ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ಒಡೆದ ಅಟ್ಟೂರ್ ಕೆರೆ: 200 ಎಕರೆ ಜಮೀನಿಗೆ ಹಾನಿ

ಕೋಹಿನೂರ್‌ನಲ್ಲಿ 18 ಸೆಂ.ಮೀ ಮಳೆ
Published 12 ಜೂನ್ 2024, 16:05 IST
Last Updated 12 ಜೂನ್ 2024, 16:05 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದ್ದು, ಬಸವಕಲ್ಯಾಣ ತಾಲ್ಲೂಕಿ‌ನ ಕೋಹಿನೂರ್ ಹೋಬಳಿಯಲ್ಲಿ ಅಟ್ಟೂರ್ ಕೆರೆ ಒಡೆದು ಅಪಾರ ಪ್ರಮಾಣದ ನೀರು ಹರಿದುಹೋಗಿದೆ.

ಕೆರೆ ಒಡೆದು ಅಪಾರ ಪ್ರಮಾಣದ ನೀರಿನೊಂದಿಗೆ 200 ಎಕರೆ ಪ್ರದೇಶದ ಹೊಲಗಳ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಅಟ್ಟೂರ್‌ ತಾಂಡಾ ಸೇರಿದಂತೆ ತಾಲ್ಲೂಕಿನ ಹತ್ತು ಸೇತುವೆಗಳು ಕುಸಿದಿರುವುದರಿಂದ ಸಂಚಾರ ಕಡಿತಗೊಂಡಿದೆ.

ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ್ ಹೋಬಳಿಯಲ್ಲಿ 18 ಸೆಂ.ಮೀ. ಮಳೆಯಾಗಿದೆ. ಮಹಾರಾಷ್ಟ್ರದಿಂದ ಮಾಂಜ್ರಾ ನದಿಗೆ ನೀರು ಹರಿಸಲಾಗಿದ್ದು, ಕೊಂಗಳಿ ಬ್ರಿಜ್‌ ಕಂ ಬ್ಯಾರೇಜ್‌ನಿಂದ ತಡವಾಗಿ ಗೇಟ್‌ಗಳನ್ನು ತೆರೆದ ಕಾರಣ ನೂರಾರು ಎಕರೆ ಪ್ರದೇಶದ ಹೊಲಗಳಿಗೆ ನೀರು ನುಗ್ಗಿದೆ. ಬ್ರಿಜ್‌ ಕಂ ಬ್ಯಾರೇಜಿನ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದ್ದರಿಂದ ವಿದ್ಯುತ್‌ ಪೂರೈಕೆ ಕಡಿತಗೊಳಿಸಲಾಗಿತ್ತು. ಗೇಟ್‌ ತೆರೆಯಲು ಸಾಧ್ಯವಾಗಿರಲಿಲ್ಲ. ಅಧಿಕಾರಿಗಳ ಮನವೊಲಿಸಿ ಗೇಟ್‌ ತೆರೆದು ನೀರು ಹರಿಸುವಷ್ಟರಲ್ಲಿ ಗದ್ದೆಗಳಿಗೆ ನೀರು ನುಗ್ಗಿದೆ.

ಕಲಬುರಗಿ ವರದಿ: ಜಿಲ್ಲೆಯಾದ್ಯಂತ ನೈರುತ್ಯ ಮುಂಗಾರು ಬಿರುಸಿನ ಮಳೆಯನ್ನು ತಂದಿದೆ. ಮಂಗಳವಾರ ತಡರಾತ್ರಿ ಸುರಿದ ಮಳೆಗೆ ಹಳ್ಳ–ಕೊಳ್ಳಗಳು ತುಂಬಿ ಹರಿದವು.

ಆಳಂದ ತಾಲ್ಲೂಕಿನ ಬೋದಾನ್–ಕಮಲಾನಗರ ನಡುವಿನ ಹಳ್ಳದ ನೀರು ಸೇತುವೆ ಮೇಲೆ ಹರಿಯಿತು. ಕಲಬುರಗಿ–ಬಸವಕಲ್ಯಾಣ ನಡುವಿನ ರಾಜ್ಯ ಹೆದ್ದಾರಿಯ ಸಂಪರ್ಕ ಸಂಜೆವರೆಗೂ ಕಡಿತಗೊಂಡಿತ್ತು. ಹಳ್ಳದ ನೀರು ಎರಡೂ ಬದಿಯ ಜಮೀನುಗಳಿಗೆ ನುಗ್ಗಿದ್ದರಿಂದ ಕಬ್ಬಿನ ಹೊಲದಲ್ಲಿ ನೀರು ನಿಂತಿದೆ.

ಕೊಪ್ಪಳ ವರದಿ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮೇಲಿಂದ ಮೇಲೆ ಸುರಿಯುತ್ತಿದ್ದ ಮಳೆ ಬುಧವಾರ ಆರ್ಭಟಿಸಿತು. ನಗರದ ರಸ್ತೆಯ ಮೇಲೆ ನೀರು ಉಕ್ಕಿ ಹರಿದಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡಿದರು.

ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಹಿಟ್ನಾಳ ಹೋಬಳಿ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಲಿಂಗದಹಳ್ಳಿ ಹತ್ತಿರದ ಹಳ್ಳ ತುಂಬಿ ಹರಿದಿದ್ದು ಹಿಟ್ನಾಳ ಗ್ರಾಮದಿಂದ ಲಿಂಗದಹಳ್ಳಿ ಶಹಪುರ ಮತ್ತು ಗಿಣಿಗೇರಿ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ.

ದಿನ ಪೂರ್ತಿ ಸುರಿದ ಮಳೆಯಿಂದಾಗಿ ಜಿಲ್ಲೆ ಮಲೆನಾಡಿನಂತಾಗಿದ್ದು, ದೈನಂದಿನ ಚಟುವಟಿಕೆಗಳಿಗೂ ಅಡ್ಡಿಯಾಯಿತು. ತಾವರಗೇರಾ, ಕುಷ್ಟಗಿ, ಕುಕನೂರು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.

ಮಡಿಕೇರಿ ವರದಿ: ನಗರದಲ್ಲಿ ಬುಧವಾರವೂ ಮಳೆ ಮುಂದುವರಿದಿದ್ದು, ಬೆಳಿಗ್ಗೆಯವರೆಗೂ ನಗರದ ಅಲ್ಲಲ್ಲಿ ಧಾರಾಕಾರವಾಗಿ ಸುರಿದು ನಂತರ ಬಿಡುವು ನೀಡಿತು. ದಟ್ಟ ಮಂಜು, ಮೋಡ ಕವಿದ ವಾತಾವರಣವಿದ್ದು, ಚಳಿಯ ವಾತಾವರಣ ಮೂಡಿದೆ. ಸಂಜೆಯೂ ಅಲ್ಲಲ್ಲಿ ಮಳೆಯಾಯಿತು. ಶನಿವಾರಸಂತೆಯಲ್ಲಿ ಮಧ್ಯಾಹ್ನ ಬಿರುಸಿನಿಂದ ಮಳೆ ಸುರಿಯಿತು.

ಹುಬ್ಬಳ್ಳಿ ವರದಿ: ಗದಗ, ಉತ್ತರ ಕನ್ನಡ, ಬಾಗಲಕೋಟೆ, ವಿಜಯನಗರ ಜಿಲ್ಲೆಯ ಕೆಲವಡೆ ಬುಧವಾರ ಮಳೆಯಾಯಿತು.

ಹೊಸಪೇಟೆಯಲ್ಲಿ ಸುರಿದ ಮಳೆಗೆ ಅಂಬೇಡ್ಕರ್ ವೃತ್ತ, ಕಾಲೇಜು ರಸ್ತೆ, ಅಸ್ಪತ್ರೆ ರಸ್ತೆ ಸಹಿತ ಕೆಲವೆಡೆ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ನಿಂತಿತ್ತು. ಕೊಟ್ಟೂರು ತಾಲ್ಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಮುಂಡರಗಿ ಮತ್ತು ನರಗುಂದದಲ್ಲಿ ಉತ್ತಮ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ, ಕುಮಟಾ ಸೇರಿ ಕೆಲವಡೆ ಮಳೆ ಸುರಿಯಿತು. ಬಾಗಲಕೋಟೆ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾದರೆ, ಹಾವೇರಿ ಜಿಲ್ಲೆಯಲ್ಲಿ ತುಂತುರು ಮಳೆಯಾಯಿತು.

ಕಲಬುರಗಿಯ ಆಳಂದ ತಾಲ್ಲೂಕಿನ ಬೋದಾನ್–ಕಮಲಾನಗರ ನಡುವಿನ ಹಳ್ಳ ಮಳೆ ನೀರಿನಿಂದ ತುಂಬಿ ಹರಿಯಿತು
ಕಲಬುರಗಿಯ ಆಳಂದ ತಾಲ್ಲೂಕಿನ ಬೋದಾನ್–ಕಮಲಾನಗರ ನಡುವಿನ ಹಳ್ಳ ಮಳೆ ನೀರಿನಿಂದ ತುಂಬಿ ಹರಿಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT