ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಡಿಜಿಟಲ್‌ ಖಾತೆಗಳ ಹಂಚಿಕೆ ಆರೋಪ: ಏಳು ಗ್ರಾ.ಪಂ ಪಿಡಿಒ ವಿರುದ್ಧ ತನಿಖೆ

Published 27 ಫೆಬ್ರುವರಿ 2024, 7:00 IST
Last Updated 27 ಫೆಬ್ರುವರಿ 2024, 7:00 IST
ಅಕ್ಷರ ಗಾತ್ರ

ಬೀದರ್‌: ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಡಿಜಿಟಲ್‌ ಖಾತೆ ಹಂಚಿಕೆ ಮಾಡಿಕೊಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವಿರುದ್ಧ ತನಿಖೆ ಕೈಗೊಳ್ಳಲಾಗಿದೆ.

ಅಕ್ರಮವಾಗಿ ಡಿಜಿಟಲ್‌ ಖಾತೆಗಳನ್ನು ಹಂಚಿಕೆ ಮಾಡಿರುವ ಕುರಿತು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಕುರಿತು ತನಿಖೆ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಬೀದರ್‌ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಈಗ ತನಿಖೆ ಕೈಗೊಳ್ಳಲಾಗಿದೆ. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗೆ ತನಿಖೆಗೆ ಹೊಣೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ. ಇದನ್ನು ಜಿಲ್ಲಾ ಪಂಚಾಯಿತಿ ‘ಪ್ರಜಾವಾಣಿ’ಗೆ ದೃಢಪಡಿಸಿದೆ.

ಬೀದರ್‌ ತಾಲ್ಲೂಕಿನ ಗಾದಗಿ, ಮರಕಲ್‌, ಅಮಲಾಪುರ, ಚಿಟ್ಟಾ, ಯದಲಾಪುರ, ಕಮಠಾಣ ಹಾಗೂ ಆಣದೂರ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಅಕ್ರಮವಾಗಿ ಡಿಜಿಟಲ್‌ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಆಗಿದ್ದೇನು?: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಫಲವತ್ತಾದ ಕೃಷಿ ಜಮೀನಿನಲ್ಲಿ ಖಾಸಗಿ ಸರ್ವೇ ನಂಬರ್‌ಗಳಲ್ಲಿ ಅನಧಿಕೃತವಾಗಿ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಕಾನೂನಿಗೆ ವಿರುದ್ಧವಾಗಿ 9, 11ಎ, 11ಬಿ ಡಿಜಿಟಲ್‌ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂಬ ಆರೋಪವಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಹಣ ಗಳಿಸಿದ್ದಾರೆ ಎಂದು ಸಾರ್ವಜನಿಕರು, ಸಂಘ ಸಂಸ್ಥೆಗಳು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಇದು ಇಷ್ಟಕ್ಕೆ ನಿಂತಿಲ್ಲ. ಈಗಲೂ ಸತತವಾಗಿ ದೂರುಗಳು ಬರುತ್ತಲೇ ಇವೆ.

‘ಪಿಡಿಒಗಳ ವಿರುದ್ಧ ಸತತವಾಗಿ ಅನೇಕ ದೂರುಗಳು ಬರುತ್ತಲೇ ಇವೆ. ಅವುಗಳ ಸ್ವರೂಪ ನೋಡಿಕೊಂಡು ಪರಿಶೀಲಿಸಲಾಗುತ್ತಿದೆ’ ಎಂದು ಸಿಇಒ ಡಾ. ಗಿರೀಶ ಬದೋಲೆ ತಿಳಿಸಿದ್ದಾರೆ.

ಸಾಕಷ್ಟು ದೂರುಗಳು ಬರುತ್ತಿರುವುದರಿಂದ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಕಂದಾಯ ಇಲಾಖೆಯ ಲೆಕ್ಕ ಪರಿಶೋಧಕರು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿ, ವರದಿ ಸಲ್ಲಿಸಬೇಕು. ಪಿಡಿಒಗಳಿಂದ ಲಿಖಿತ ರೂಪದಲ್ಲಿ ಹೇಳಿಕೆ ಪಡೆದುಕೊಳ್ಳುವಂತೆಯೂ ಸೂಚಿಸಲಾಗಿದೆ.

ಸಿಇಒ ಏನು ಹೇಳ್ತಾರೆ?

‘ಬೀದರ್‌ ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿಗಳ ಪಿಡಿಒಗಳು ಕಾನೂನುಬಾಹಿರವಾಗಿ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಇನ್ನೂ ತನಿಖಾ ವರದಿ ಕೈಸೇರಿಲ್ಲ. ಅದು ಕೈಸೇರಿದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ವರ್ಗಾವಣೆಗೆ ತೀವ್ರ ಲಾಬಿ

ಬೀದರ್‌ ನಗರ ಅತಿ ವೇಗವಾಗಿ ಬೆಳೆಯುತ್ತಿದೆ. ಅಷ್ಟೇ ವೇಗದಲ್ಲಿ ರಿಯಲ್‌ ಎಸ್ಟೇಟ್‌ ಕೂಡ ನಡೆಯುತ್ತಿದೆ. ನಗರದ ಸುತ್ತಮುತ್ತಲಿನ ಜಮೀನುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹೊಸ ಹೊಸ ಲೇಔಟ್‌ಗಳು ತಲೆ ಎತ್ತುತ್ತಿವೆ.

ನಗರಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿಗಳ ವ್ಯಾಪ್ತಿಗೆ ಸೇರಿದ ಜಮೀನು ಖರೀದಿಸಿ ಅಲ್ಲೆಲ್ಲಾ ಲೇಔಟ್‌ಗಳನ್ನು ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ. ಹಣದಾಸೆಗೆ ಬೇಕಾಬಿಟ್ಟಿ ಡಿಜಿಟಲ್‌ ಖಾತೆಗಳನ್ನು ಹಂಚಿಕೆ ಮಾಡಿ ಭಾರಿ ಪ್ರಮಾಣದಲ್ಲಿ ಹಣ ಗಳಿಸುವ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದಿವೆ. ಇದಕ್ಕಾಗಿಯೇ ಕೆಲವು ಪಿಡಿಒಗಳು ಹಣ ಕೊಟ್ಟು ನಗರದ ಸುತ್ತಮುತ್ತಲಿನ ಪಂಚಾಯಿತಿಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ‘ಪಿಡಿಒಗಳಿಗೆ ಡಿಜಿಟಲ್‌ ಖಾತೆ ಕೊಡುವ ಅಧಿಕಾರ ಸಿಕ್ಕ ನಂತರ ಮನಬಂದಂತೆ ವರ್ತಿಸುತ್ತಿದ್ದಾರೆ. ಹಣದಾಸೆಗೆ ಕಾನೂನುಬಾಹಿರ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಲಗಾಮು ಹಾಕದಿದ್ದಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಯಾಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಯಾವ್ಯಾವ ಗ್ರಾಮ ಪಂಚಾಯಿತಿ ಪಿಡಿಒಗಳ ತನಿಖೆ?

  • ಗಾದಗಿ

  • ಮರಕಲ್‌

  • ಅಮಲಾಪುರ

  • ಚಿಟ್ಟಾ

  • ಯದಲಾಪುರ

  • ಕಮಠಾಣ

  • ಆಣದೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT