ಗುರುವಾರ , ಜನವರಿ 28, 2021
25 °C
ಅಭಿವೃದ್ಧಿಗಾಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಚರ್ಚೆ

₹90 ಲಕ್ಷ ಅನುದಾನ ಬಳಕೆಗೆ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ರಾಜ್ಯ ಹಣಕಾಸು ಆಯೋಗ ಅನಿರ್ಭಂಧಿತ ಯೋಜನೆಯಡಿ ಮಂಜೂರಾದ ₹90 ಲಕ್ಷ ಅನುದಾನ ಬಳಕೆಗೆ ಕ್ರಿಯಾಯೋಜನೆ ರೂಪಿಸುವ ಕುರಿತು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಅನುಮೋದನೆ ನೀಡಿತು.

ತಾಲ್ಲೂಕು ಪಂಚಾಯಿತಿಯ ಪ್ರಥಮ ಸಾಮಾನ್ಯ ಸಭೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ವಿಷಯಗಳು ಚರ್ಚೆಯಾದವು. ‘ಟೀಕೆ, ಟಿಪ್ಪಣಿಯಲ್ಲೇ ನಾಲ್ಕು ವರ್ಷ ಕಳೆದಿವೆ. ಕೋವಿಡ್ ಕಾರಣದಿಂದ ಸರ್ಕಾರದಿಂದ ಅನುದಾನ ಬಂದಿಲ್ಲ. ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದ ಅನುದಾನ ಬಳಸಿಕೊಂಡು ಸಾಧ್ಯವಿರುವಷ್ಟು ಅಭಿವೃದ್ಧಿ ಕಾಮಗಾರಿ ಮಾಡೋಣ’ ಎಂದು ಸದಸ್ಯರು ಒಮ್ಮತ ವ್ಯಕ್ತಪಡಿಸಿದರು.

‘ಠಾಣಾಕುಶನೂರ್ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಪ್ರಾರಂಭಗೊಂಡು 4 ವರ್ಷಗಳಾಗಿವೆ. ಶಾಲೆ ಸುಧಾರಣೆಗೆ ಮತ್ತು ಶಿಕ್ಷಕರ ನೇಮಕಾತಿ ಮಾಡದಿರುವುದರಿಂದ ಮಕ್ಕಳ ಅಭ್ಯಾಸಕ್ಕೆ ತೊಂದರೆ ಆಗುತ್ತಿದೆ’ ಎಂದು ಅಧ್ಯಕ್ಷ ಗಿರೀಶ ಧನರಾಜ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕಾಂತ ಹಣಮಶೆಟ್ಟೆ ಮಾತನಾಡಿ, ‘ಶಾಲೆಗೆ ಪ್ರತ್ಯೇಕ ಡಾಯಸ್ ಕೋಡ್ ಬಂದಿಲ್ಲ. ಇದರಿಂದ ಶಾಲೆ ಸುಧಾರಣೆ ಮತ್ತು ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆ ಆಗುತ್ತಿದೆ. ಈ ಬಗ್ಗೆ ಶಿಕ್ಷಣ ಆಯುಕ್ತರಿಗೆ ಪತ್ರ ಬರೆಯಲಾಗಿದೆ’ ಎಂದರು.

‘ಶಾಲೆಗೆ ಆವರಣ ಗೋಡೆ ಮತ್ತು ಪ್ರತ್ಯೇಕ ಕೊಳವೆ ಬಾವಿ ಹೊಂದಿದ ಶಾಲೆಗಳ ಆವರಣದಲ್ಲಿ ತರಕಾರಿ ಬೆಳೆಯಲು ಸೂಚಿಸಲಾಗಿದೆ. ಅಂತಹ ಶಾಲೆಗಳ ಪಟ್ಟಿಯನ್ನು ಸಲ್ಲಿಸಬೇಕು’ ಎಂದು ತಾ.ಪಂ. ಕಾರ್ಯ ನಿರ್ವಾಹಕಾಧಿಕಾರಿ ಮಾಣಿಕರಾವ ಪಾಟೀಲ ಸೂಚಿಸಿದರು.

‘ಜಲಜೀವನ ಮಿಷನ್ ಯೋಜನೆಯಡಿ ಕಮಲನಗರದ ಹೋಬಳಿಯಲ್ಲಿ 6 ಕಾಮಗಾರಿಗೆ ₹3.90 ಕೋಟಿ ಮತ್ತು ಠಾಣಾಕುಶನೂರ್ ಹೋಬಳಿಯಲ್ಲಿ 5 ಕಾಮಗಾರಿಗೆ ₹ 3.40 ಕೋಟಿ ಅನುದಾನ ಬಿಡುಗಡೆಯಾಗಿದೆ. ಮೂರು ಕಾಮಗಾರಿಗಳ ಟೆಂಡರ್ ಆಗಿದ್ದು, ಉಳಿದ ಕಾಮಗಾರಿ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ’ ಎಂದರು.

‘ಕಮಲನಗರ ತಾಲ್ಲೂಕಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮತ್ತು 6 ಪ್ರಾಥಮಿಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ಸಮುದಾಯ ಆರೋಗ್ಯ ಕೇಂದ್ರ 100 ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. 5 ಎಕರೆ ನಿವೇಶನದ ಅವಶ್ಯಕತೆಯಿದ್ದು, ಈ ಕುರಿತು ಸಹಾಯಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಶರಣಯ್ಯ ಸ್ವಾಮಿ ಸಭೆಗೆ ತಿಳಿಸಿದರು.

‘ಮುಖ್ಯಮಂತ್ರಿ ಪರಿಹಾರ ನಿಧಿಯಡಿ ₹90 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಸದಸ್ಯರು ಎರಡು ದಿನಗಳಲ್ಲಿ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು’ ಎಂದು ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ಮಾಣಿಕರಾವ ಪಾಟೀಲ ತಿಳಿಸಿದರು.

‘ಮಾಳೇಗಾಂವ ಗ್ರಾಮದಲ್ಲಿ ರಸ್ತೆ ಮಧ್ಯೆದಲ್ಲಿ ವಿದ್ಯತ್ ಕಂಬಗಳಿವೆ. ಡೋಗರಗಾಂವ ಕ್ರಾಸ್ ಬಳಿ ಕಂಬ ಅಳವಡಿಸಲಾಗಿದೆ. ಆದರೆ, ವಿದ್ಯುತ್ ಸಂಪರ್ಕ ನೀಡಿಲ್ಲ’ ಎಂದು ಚಿಮ್ಮೇಗಾಂವ ಸದಸ್ಯ ಪ್ರಕಾಶ ಜಾಧವ ಅವರ ಪ್ರಶ್ನೆಗೆ, ‘ಈ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ಕ್ಯಗೊಳ್ಳಲಾಗುತ್ತದೆ’ ಎಂದು ಜೆಸ್ಕಾಂ ಎಇಇ ತಿಳಿಸಿದರು.

‘ಮುಂಗಾರು ಹಂಗಾಮಿನಲ್ಲಿ ಕಳಪೆ ಬೀಜ ನೀಡಿದ ಕಂಪನಿಗಳು ಪ್ರತಿ ಚೀಲ ಒಂದಕ್ಕೆ ₹3000 ಪರಿಹಾರ ರೈತರಿಗೆ ನೀಡಿವೆ. ಅತಿವೃಷ್ಟಿ ಮಳೆಯಿಂದ ಸೋಯಾ, ತೊಗರಿ ಬೆಳೆ ಹಾನಿಯಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ ಡಿ ಮಾಜೀದ್ ತಿಳಿಸಿದರು.

ಉಪಾಧ್ಯಕ್ಷೆ ಕಸ್ತೂರಬಾಯಿ ಬಿರಾದಾರ, ಸದಸ್ಯರುಗಳಾದ ಪ್ರಕಾಶ, ಜೈಶ್ರೀ ಪಾಟೀಲ, ರಾಜಕುಮಾರ ಉದಗೀರೆ, ಶಿವಕುಮಾರ ಪುರಾಣಿಕ, ಶಿವಕಾಂತ ಹಣಮಶೇಟ್ಟೆ, ಸುಭಾಷ, ಹಣಮಶೆಟ್ಟೆ, ಸೈಯದ್ ಖುರೈಸಿ, ರಾಜಶೇಖರ, ಸಿಡಿಪಿಒ ಶಂಭುಲಿಂಗ ಹಿರೇಮಠ, ಸಂಗೀತಾ, ವಿಜಯಲಕ್ಷ್ಮಿ ಇದ್ದರು.

ಸಹಾಯಕ ನಿರ್ದೇಶಕ ಶಿವಾನಂದ ಔರಾದೆ ಸ್ವಾಗತಿಸಿದರು. ಅನೀಲಕುಮಾರ ಪಾಟೀಲ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು