ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಶರಣರಂತೆ ಪ್ರಜ್ವಲ್‌ ಬಂಧಿಸಿ: ಮಾರಸಂದ್ರ ಮುನಿಯಪ್ಪ

ಮುಖ್ಯಮಂತ್ರಿ ಪ್ರಧಾನಿಗೆ ಪತ್ರ ಬರೆಯುವುದರ ಬದಲು ಕ್ರಮ ಜರುಗಿಸಲಿ: ಮುನಿಯಪ್ಪ
Published 4 ಮೇ 2024, 16:29 IST
Last Updated 4 ಮೇ 2024, 16:29 IST
ಅಕ್ಷರ ಗಾತ್ರ

ಬೀದರ್‌: ‘ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಂಧಿಸಿರುವಂತೆ ಹಾಸನದ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಬೇಕು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.

‘ಪ್ರಜ್ವಲ್‌ ರೇವಣ್ಣನಿಗೆ ಸಂಬಂಧಿಸಿದ ಪೆನ್‌ಡ್ರೈವ್‌, ಸಿ.ಡಿಗಳು ಎಲ್ಲ ಕಡೆಗಳಲ್ಲಿ ಓಡಾಡುತ್ತಿರುವೆ. ಮಾಜಿಪ್ರಧಾನಿ ಎಚ್‌.ಡಿ.ದೇವೇಗೌಡರ ಮಗ, ಮೊಮ್ಮಗನ ಸಿ.ಡಿಗಳಿಂದ ದೇಶದ ಮಾನ, ಮರ್ಯಾದೆ ಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕುರಿತು ಪ್ರಧಾನಿಗೆ ಪತ್ರ ಬರೆಯುವುದರ ಬದಲು ಬಂಧಿಸಬೇಕು’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಭ್ರಷ್ಟರೆಂದು ಬಿಜೆಪಿಯವರು, ಬಿಜೆಪಿಯವರು ಭ್ರಷ್ಟರೆಂದು ಕಾಂಗ್ರೆಸ್‌ನವರು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ಸುದೀರ್ಘ ಅವಧಿ ಈ ದೇಶ ಆಳಿದೆ. ಬಹುಜನರನ್ನು ಮತ ಬ್ಯಾಂಕ್‌ ಆಗಿ ಉಪಯೋಗಿಸಿಕೊಂಡಿದೆ. ಮನುವಾದಿ ಬಿಜೆಪಿ ಸರ್ಕಾರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದೆ. ಸಂಸತ್ತು, ವಿಧಾನಸಭೆ ಮಾತ್ರ ಖಾಸಗೀಕರಣ ಆಗುವುದು ಉಳಿದಿದೆ. ಶೇ 90ರಷ್ಟು ದೇಶದ ಆಸ್ತಿ ಖಾಸಗೀಕರಣ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ದೇಶದ ಶೇ 85ರಷ್ಟು ಯುವಕರಿಗೆ ಉದ್ಯೋಗಗಳಿಲ್ಲ. ಯುವಕರು, ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರ ಬಗ್ಗೆ ಚರ್ಚೆಗಳಾಗುತ್ತಿಲ್ಲ. ಚುನಾವಣಾ ಬಾಂಡ್‌ ಅಕ್ರಮದಲ್ಲಿ ಎಲ್ಲ ಪಕ್ಷಗಳು ಶಾಮಿಲಾಗಿವೆ. ಬಿಎಸ್‌ಪಿ ಅದರಲ್ಲಿ ಇಲ್ಲ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರನ್ನು ಇನ್ನಷ್ಟು ಬಡವರಾಗಿಸುವ ಹುನ್ನಾರ. ಈಗಲೂ ಅನೇಕ ಗ್ರಾಮಗಳಲ್ಲಿ ಪರಿಶಿಷ್ಟ ಅಂತ್ಯಸಂಸ್ಕಾರಕ್ಕೆ ಸ್ಮಶಾನಭೂಮಿ ಇಲ್ಲ. ಗ್ಯಾರಂಟಿಯಲ್ಲಿ ಪರಿಶಿಷ್ಟರಿಗೆ ಜಮೀನು ಕೊಡುವುದು ಕೂಡ ಯಾಕೆ ಸೇರಿಸಲಿಲ್ಲ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷ ಸುಳ್ಳು ಹೇಳುವುದರಲ್ಲೇ ಕಾಲ ಕಳೆದಿದ್ದಾರೆ. ಈ ದೇಶದ 35 ಕೋಟಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಹಿಂದೂಗಳಲ್ಲವೇ? ಎಸ್ಸಿ/ಎಸ್ಟಿಗಳ ಮೇಲೆ ದೌರ್ಜನ್ಯ ನಡೆದಾಗ ಬಿಜೆಪಿಯವರು ಒಂದು ಸಲವೂ ಧ್ವನಿ ಎತ್ತಿಲ್ಲ’ ಎಂದು ಆರೋಪಿಸಿದರು.

‘ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಂದೇ ಸಮುದಾಯದ ಬಲಾಢ್ಯರು ರಾಷ್ಟ್ರೀಯ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿ ಸಾಮಾನ್ಯ ಕಾರ್ಯಕರ್ತ ಪುಟ್ಟರಾಜ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ 12 ಲಕ್ಷ ಬಹುಜನ ಮತದಾರರಿದ್ದು, ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ರಾಜ್ಯ ಸಂಯೋಜಕ ಎಂ. ಗೋಪಿನಾಥ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌. ಮುನಿಯಪ್ಪ, ಬೀದರ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪುಟ್ಟರಾಜ, ರಾಜ್ಯ ಕಾರ್ಯದರ್ಶಿ ದತ್ತು ಸೂರ್ಯವಂಶಿ, ಜಿಲ್ಲಾಧ್ಯಕ್ಷ ಕಪಿಲ್‌ ಗೋಡಬಾಲೆ, ಜಾಫರ್‌, ಉಮೇಶ್‌ ಗುತ್ತೇದಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT