. ಬೀದರ್‌ನಿಂದ ಆರಂಭವಾದ ನಾಗರಿಕ ವಿಮಾನಯಾನ ಸರ್ವಾಂಗೀಣ ಅಭಿವೃದ್ಧಿಗೆ ಮನ್ನುಡಿ ಬರೆಯಲಿದೆ’ ಎಂದು ಹೇಳಿದರು.

‘ವಿಮಾನ ಸಂಚಾರದ ಈಗಿರುವ ಸಮಯ ಬದಲಾಗಬೇಕು ಎನ್ನುವ ಬೇಡಿಕೆ ಇದೆ. ಜಿಲ್ಲೆಯ ಜನ ಬೆಳಿಗ್ಗೆ ಬೀದರ್‌ನಿಂದ ಬೆಂಗಳೂರಿಗೆ ಬಂದು ಸಂಜೆ ಕೆಲಸ ಮುಗಿಸಿಕೊಂಡು ಮರಳಿ ಬರುವಂತಾಗಬೇಕು. ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕು’ ಎಂದರು.

‘ವಿಮಾನ ಯಾನದ ದರ, ರೈಲು ಪ್ರಯಾಣದರಕ್ಕಿಂತಲೂ ಕಡಿಮೆ ಇದೆ. ಜಿಲ್ಲೆಯ ಜನರು ಇದರ ಸದು‍ಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.

ಜಿಎಂಆರ್‌ ಸಿಇಒ ಎಸ್‌.ಜಿ.ಕೆ.ಕಿಶೋರ ಮಾತನಾಡಿ, ‘ಉಡಾನ್ ಯೋಜನೆಯಿಂದಾಗಿಯೆ ನಮ್ಮ ಸಂಸ್ಥೆ ಬೀದರ್‌ನಿಂದ ವಿಮಾನಯಾನ ಸೇವೆ ಒದಗಿಸಲು ಮುಂದೆ ಬಂದಿದೆ. ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಸೇವೆ ಒದಗಿಸಲಾಗುತ್ತಿದೆ. ಬರುವ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ವಿಮಾನ ಸಂಚಾರ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಎಂಆರ್‌ ಸಿಇಒ ಎಸ್‌.ಜಿ.ಕೆ. ಕಿಶೋರ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ ಅವರನ್ನು ಸನ್ಮಾನಿಸಲಾಯಿತು.

ಪಶು ಸಂಗೋಪನೆ ಸಚಿವ ಪ್ರಭು ಚವಾಣ ಮಾತನಾಡಿ, ‘2008ರಲ್ಲಿ ಬಿ.ಎಸ್‌.ಯಡಿಯರೂಪ್ಪ ಅವರೇ ಬೀದರ್‌ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇಂದು ಅವರಿಂದಲೇ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ’ ಎಂದು ಹೇಳಿದರು.

‘ಬೆಳಿಗ್ಗೆ 8.30ಕ್ಕೆ ಬೀದರ್‌ನಿಂದ ಬೆಂಗಳೂರಿಗೆ ವಿಮಾನ ಹೊರಡಬೇಕು. ಸಂಜೆ 6 ಗಂಟೆಗೆ ಬೆಂಗಳೂರಿನಿಂದ ಮರಳಿ ಬರುವಂತಾಗಬೇಕು. ಇದರಿಂದ ಕಚೇರಿ ಕೆಲಸಗಳಿಗೆ ಬೆಂಗಳೂರಿಗ ಹೋಗಿ ಬರಲು ಅನುಕೂಲವಾಗಲಿದೆ. ಸಂಬಂಧಪಟ್ಟವರು ಸಮಯ ಬದಲಾವಣೆಗೆ ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಬೀದರ್‌ನಿಂದ ಮುಂಬೈ, ಪುಣೆ ಹಾಗೂ ಅಮೃತಸರಕ್ಕೂ ಹೊಸ ವಿಮಾನಯಾನ ಸೇವೆ ಆರಂಭಿಸಬೇಕು’ ಎಂದು ಟ್ರುಜೆಟ್‌ ಕಂಪನಿ ಅಧಿಕಾರಿಗಳಿಗೆ ಮನವಿ ಮಾಡಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ‘2017ರಲ್ಲಿ ಬೀದರ್‌ ಜಿಲ್ಲೆಯನ್ನು ಸಹ ಉಡಾನ್‌ ಯೋಜನೆಯಲ್ಲಿ ಸೇರಿಸಲಾಗಿದೆ. ಬೀದರ್‌ ಪ್ರವಾಸೋದ್ಯಮಕ್ಕೆ ಸೂಕ್ತ ಸ್ಥಳವಾಗಿದೆ. ರಾಜ್ಯ ಸರ್ಕಾರ, ಕೇಂದ್ರ ಯೋಜನೆಗಳನ್ನು ಇಲ್ಲಿಗೆ ತಂದು ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾದರೆ ಜಿಲ್ಲೆಯ ನಿರುದ್ಯೋಗಿಗಳಿಗೆ ಅನುಕೂಲ ವಾಗಲಿದೆ’ ಎಂದು ತಿಳಿಸಿದರು.

ಶಾಸಕ ರಹೀಂ ಖಾನ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಶಾಸಕರಾದ ರಾಜಶೇಖರ್ ಪಾಟೀಲ, ಈಶ್ವರ ಖಂಡ್ರೆ, ಬಂಡೆಪ್ಪ ಕಾಶೆಂಪೂರ, ಬಿ.ನಾರಾಯಣರಾವ್, ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್‌ ಮಲ್ಕಾಪುರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್‌ ಬುಳ್ಳಾ, ಬೀದರ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಕುಮಾರ ಬರೂರ್, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕೆ.ರತ್ನಪ್ರಭ, ಬಿಜೆಪಿ ಮುಖಂಡರಾದ ಸೂರ್ಯಕಾಂತ ನಾಗರಮಾರಪಳ್ಳಿ, ಇದ್ದರು.

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ ಸಿಂಗ್ ಖರೋಲಾ, ಕೆಎಸ್‍ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಗಂಗಾರಾಮ್ ಬಡೇರಿಯಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಇದ್ದರು.

ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಸ್ವಾಗತಿಸಿದರು. ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT