ಶನಿವಾರ, ಜುಲೈ 24, 2021
27 °C
ಆಶಾ ಕಾರ್ಯಕರ್ತೆಯರ ಪ್ರತಿಭಟನೆ; ಮನವಿ ಪತ್ರ ಸಲ್ಲಿಕೆ

ಗೌರವ ಧನ ಹೆಚ್ಚಿಸಲು ಆಶಾ ಕಾರ್ಯಕರ್ತೆಯರ ಅಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹ 12 ಸಾವಿರ ಗೌರವ ಧನ ನೀಡಬೇಕು. ಕೊರೊನಾ ಸೋಂಕು ತಡೆ ಕಾರ್ಯದಲ್ಲಿ ತೊಡಗಿದವರಿಗೆ ಅಗತ್ಯವಿರುವಷ್ಟು ಸುರಕ್ಷತಾ ಸಾಮಗ್ರಿಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಜನವರಿಯಿಂದ ಸರ್ಕಾರಕ್ಕೆ 10 ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳನ್ನು ಸಹ ಆಹ್ವಾನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕದ ಉತ್ತಮ ಸಾಧನೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಆಶಾ ಕಾರ್ಯಕರ್ತೆಯರ ಕೊಡುಗೆಯನ್ನೂ ಕೊಂಡಾಡಿದೆ. ರಾಜ್ಯದ 42,000 ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ, ಅಂತರರಾಜ್ಯ ಪ್ರಯಾಣಿಕರು, ವಲಸೆ ಕಾರ್ಮಿಕರು ಮತ್ತು ಇತರನ್ನು ಸ್ಕ್ರೀನಿಂಗ್ ಮಾಡಿದ್ದಾರೆ. ಸೋಂಕಿತರನ್ನು ಪತ್ತೆ ಹಚ್ಚಲು ನಿರಂತರವಾಗಿ ಪರಿಶ್ರಮ ಪಡುತ್ತಿದ್ದಾರೆ ಎಂದು ಹೇಳಿದರು.

ಕಂಟೇನ್ಮೆಂಟ್ ಪ್ರದೇಶದಲ್ಲಿ ಪ್ರತಿ ದಿನ ಮಾಹಿತಿ ಸಂಗ್ರಹಿಸುತ್ತಿರುವರು. ಇನ್‍ಪ್ಲುಯೆಂಜಾ, ತೀವ್ರ ಉಸಿರಾಟದ ಸೋಂಕು ಇರುವವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿರುವುದರಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗಿದೆ. ಸ್ಥಳೀಯ ಮಟ್ಟದಲ್ಲಿ ಕಾರ್ಯಪಡೆಯ ಸಕ್ರಿಯ ಸದಸ್ಯೆರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಫಿವರ್‌ ಕ್ಲಿನಿಕ್, ಸ್ವ್ಯಾಬ್ ಸಂಗ್ರಹ ಕೇಂದ್ರಗಳಲ್ಲಿ ಅಂತರರಾಷ್ಟ್ರೀಯ, ಅಂತರರಾಜ್ಯ ಚೆಕ್ ಪೋಸ್ಟ್‌ಗಳಲ್ಲೂ ಸ್ಕ್ರೀನಿಂಗ್ ತಂಡಗಳ ಜತೆಗೆ ಕೆಲಸ ಮಾಡಿರುತ್ತಾರೆ ಎಂದು ತಿಳಿಸಿದರು.

ಕೊರೊನಾ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿರುವ ಆಶಾ ಕಾರ್ಯಕರ್ತೆಯರು ಸಾಫ್ಟವೇರ್ ಅವ್ಯವಸ್ಥೆಯಿಂದಾಗಿ ವೇತನವಿಲ್ಲದೆ, ರಕ್ಷಣೆಯಿಲ್ಲದೆ ಬಳಲಿ ಬೆಂಡಾಗಿದ್ದಾರೆ. ದುಡಿತಕ್ಕೆ ತಕ್ಕ ಪ್ರತಿಫಲವಿಲ್ಲದೆ ಆಶಾಗಳು ಅನಿಶ್ಚಿತ ವೇತನದಿಂದ ಹೈರಾಣಾಗಿದ್ದಾರೆ ಎಂದು ದೂರಿದರು.

ಸರ್ಕಾರ ತಕ್ಷಣ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿಸಿ ಆಶಾ ಕಾರ್ಯಕರ್ತೆಯರ ಸೇವೆಗೆ ನೈಜಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಾಸಿಕ ಕನಿಷ್ಠ ₹ 12 ಸಾವಿರ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ರಕ್ಷಣೆಯ ಜವಾಬ್ದಾರಿ ಸರ್ಕಾರದ್ದಾಗಿದೆ. ಆಶಾ ಕಾರ್ಯಕರ್ತೆಯರನ್ನು ಆಯಧಗಳಿಲ್ಲದೆ ಯುದ್ಧಕ್ಕೆ ಕಳುಹಿಸಿದಂತಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಪರಿಶ್ರಮ ಪಡುತ್ತಿರುವ ಆಶಾಗಳ ಆರೋಗ್ಯವನ್ನು ರಕ್ಷಿಸಲು ಅಗತ್ಯವಿರುವ ರಕ್ಷಣಾ ಸಾಮಗ್ರಿಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮೊದಲು ಸಂಘದ ಗೋದಾವರಿ, ಉರ್ಮಿಳಾ, ಸಂಪತಿ, ಕವಿತಾ ಮೊದಲಾದವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು