ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಶಾ ಕಾರ್ಯಕರ್ತೆಯರಿಗೆ ನೌಕರರ ಸ್ಥಾನಮಾನ ಕೊಡಿ

ಪ್ರಥಮ ಬೀದರ್‌ ಜಿಲ್ಲಾ ಸಮ್ಮೇಳನದಲ್ಲಿ ಆಶಾ ಸಂಘದ ರಾಜ್ಯ ಸಮಿತಿ ಸದಸ್ಯೆ ಶಾಂತಾ ಆಗ್ರಹ
Published : 13 ಆಗಸ್ಟ್ 2024, 15:53 IST
Last Updated : 13 ಆಗಸ್ಟ್ 2024, 15:53 IST
ಫಾಲೋ ಮಾಡಿ
Comments

ಬೀದರ್‌: ‘ಹಗಲಿರುಳು ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಸ್ಥಾನಮಾನ ಕೊಟ್ಟು ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಸಮಿತಿ ಸದಸ್ಯೆ ಎ. ಶಾಂತಾ ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಇಲ್ಲಿನ ಪ್ರತಾಪ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀದರ್ ಜಿಲ್ಲಾ ಆಶಾ ಕಾರ್ಯಕರ್ತೆಯರ ಪ್ರಥಮ ಜಿಲ್ಲಾ‌ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಕಳೆದ 14 ವರ್ಷಗಳಿಂದ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ತಳಮಟ್ಟದಲ್ಲಿ ಹಗಲು–ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸಿಗಬೇಕಾದ ಕನಿಷ್ಠ ಸವಲತ್ತುಗಳು ಸಿಗುತ್ತಿಲ್ಲ. ಹಲವು ಹೋರಾಟಗಳ ನಂತರ ಅವರ ಪ್ರೋತ್ಸಾಹ ಧನ ₹8 ಸಾವಿರಕ್ಕೆ ತಲುಪಿದೆ. ರಾಜ್ಯ ಸರ್ಕಾರ ಕನಿಷ್ಠ ₹21 ಸಾವಿರ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರು ಸರ್ಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಕ್ಷೇತ್ರವಲ್ಲದೇ ಸರ್ಕಾರದ ಇತರೆ ಯೋಜನೆಗಳಿಗೂ ಅವರನ್ನು ದುಡಿಸಿಕೊಳ್ಳಲಾಗುತ್ತಿದೆ. ಆದರೆ, ಅವರಿಗೆ ಸಾಮಾಜಿಕ ಭದ್ರತೆ ಇಲ್ಲ. ಅವರಿಗೆ ₹5 ಲಕ್ಷದ ವರೆಗೆ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಬೆಲೆ ಏರಿಕೆಗೆ ತಕ್ಕಂತೆ ಅವರ ವೇತನವೂ ಹೆಚ್ಚಾಗಬೇಕು. ಆದರೆ, ಆ ನಿಟ್ಟಿನಲ್ಲಿ ಸರ್ಕಾರ ಗಮನಹರಿಸುತ್ತಿಲ್ಲ ಎಂದರು.

ಕಾನೂನಿನ ಪ್ರಕಾರ ಆಶಾ ಕಾರ್ಯಕರ್ತೆಯರಿಗೆ ಇಎಸ್ಐ, ಪಿಎಫ್, ಗ್ರ್ಯಾಚುಟಿ ಕೊಡಬೇಕು. ಆಶಾ ಕಾರ್ಯಕರ್ತೆಯರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್‌ನಲ್ಲಿ ಜೀವದ ಹಂಗು ತೊರೆದು ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದ್ದಾರೆ. ಅವರನ್ನು ವಿಶ್ವಸಂಸ್ಥೆ ಜಾಗತಿಕ ನಾಯಕರು ಎಂದು ಕರೆದಿತ್ತು. ನಾವು ಅವರನ್ನು ಕೊರೊನಾ ವಾರಿಯರ್ಸ್‌ ಎಂದು ಹೇಳಿ ಬೆನ್ನು ತಟ್ಟಿದ್ದೆವು. ಆದರೆ, ಅವರ ಪರಿಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.

ಆಶಾ ಕಾರ್ಯಕರ್ತೆಯರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳ ಕುರಿತಂತೆ ಸರ್ಕಾರದೊಂದಿಗೆ ನಡೆಸಿದ ಹತ್ತು ಸಭೆಗಳು ಫಲ ಕೊಟ್ಟಿಲ್ಲ. ದುಡಿಮೆಗೆ ತಕ್ಕಂತೆ ವೇತನ ಸಿಗಬೇಕೆನ್ನುವುದು ನಮ್ಮ ಬೇಡಿಕೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರದಿಂದ ಆಗುತ್ತಿರುವ ಅನ್ಯಾಯ ದೂರವಾಗಬೇಕು. ನಮ್ಮ ದುಡಿತಕ್ಕೆ ತಕ್ಕ ಫಲ ಸಿಗದಿದ್ದರೆ ಜೀವನ ನಡೆಸುವುದಾದರೂ ಹೇಗೆ? ಸರ್ಕಾರದ ಧೋರಣೆ ಪ್ರಶ್ನಿಸಿ ಹೋರಾಟ ಮಾಡದಿದ್ದರೆ ನ್ಯಾಯ ಸಿಗಲ್ಲ. ಆಶಾ ಕಾರ್ಯಕರ್ತೆಯರನ್ನು ಯಾವಾಗ ತೆಗೆದು ಹಾಕುತ್ತಾರೆ ಎಂಬ ಭಯದಲ್ಲಿ ಕೆಲಸ ನಿರ್ವಹಿಸುವಂತಾಗಿದೆ. ಕೆಲಸಕ್ಕೆ ತಕ್ಕಂತೆ ಪ್ರೋತ್ಸಾಹ ಧನ ಕೊಡುವುದು ಸರ್ಕಾರದ ಜವಾಬ್ದಾರಿ. ಆಶಾ ಕಾರ್ಯಕರ್ತೆಯರನ್ನು ಸಂಘಟಿಸಿ ಹೋರಾಟ ರೂಪಿಸುವುದಕ್ಕಾಗಿಯೇ ಜಿಲ್ಲಾ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಅಧ್ಯಕ್ಷ ಮಹೇಶ್ ನಾಡಗೌಡ ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ಬಲಪಡಿಸಲು ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಬಲಿಷ್ಠ ಸಂಘಟನೆ, ಹೋರಾಟ ರೂಪಿಸಲು ಸಮ್ಮೇಳನ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷೆ ಡಾ. ಸೀಮಾ ದೇಶಪಾಂಡೆ ಮಾತನಾಡಿ, ಕೆಲಸದ ಸ್ಥಳದಲ್ಲಿ ಆಶಾ ಕಾರ್ಯಕರ್ತೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು. ದುಡಿಮೆಗೆ ತಕ್ಕಂತೆ ವೇತನ ಕೊಡಬೇಕು. ಹದಗೆಟ್ಟಿರುವ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಆಶಾ ಕಾರ್ಯಕರ್ತೆಯರು ಹಲವು ಸವಾಲುಗಳ ಮಧ್ಯೆ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರ ಕನಿಷ್ಠ ಪ್ರೋತ್ಸಾಹ ಧನ ಕೊಟ್ಟು ಸಾಕಷ್ಟು ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದರು.

ಎಐಯುಟಿಯುಸಿ ಕಾರ್ಯದರ್ಶಿ ವೀರೇಶ ಎನ್.ಎಸ್. , ಜಿಲ್ಲಾ ಉಪಾಧ್ಯಕ್ಷೆ ಮಹಾದೇವಿ,
ಜಿಲ್ಲಾ ಕಾರ್ಯದರ್ಶಿ ರತ್ನಮ್ಮ, ತಾಲ್ಲೂಕು ಪ್ರಮುಖರಾದ ದೇವಿಕಾ, ಮೀನಾಕ್ಷಿ, ಪ್ರೇಮಾ,‌ ರುಕ್ಮಿಣಿ,‌ ಗೋದಾವರಿ, ಪುಷ್ಪಾ ಹಾಜರಿದ್ದರು. ಸೂಗಮ್ಮ‌ ಸ್ವಾಗತ ಗೀತೆ ಹಾಡಿದರು. ಶಾಂಭವಿ ಕಲಕೋಳ ಶ್ರದ್ದಾಂಜಲಿ ಗೊತ್ತುವಳಿ ವಾಚನ ಮಾಡಿದರು. ಹುತಾತ್ಮ ಸ್ತಂಭಕ್ಕೆ ಗೌರವ ಸಲ್ಲಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಗಳ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಆಶಾ ಕಾರ್ಯಕರ್ತೆಯರು
–ಪ್ರಜಾವಾಣಿ ಚಿತ್ರಗಳು
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಆಶಾ ಕಾರ್ಯಕರ್ತೆಯರು –ಪ್ರಜಾವಾಣಿ ಚಿತ್ರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT