ಶನಿವಾರ, ಜೂನ್ 25, 2022
25 °C
ಗೋರ್ಟಾ (ಬಿ): ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮಕ್ಕೆ ಚಾಲನೆ

ಸ್ವಾತಂತ್ರ್ಯ ಹೋರಾಟಗಾರರ ಆಶಯ ಪಾಲಿಸಿ: ಭೀಮಾಶಂಕರ ಬಿರಾದಾರ

ಪ್ರಜಾವಾಣಿ ವಾತೆ೯ Updated:

ಅಕ್ಷರ ಗಾತ್ರ : | |

Prajavani

ಗೋರ್ಟಾ (ಹುಲಸೂರು): ದೇಶದ ಪ್ರಜೆಗಳು ದಾಸ್ಯದಿಂದ ಮುಕ್ತರಾಗಿ ಸ್ವತಂತ್ರ ಜೀವನ ನಡೆಸಬೇಕು ಎಂಬುದು ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ಅವರ ಆಶಯದಂತೆ ಎಲ್ಲರೂ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅಕ್ಕಮಹಾದೇವಿ ಪದವಿ ಕಾಲೇಜಿನ ಉಪನ್ಯಾಸಕ ಭೀಮಾಶಂಕರ ಬಿರಾದಾರ ತಿಳಿಸಿದರು.

ತಾಲ್ಲೂಕಿನ ಗೋರ್ಟಾ (ಬಿ) ಗ್ರಾಮದಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಅಮೃತಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಸ್ವಾತಂತ್ರ್ಯ ಪಡೆದ ಸಂಭ್ರಮದಲ್ಲಿದ್ದಾಗ ಇಂದಿನ ಕಲ್ಯಾಣ ಕರ್ನಾಟಕ ನಿಜಾಮರ ಅಧೀನದಲ್ಲಿತ್ತು. ಭಾರತದ ಒಕ್ಕೂಟಕ್ಕೆ ಸೇರದೆ ಪ್ರತ್ಯೇಕ ಇಲ್ಲವೇ ಪಾಕಿಸ್ತಾನಕ್ಕೆ ಸೇರುವ ಕುತಂತ್ರ ಮಾಡುತ್ತಿದ್ದ ನಿಜಾಮರ ವಿರುದ್ಧ ಗೋರ್ಟಾ (ಬಿ) ಗ್ರಾಮದ ವೀರರು ಬಂಡೆದ್ದರು. ನಿಜಾಮರಿಗೆ ಪ್ರಬಲ ಪ್ರತಿರೋಧ ಒಡ್ಡಿ ತಮ್ಮ ಬಲಿದಾನ ಮಾಡಿದರು ಎಂದು ಸ್ಮರಿಸಿದರು.

ಶಾಸಕ ಶರಣು ಸಲಗರ ಮಾತನಾಡಿ,ಗೋರ್ಟಾ (ಬಿ) ಗ್ರಾಮ ನಾಡಿಗೆ ವೀರಪುತ್ರರನ್ನು ನೀಡಿದೆ. ನಾವು ಉತ್ತಮ ಪ್ರಜೆಗಳಾಗಿ ಬದುಕಿದಾಗ ಮಾತ್ರ ಅವರ ಕನಸು ನನಸಾಗಲಿದೆ. ಅದಕ್ಕಾಗಿ ನಾವೆಲ್ಲ ಪ್ರತಿಜ್ಞೆ ಮಾಡಬೇಕು ಎಂದು ತಿಳಿಸಿದರು.

ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋಹಿಣಾಕ್ಷ ಉಪನ್ಯಾಸ ನೀಡಿದರು. ಸ್ವಾತಂತ್ರ್ಯ ಹೋರಾಟ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಇದೇ ವೇಳೆ ರಾಜಶೇಖರ ಶಿವಾಚಾರ್ಯರ ‘ಸ್ವಾತಂತ್ರ್ಯ ಹೋರಾಟದಲ್ಲಿ ಗೋರ್ಟಾ ಗ್ರಾಮದ ಪಾತ್ರ’ ಕೃತಿ ಬಿಡುಗಡೆ ಮಾಡಲಾಯಿತು.

ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಚಳಂಬದ ನಾಗಭೂಷಣ ಶಿವಯೋಗಿ ಮಠದ ಪ್ರಣವಾನಂದ ಸ್ವಾಮೀಜಿ, ಗೋರ್ಟಾ (ಬಿ) ಗ್ರಾಮದ ಲಿಂಗಾಯತ ಮಹಾಮಠದ ಪ್ರಭುದೇವರು, ಬೇಮಳಖೇಡಾ ಸಂಗೀತ ರುದ್ದೇಶ್ವರ ಮಂದಿರದ ರಾಜಶೇಖರ ಶಿವಾಚಾರ್ಯರು ಇದ್ದರು.

ಗಮನ ಸೆಳೆದ ಮೆರವಣಿಗೆ: ಗ್ರಾಮದ ಲಕ್ಷ್ಮಿಮಂದಿರದಿಂದ ಭಾರತ ಮಾತೆಯ ಭಾವಚಿತ್ರದ ಮೆರವಣಿಗೆ ಆರಂಭ ಗೊಂಡು ಬಸವಮಂಟಪ  ತಲುಪಿತು. ಕಲಾತಂಡಗಳ ನೃತ್ಯ ಗಮನ ಸೆಳದವು.

ತಹಶೀಲ್ದಾರ್‌ ಶಿವಾನಂದ ಮೇತ್ರೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು, ಗೋರ್ಟಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸರಸ್ವತಿ ಪಟ್ನೆ, ಕಸಾಪ ತಾಲ್ಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ತಾಲ್ಲೂಕುಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರಾಜ ಖಫಲೆ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜಪ್ಪ ಹೊನ್ನಾಡೆ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮನಿಶಾ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.