ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ

ಚುನಾವಣೆ ಆಯೋಗದಿಂದಲೇ ವೃದ್ಧರಿಗೆ ಆಟೊರಿಕ್ಷಾ ವ್ಯವಸ್ಥೆ
Last Updated 29 ಮಾರ್ಚ್ 2023, 16:16 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಜನವರಿ 5ರ ವರೆಗಿನ ಮತದಾರರ ಪಟ್ಟಿ ಸಿದ್ಧಗೊಂಡಿದೆ. ಏಪ್ರಿಲ್‌ 1ಕ್ಕೆ 18 ವರ್ಷ ತುಂಬಲಿರುವ ಯುವಕ, ಯುವತಿಯರಿಗೆ ಏಪ್ರಿಲ್‌ 10ರ ವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 6,96,687 ಪುರುಷರು ಹಾಗೂ 6,51,332 ಮಹಿಳೆಯರು ಸೇರಿ ಒಟ್ಟು 13,48,019 ಮತದಾರರು ಇದ್ದಾರೆ. ಇದರಲ್ಲಿ 22,883 ಅಂಗವಿಕಲರು, 43 ಲೈಂಗಿಕ ಅಲ್ಪಸಂಖ್ಯಾತರು ಹಾಗೂ 80 ವರ್ಷ ಮೇಲ್ಪಟ್ಟ 29,918 ಮತದಾರರು ಇದ್ದಾರೆ ಎಂದು ನಗರದಲ್ಲಿ ಬುಧವಾರ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮತಗಟ್ಟೆಗೆ ಬರಲು ಸಾಧ್ಯವಾಗದ ವಯಸ್ಕರಿಗೆ ಈ ಬಾರಿ ಬಾಲೆಟ್ ಪೇಪರ್‌ ಮೂಲಕ ಮತ ಹಕ್ಕು ಚಲಾಯಿಸುವ ವ್ಯವಸ್ಥೆ ಮಾಡಲಾಗಿದೆ. ವೃದ್ಧರು ಹಾಗೂ ಅಂಗವಿಕಲರಿಗೆ ಅವರು ವಾಸವಾಗಿರುವ ಸ್ಥಳದಿಂದ ಮತಗಟ್ಟೆ ವರೆಗೆ ಬರಲು ಆಟೊರಿಕ್ಷಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

348 ಸೂಕ್ಷ್ಮ ಹಾಗೂ 24 ಅತಿ ಸೂಕ್ಷ್ಮ ಮತಗಟ್ಟೆ ಸೇರಿ ಜಿಲ್ಲೆಯಲ್ಲಿ 1,504 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಒಟ್ಟು 30 ಮಹಿಳಾ ಮತಗಟ್ಟೆ, 35 ವರ್ಷ ಒಳಗಿನವರೇ ಅಧಿಕ ಸಂಖ್ಯೆಯಲ್ಲಿರುವ ಕಡೆ ಆರು ಯುವ ಮತಗಟ್ಟೆ ಹಾಗೂ ಅಂಗವಿಕಲರ ಮತಗಟ್ಟೆ ಸ್ಥಾಪಿಸಲಾಗುವುದು. ಈ ಬಾರಿ ಬಿದರಿ ಕಲೆಗೆ ಪ್ರಾಮುಖ್ಯ ನೀಡಲು ಎರಡು ಬಿದರಿ ಮತಗಟ್ಟೆ ಸ್ಥಾಪಿಸಲಾಗುವುದು. ಅಲ್ಲಿ ಬಿದರಿ ಕಲೆಗಳ ಚಿತ್ರಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕಂಟ್ರೋಲ್‌ ರೂಮ್ ಸ್ಥಾಪಿಸಲಾಗಿದೆ. 38 ಫ್ಲಾಯಿಂಗ್‌ ಸ್ಕ್ವಾಡ್‌ ರಚಿಸಲಾಗಿದೆ. ಈಗಾಗಲೇ 19 ಫ್ಲಾಯಿಂಗ್‌ ಸ್ಕ್ವಾಡ್‌ಗಳು ಕಾರ್ಯನಿರ್ವಹಿಸುತ್ತಿವೆ. 8,800 ಸಿಬ್ಬಂದಿಯನ್ನು ಚುನಾವಣೆ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಚುನಾವಣೆ ಸಂದರ್ಭದಲ್ಲಿ ಅಕ್ರಮ ತಡೆಗಟ್ಟಲು ಬಸವಕಲ್ಯಾಣ, ಔರಾದ್‌ ಹಾಗೂ ಬೀದರ್‌ ದಕ್ಷಿಣದಲ್ಲಿ ತಲಾ 7 ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದೆ. ಭಾಲ್ಕಿ ತಾಲ್ಲೂಕಿನಲ್ಲಿ 4, ಬೀದರ್‌ನಲ್ಲಿ 3 ಹಾಗೂ ಹುಮನಾಬಾದ್‌ ತಾಲ್ಲೂಕಿನಲ್ಲಿ 2 ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಈಗಾಗಲೇ 23 ಅಂತರರಾಜ್ಯ ಚೆಕ್‌ಪೋಸ್ಟ್ ಹಾಗೂ 7 ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 30 ಚೆಕ್‌ಪೋಸ್ಟ್‌ಗಳಲ್ಲಿ 90 ತಂಡಗಳು ಕೆಲಸ ಮಾಡುತ್ತಿವೆ. ಚೆಕ್‌ಪೋಸ್ಟ್‌ಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲಿನ ಸಿಬ್ಬಂದಿಗೆ ಪ್ರತಿಫಲಕ ಸಮವಸ್ತ್ರ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದರು.

ಮಾದರಿ ನೀತಿ ಸಂಹಿತೆ

ರಾಜಕೀಯ ವ್ಯಕ್ತಿಗಳ ಕಟೌಟ್‌, ಬಂಟಿಂಗ್, ಧ್ವಜ ಗೋಡೆ ಬರಹ, ಬ್ಯಾನರ್‌ ತೆರವುಗೊಳಿಸಲಾಗುವುದು. ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡುವವ ವರೆಗೂ ರಾಜಕೀಯ ಪಕ್ಷಕ್ಕೆ ಖರ್ಚು ಹಾಕಲಾಗುವುದು. ನಾಮಪತ್ರ ಸಲ್ಲಿಸಿದ ನಂತರ ವೆಚ್ಚ ಅಭ್ಯರ್ಥಿಯ ಖಾತೆಗೆ ಪರಿಗಣನೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಜಕೀಯ ಪಕ್ಷಗಳು ಸಭೆ, ಸಮಾರಂಭ ಹಾಗೂ ಮೆರವಣಿಗೆಗಳಿಗೆ ಸುವಿಧಾ ಆನ್‌ಲೈನ್‌ ಮೂಲಕ ಅನುಮತಿ ಪಡೆಯಬೇಕು. ಕಾರ್ಯಕ್ರಮದಲ್ಲಿ ಒಂದು ತಾಸು ಮೊದಲು ಪೋಸ್ಟರ್‌ ಅಳವಡಿಸಲು ಅವಕಾಶ ಇದೆ. ವೈಯಕ್ತಿಕ ನಿಂದನೆ ಅಥವಾ ಜಾತಿ ನಿಂದನೆ ಮಾಡುವಂತಿಲ್ಲ. ಸಭೆ ಸಮಾರಂಭ ನಡೆಸಲು ಪೊಲೀಸರ ಅನುಮತಿ ಬೇಕು. ಜನರ ಖಾಸಗಿ ಬದುಕಿಗೆ ಧಕ್ಕೆ ತರುವಂತೆ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು.

ಸೀರೆ, ಕುಕ್ಕರ್, ಗಡಿಯಾರ ಇತ್ಯಾದಿಗಳ ಮೇಲೆ ಭಾವಚಿತ್ರ ಅಥವಾ ಹೆಸರು ಇದ್ದರೆ ಮೊಕದ್ದಮೆ ದಾಖಲಿಸಲಾಗುವುದು. ಇಲ್ಲದಿದ್ದರೆ ಅವುಗಳನ್ನು ಸಾಗಣೆ ಮಾಡುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದರು.

ಸಾರ್ವಜನಿಕರು cVIGIL ಆ್ಯಪ್‌ ಮೂಲಕ ದೂರುಗಳನ್ನು ದಾಖಲಿಸಬಹುದು. 100 ನಿಮಿಷಗಳಲ್ಲಿ ದೂರುಗಳಿಗೆ ಸ್ಪಂದಿಸಲಾಗುವುದು. ಆರ್‌ಒ ಹಾಗೂ ಜಿಲ್ಲಾ ಕಂಟ್ರೋಲ್‌ ರೂಮ್‌ಗೆ ಸಹ ದೂರು ಕೊಡಬಹುದು. ಯಾರೂ ₹ 50 ಸಾವಿರಕ್ಕಿಂತ ಹೆಚ್ಚಿನ ಹಣ ಸಾಗಿಸುವಂತಿಲ್ಲ ಎಂದು ತಿಳಿಸಿದರು.

₹ 70.67 ಲಕ್ಷ ಮೌಲ್ಯದ ತಂಬಾಕು ವಶ

ಬಸವಕಲ್ಯಾಣದಲ್ಲಿ ₹ 70.67 ಲಕ್ಷ ಮೌಲ್ಯದ 199 ಕೆ.ಜಿ ಪಾನ ಮಸಾಲಾ ಹಾಗೂ 220 ಕೆ.ಜಿ ತಂಬಾಕು ಬ್ಯಾಗ್‌ ವಶ ಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧೆಡೆ ₹ 1.92 ಲಕ್ಷ ಮೌಲ್ಯದ 3,411 ಸೀರೆ ಹಾಗೂ ₹ 7.68 ಲಕ್ಷ ಮೌಲ್ಯದ 5,272 ಲೀಟರ್ ಮದ್ಯ ಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್‌.ಎಲ್‌ ತಿಳಿಸಿದರು.

ಹೈದರಾಬಾದ್–ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಮೇಲೆ ಬೀದರ್ ತಾಲ್ಲೂಕಿನ ಭಂಗೂರ್‌ ಚೆಕ್‌ಪೋಸ್ಟ್‌ ಬಳಿ ದಾಖಲೆ ಇಲ್ಲದ ₹ 9.5 ಲಕ್ಷ ನಗದು ವಶ ಪಡಿಸಿಕೊಳ್ಳಲಾಗಿದೆ. ವ್ಯಾಪಾರಿಗಳು ಇದ್ದರೆ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ವಶಪಡಿಸಿ ಕೊಂಡ ಹಣವನ್ನು ಖಜಾನೆಯಲ್ಲಿ ಇಡಲಾಗುತ್ತದೆ. ದಾಖಲೆಗಳನ್ನು ಒದಗಿಸಿದರೆ ಪರಿಶೀಲಿಸಿ ಮರಳಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿ ಕಡಿಮೆ ಮತದಾನವಾದ ಮತಗಟ್ಟೆಗಳನ್ನು ಗುರುತಿಸಿ ಆಯಾ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ನೀತಿ ಸಂಹಿತೆ ಜಾರಿ, ಕಟೌಟ್, ಬ್ಯಾನರ್ ತೆರವು

ಔರಾದ್ : ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಬುಧವಾರ ಪಟ್ಟಣದ ವಿವಿಧೆಡೆಯ ಸರ್ಕಾರಿ ಹಾಗೂ ರಾಜಕಾರಣಿಗಳ ಬ್ಯಾನರ್ ತೆರವು ಮಾಡಲಾಯಿತು.
ಪಟ್ಟಣದ ಉದಗಿರ್ ರಸ್ತೆಯಲ್ಲಿ ಅಹಿಲ್ಯಾಬಾಯಿ ಹೊಳ್ಳಕರ್ ಸಮುದಾಯ ಭವನದ ಭೂಮಿ‌ ಪೂಜೆ ಕಾರ್ಯಕ್ರಮದ ವೇದಿಕೆ ಸುತ್ತ ಹಾಕಲಾದ ರಾಜಕಾಣಿಗಳ ಭಾವಚಿತ್ರ ತೆರವು ಮಾಡಲಾಯಿತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಪೊಲೀಸರು ವೇದಿಕೆ ಬಳಿ ಬಂದು ತಪಾಸಣೆ ನಡೆಸಿದರು. ಇದು ರಾಜಕೀಯ ಕಾರ್ಯಕ್ರಮ ಅಲ್ಲ. ಇದು ಒಂದು ಸಮಾಜದ ಧಾರ್ಮಿಕ ಕಾರ್ಯಕ್ರಮ ಎಂದು ಸಂಘಟಕರು ಪೊಲೀಸರಿಗೆ ಮನವರಿಕೆ ಮಾಡಿದರು. ಸಮಾಜದ ಮುಖಂಡರು ಸೇರಿ ಕಾರ್ಯಕ್ರಮ ಮಾಡಿ ಮುಗಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT