ಬೀದರ್: ‘ಸವಾಲಾಗಿ ಸ್ವೀಕರಿಸಿದರೆ ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು’ ಎಂದು ಸಾಧನಾ ಅಕಾಡೆಮಿಯ ನಿರ್ದೇಶಕರೂ ಆದ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಮಂಜುನಾಥ ಬಿ. ಅವರು ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಲ್ಲಿ ಸಾಧನೆಯ ಕನಸು ಬಿತ್ತಿದರು.
ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ’ಗೈಡಿಂಗ್ ಫೋರ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಠಿಣ ಪರಿಶ್ರಮ ವಹಿಸಲು, ನಿದ್ರೆ ಸೇರಿದಂತೆ ಅನೇಕ ಬಗೆಯ ತ್ಯಾಗಗಳನ್ನು ಮಾಡಲು ಸಿದ್ಧರಿರುವವರಿಗಷ್ಟೇ ಯಶಸ್ಸು ಒಲಿಯುತ್ತದೆ ಎಂದು ಹೇಳಿದರು.
ಸಾಧನೆ ಮಾಡ ಬಯಸುವವರು ಜೀವನದ ಗುರಿಯನ್ನು ಮೊದಲೇ ನಿರ್ಧರಿಸಬೇಕು. ಅದಕ್ಕೆ ಪೂರಕವಾಗಿ ಅಭ್ಯಾಸ ಮಾಡಬೇಕು. ನಿತ್ಯ ಅಭ್ಯಾಸ ಮಾಡುವುದನ್ನೇ ಹವ್ಯಾಸವಾಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಆರಂಭಿಕ ಕಠಿಣ ಪರಿಶ್ರಮವೇ ಯಾವುದೇ ಯಶಸ್ಸಿನ ಪಯಣವನ್ನು ನಿರ್ಧರಿಸುತ್ತದೆ. ಅದು ಯೋಜನಾ ಬದ್ಧ ತಯಾರಿಯನ್ನು ಬಯಸುತ್ತದೆ ಎಂದು ತಿಳಿಸಿದರು.
ಆಕಾಂಕ್ಷೆ, ನಂಬಿಕೆ, ಸ್ವಯಂ ಸೂಚನೆ, ವಿಶೇಷ ಪರಿಣತಿ, ಕಲ್ಪನಾ ಶಕ್ತಿ, ಸಂಘಟಿತ ಯೋಜನೆ, ನಿರ್ಧಾರ, ಛಲ, ಅಪರಿಮಿತ ಬುದ್ಧಿ ಶಕ್ತಿ, ಲೈಂಗಿಕ ಶಕ್ತಿಯ ರೂಪಾಂತರ ರಹಸ್ಯ, ಸೃಜನಾತ್ಮಕ ಮೆದುಳು ಮೊದಲಾದವು ಯಶಸ್ಸಿನ ಸೂತ್ರಗಳಾಗಿವೆ ಎಂದು ಹೇಳಿದರು.
ವಿಶ್ವದ ಪ್ರತಿಯೊಬ್ಬರಲ್ಲೂ ಸಮಾನ ಸಾಮರ್ಥ್ಯ ಇದೆ. ಯುಪಿಎಸ್‍ಸಿ ಪರೀಕ್ಷೆ ಪಾಸಾಗುವ ಬುದ್ಧಿಮತ್ತೆಯೂ ಇದೆ. ಆದರೆ, ಭಾರತೀಯ ಯುವಜನರು ಸಾಧನೆ ಹಾದಿಯಲ್ಲಿ ಎಡವಲು ನಿರುತ್ಸಾಹ ಹಾಗೂ ಮಧ್ಯದಲ್ಲೇ ಯೋಜನೆ ಕೈಬಿಡುವುದೇ ಕಾರಣವಾಗಿದೆ ಎಂದರು.
ಯಾರ ಭವಿಷ್ಯವನ್ನೂ ಯಾರೂ ರೂಪಿಸುವುದಿಲ್ಲ. ನಮ್ಮ ಭವಿಷ್ಯವನ್ನು ನಾವೇ ಕಟ್ಟಿಕೊಳ್ಳಬೇಕು. ನಮ್ಮ ಜೀವನವನ್ನು ನಾವೇ ಮೇಲ್ದರ್ಜೆಗೆ ಏರಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಗುರು, ಪುಸ್ತಕಕ್ಕೆ ಶರಣಾಗಿ, ಒಳ್ಳೆಯವರ ಸಂಗ ಮಾಡುವುದರಿಂದ ಯಶಸ್ಸು ಸಿಗುತ್ತದೆ. ಸರಿಯಾದದ್ದನ್ನು ನೋಡಿ, ಸರಿಯಾದ ಜ್ಞಾನ ಪಡೆಯುವುದರಿಂದ ಸಚ್ಚಾರಿತ್ರ್ಯ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ನೂರು ದೇಶಗಳಷ್ಟು ಜನಸಂಖ್ಯೆ ಭಾರತವೊಂದರಲ್ಲೇ ಇದೆ. ಆದರೂ, ಭಾರತ ಹಲವಾರು ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಈಗಿನ ವೇಗದ ಪ್ರಕಾರ ಅಮೆರಿಕ, ರಷ್ಯಾಗೆ ಸರಿಗಟ್ಟಲು ಇನ್ನೂ 100 ರಿಂದ 150 ವರ್ಷಗಳು ಬೇಕಾಗಲಿವೆ. ಹೀಗಾಗಿ ಪ್ರತಿಯೊಬ್ಬರೂ ಸಾಧನೆ ಮಾಡಿದರೇನೇ ದೇಶದ ಭವಿಷ್ಯ ಬದಲಾಗಲಿದೆ ಎಂದು ಹೇಳಿದರು.
₹3.5 ಲಕ್ಷ ಕೋಟಿ ಡೀಲ್‍ಗೆ ಚೌಕಾಶಿ ಮಾಡಲಿಲ್ಲ
ಜ್ಞಾನ ಇದ್ದಷ್ಟು ದೊಡ್ಡ ಸಾಮ್ರಾಜ್ಯವನ್ನೂ ಕಟ್ಟಬಹುದು ಎಂದು ಹೇಳಿದ ಮಂಜುನಾಥ ಬಿ. ಅವರು, ಟೆಸ್ಲಾ ಕಂಪನಿ ಮಾಲೀಕ ಎಲಾನ್ ಮಸ್ಕ್ ದೊಡ್ಡ ಮೊತ್ತದ ಡೀಲ್‍ಗೆ ಹಿಂದೆ ಮುಂದೆ ನೋಡದೆ ‘ಒಕೆ’ ಅಂದದ್ದನ್ನು ಉದಾಹರಿಸಿದರು.
10 ವರ್ಷದ ಹಿಂದೆ ಎಲಾನ್ ಮಸ್ಕ್ ಏನೂ ಇರಲಿಲ್ಲ. ಈಗ ಅವರು ದೊಡ್ಡ ಸಿರಿವಂತ ಹಾಗೂ ಸಾಧಕರು. ಟ್ವಿಟರ್ ಆ್ಯಪ್ ಖರೀದಿ ಡೀಲ್‍ಗೆ ಎಲಾನ್ ಮಸ್ಕ್ ಒಬ್ಬರೇ ಹೋಗಿದ್ದರು. ಟ್ವಿಟರ್ ನವರು ಆ್ಯಪ್‍ಗೆ ₹3.5 ಲಕ್ಷ ಕೋಟಿಗೆ ಬೇಡಿಕೆ ಇಟ್ಟಿದ್ದರು. ಎಲಾನ್ ಮಸ್ಕ್ ಚೌಕಾಶಿ ಮಾಡದೆ ಒಮ್ಮೆಲೆ ಆಯಿತು ಅಂದರು ಎಂದು ತಿಳಿಸಿದರು.
‘ಬೀದರ್‌ನಲ್ಲಿ ಕಾನ್‌ಸ್ಟೆಬಲ್ ತರಬೇತಿ ಪಡೆದಿದ್ದೆ’
‘20 ವರ್ಷಗಳ ಹಿಂದೆ ಬೀದರ್‌ನಲ್ಲಿ ಒಂಬತ್ತು ತಿಂಗಳು ಉಳಿದಿದ್ದೆ. ಇಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ತರಬೇತಿ ಪಡೆದಿದ್ದೆ’ ಎಂದು ಮಂಜುನಾಥ ಬಿ. ತಿಳಿಸಿದರು.
ನನ್ನ ಊರು ಶಿಕಾರಿಪುರಕ್ಕೂ- ಬೀದರ್‌ಗೂ ಸಂಬಂಧ ಇದೆ. 12ನೇ ಶತಮಾನದಲ್ಲಿ ಬಸವಕಲ್ಯಾಣಕ್ಕೆ ಬಂದಿದ್ದ ಅಲ್ಲಮಪ್ರಭು, ಅಕ್ಕಮಹಾದೇವಿ ನಮ್ಮೂರಿನವರೇ. ಅಂದು ಅವರು ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದರು. ಈಗ ನಾನು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.