ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಅಪಮಾನಕ್ಕೆ ಭುಗಿಲೆದ್ದ ಆಕ್ರೋಶ

ಬಾಬಾ ಸಾಹೇಬರಿಗೆ ಅವಮಾನ ಎಸಗಿದವರಿಗೆ ನೇಣಿಗೇರಿಸಲು ಆಗ್ರಹ; ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆತಡೆ
Published 24 ಜನವರಿ 2024, 15:30 IST
Last Updated 24 ಜನವರಿ 2024, 15:30 IST
ಅಕ್ಷರ ಗಾತ್ರ

ಬೀದರ್‌: ಕಲಬುರಗಿಯ ಕೋಟನೂರಿನಲ್ಲಿ ಡಾ.ಬಿ.ಆರ್‌ ಅಂಬೇಡ್ಕರ್‌ ಅವರ ಪುತ್ಥಳಿಗೆ ಅಪಮಾನ ಮಾಡಿರುವ ಕ್ರಮಕ್ಕೆ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ನಗರದಲ್ಲಿ ಬುಧವಾರ ಪ್ರತಿಭಟಿಸಿದರು.

ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರಿನ ಮುಖ್ಯರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ರಸ್ತೆಯ ಮಧ್ಯದಲ್ಲಿ ಟೈರ್‌ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಘೋಷಣೆಗಳನ್ನು ಕೂಗಿದರು. ಮುಖ್ಯಮಂತ್ರಿಯವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿದರು.

ನಡು ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತು. ನಗರದ ಭಗತ್‌ ಸಿಂಗ್‌ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಮೋಹನ್‌ ಮಾರ್ಕೆಟ್‌ ಕಡೆಯಿಂದ ಬರುವ ವಾಹನಗಳಿಗೆ ಸಂಚಾರ ಪೊಲೀಸರು ಅನ್ಯ ಮಾರ್ಗಗಳಲ್ಲಿ ಸಂಚರಿಸಲು ವ್ಯವಸ್ಥೆ ಮಾಡಿದರು. ಇದರಿಂದಾಗಿ ವಾಹನ ಸವಾರರು ಪರದಾಡಿದರು.

ಒಕ್ಕೂಟದ ಪ್ರಮುಖರಾದ ಬಾಬು ಪಾಸ್ವಾನ, ಅನೀಲಕುಮಾರ ಬೇಲ್ದಾರ, ಮಾರುತಿ ಬೌದ್ಧೆ, ಅಮೃತರಾವ ಚಿಮಕೋಡೆ ಮಾತನಾಡಿ, ಸಮಾಜಘಾತುಕ ಶಕ್ತಿಗಳು ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪುತ್ಥಳಿಗೆ ಅಪಮಾನ ಮಾಡಿ ಮಾನವ ಕುಲಕ್ಕೆ ಅವಮಾನ ಎಸಗಿದ್ದಾರೆ. ಅಸಂಖ್ಯ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದಾರೆ. ಕೃತ್ಯ ಎಸಗಿದವರನ್ನು ನೇಣಿಗೇರಿಸಬೇಕು. ಹೀಗಾದಾಗ ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಸಂಭವಿಸುವುದಿಲ್ಲ ಎಂದರು.

ಪದೇ ಪದೇ ಮಹಾತ್ಮರ ಪುತ್ಥಳಿಗೆ ಅಪಮಾನ ಮಾಡಲಾಗುತ್ತಿದೆ. ಬಸವಣ್ಣ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪುತ್ಥಳಿಗಳನ್ನೇ ಗುರಿಯಾಗಿರಿಸಿ ಈ ರೀತಿಯ ದುಷ್ಕೃತ್ಯ ಎಸಗಲಾಗುತ್ತಿದೆ. ಮಹಾತ್ಮರ ಪುತ್ಥಳಿಗಳಿಗೆ ರಕ್ಷಣೆ ಒದಗಿಸಬೇಕು. ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಹಕ್ಕೊತ್ತಾಯ ಮಾಡಿದರು.

ಒಕ್ಕೂಟದ ಪ್ರಮುಖರಾದ ವಿಠಲದಾಸ ಪ್ಯಾಗೆ, ರಾಜಕುಮಾರ ಬನ್ನೆ, ರಮೇಶ ಡಾಕುಳಗಿ, ರಾಜಕುಮಾರ ಮೂಲಭಾರತಿ, ಶ್ರೀಪತರಾವ ದೀನೆ, ಅಂಬಾದಾಸ ಗಾಯಕವಾಡಿ, ಸಂದೀಪ ಕಾಂಟೆ, ಶಿವಕುಮಾರ ನೀಲಿಕಟ್ಟಿ, ಶಾಲಿವಾನ ಬಡಿಗೇರ, ಬಾಬುರಾವ ಮಿಟಾರೆ, ಪ್ರದೀಪ ನಾಟೇಕರ್‌, ಧನರಾಜ ಮುಸ್ತಾಪುರ, ರಾಹುಲ್‌ ಡಾಂಗೆ, ಸತೀಶ ಲಕ್ಕಿ, ಗೋಪಾಲ ದೊಡ್ಡಿ, ಅಮೃತ್‌ ಮುತ್ತಂಗಿಕರ, ಪವನ ಮಿಟಾರೆ, ಅಂಬರೀಷ್‌, ಮೋಹನ ಡಾಂಗೆ, ಬಸವರಾಜ ಸಾಗರ, ವಿಷ್ಣುವರ್ಧನ ವಾಲದೊಡ್ಡಿ, ಪ್ರೇಮಕುಮಾರ, ಅಮರ ಪೂಜಾರಿ ಇತರರಿದ್ದರು.

ಬೀದರ್‌ ಜಿಲ್ಲಾಧಿಕಾರಿ ಕಚೇರಿ ಎದುರು ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು
ಬೀದರ್‌ ಜಿಲ್ಲಾಧಿಕಾರಿ ಕಚೇರಿ ಎದುರು ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು

‘ದೇಶ ವಿರೋಧಿಗಳ ಮಟ್ಟ ಹಾಕಿ’

‘ಹುಮನಾಬಾದ್‌ ಪಟ್ಟಣದಲ್ಲಿ ದಲಿತ ವಿದ್ಯಾರ್ಥಿಯಿಂದ ಒತ್ತಾಯಪೂರ್ವಕವಾಗಿ ‘ಜೈ ಶ್ರೀರಾಮ್‌’ ಎಂದು ಹೇಳಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಲಾಗಿದೆ. ಕೋಮುವಾದಿಗಳ ಈ ರೀತಿಯ ವರ್ತನೆ ದೇಶಕ್ಕೆ ಮಾರಕ. ಇಂತಹ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ದೇಶ ವಿರೋಧಿಗಳನ್ನು ಮಟ್ಟ ಹಾಕಬೇಕು. ಸಮ ಸಮಾಜ ಸರ್ವರಿಗೂ ಸಮಾನತೆಯ ಅವಕಾಶಗಳನ್ನು ಕೊಟ್ಟಿರುವ ಸಂವಿಧಾನದ ಅಡಿಯಲ್ಲಿ ಈ ದೇಶ ನಡೆಯುತ್ತಿದೆ. ಆದರೆ ಕೋಮುವಾದಿ ಶಕ್ತಿಗಳು ಇದನ್ನು ಸಹಿಸುತ್ತಿಲ್ಲ’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT