ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗೀತ, ಸಾಹಿತ್ಯದಲ್ಲಿ ಚೈತನ್ಯ ಶಕ್ತಿ: ಚಿಂತಕ ಸಿದ್ದು ಯಾಪಲಪರವಿ

Published : 16 ಆಗಸ್ಟ್ 2024, 16:23 IST
Last Updated : 16 ಆಗಸ್ಟ್ 2024, 16:23 IST
ಫಾಲೋ ಮಾಡಿ
Comments

ಬೀದರ್‌: ‘ಸಂಗೀತ ಮತ್ತು ಸಾಹಿತ್ಯದಲ್ಲಿ ಮನುಷ್ಯನನ್ನು ಕ್ರಿಯಾಶೀಲಗೊಳಿಸುವ ಚೈತನ್ಯ ಶಕ್ತಿ ಇದೆ’ ಎಂದು ಚಿಂತಕ ಸಿದ್ದು ಯಾಪಲಪರವಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಕನ್ನಡ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಬಹುಭಾಷಾ ಕವಿಗೋಷ್ಠಿ ಹಾಗೂ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲ ಭಾಷೆಗಳಲ್ಲಿ ಸಾಹಿತ್ಯದ ಉಗಮ ಕಾವ್ಯದಿಂದಲೇ ಆಗುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಗೆ ಒಂದು ಪರಂಪರೆ ಇದೆ. ಆದರೆ, ಗುಣಮಟ್ಟದ ಬಗ್ಗೆ ತಕರಾರುಗಳಿವೆ. ಕಾವ್ಯದ ಸಂದರ್ಭದಲ್ಲಿ ನಿರಂತರ ಕೃಷಿ ನಡೆಯಬೇಕು ಎಂದು ತಿಳಿಸಿದರು.

ಉರ್ದುವಿನಿಂದ ಬಂದ ಗಜಲ್ ಪ್ರಭಾವ ಕನ್ನಡದ ಮೇಲೂ ಆಯಿತು. ನಮ್ಮ ಭಾಗದಲ್ಲಿನ ಸಾಹಿತ್ಯದ ಮೇಲೆ ವಚನಗಳ ಪ್ರಭಾವ ಜಾಸ್ತಿಯಾಗಿದೆ. ಅಕ್ಕನ ವಚನಗಳಲ್ಲಿ ಕಾವ್ಯಾತ್ಮಕ ಗುಣಗಳಿವೆ. ಬಸವಣ್ಣನವರು ಸರಳವಾಗಿ ವಚನಗಳನ್ನು ಬರೆದರೆ ಅಲ್ಲಮಪ್ರಭು ಗಂಭೀರಾರ್ಥಗಳಲ್ಲಿ ಬರೆದರು ಎಂದು ಹೇಳಿದರು.

ಸಾಹಿತಿ ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಕಾವ್ಯ ಮನುಷ್ಯನನ್ನು ಎತ್ತರಕ್ಕೆ ಬೆಳೆಸುತ್ತ. ಸಾಹಿತ್ಯವು ಸರಳವಾಗಿ ವಿವರಣೆಗೆ ಸಿಗುವಂತಹದ್ದಲ್ಲ. ಯುದ್ಧ ನಿಲ್ಲಿಸುವ ಶಕ್ತಿಯೂ ಕಾವ್ಯಕ್ಕಿದೆ. ಕಾವ್ಯವು ಪ್ರತಿ ಜೀವಿಯೂ ಬದುಕಲಿ ಎಂದು ಆಶಿಸುತ್ತದೆ ಎಂದರು.

ಕಾವ್ಯಕ್ಕೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ. ವಿಧ್ವಂಸಕ ಕೃತ್ಯ ಮಾಡುವವರು, ಹಿಂಸಾಪ್ರವೃತ್ತಿಯವರು ಕವಿಗಳಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಾರ್ವತಿ ಸೋನಾರೆ ಮಾತನಾಡಿ, ಬೀದರ್‌ ಜಿಲ್ಲೆ ಬಹುಭಾಷೆ, ಬಹುಸಂಸ್ಕ್ರತಿಯ ಬೀಡು. ಜಗತ್ತಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು ಮನಕಲುಕುತ್ತಿವೆ. ಸಾಹಿತ್ಯ ಕ್ಷೇತ್ರವೂ ಸಮಾಜದಲ್ಲಿ ನಡೆಯುತ್ತಿರುವ ಹೇಯ ಕೃತ್ಯಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ಕಾರ್ಯಕ್ರಮಗಳಿಗಾಗಿ ಕನ್ನಡ ಭವನವನ್ನು ಜಿಲ್ಲೆಯ ಸಂಘ-ಸಂಸ್ಥೆಗಳವರು ಬಳಸಿಕೊಳ್ಳಬಹುದು. ಕನ್ನಡಿಗರ ಬಹುದಿನಗಳ ಕನಸಾದ ಕನ್ನಡ ಭವನದಲ್ಲಿ ಬರುವ ದಿನಗಳಲ್ಲಿ ನಿರಂತರವಾಗಿ ಕನ್ನಡ ಚಟುವಟಿಕೆಗಳು ನಡೆಯಲಿವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪರಮೇಶ್ವರ ಬಿರಾದಾರ ಮತ್ತು ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷಕುಮಾರ ಮಂಗಳೂರೆ ಅವರನ್ನು ಗೌರವಿಸಲಾಯಿತು.

ರೇಖಾ ಅಪ್ಪಾರಾವ ಸೌದಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಶಿವಕುಮಾರ ಕಟ್ಟೆ, ಮಹಿಳಾ ಪ್ರತಿನಿಧಿ ಜಯದೇವಿ ಯದಲಾಪುರೆ, ತಾಲ್ಲೂಕು ಗೌರವ ಕಾರ್ಯದರ್ಶಿ ಸಿದ್ಧಾರೂಢ ಭಾಲ್ಕೆ ಹಾಜರಿದ್ದರು.

ಸಿದ್ದು ಯಾಪಲಪರವಿ, ಪಾರ್ವತಿ ವಿ.ಸೋನಾರೆ, ಮಾಣಿಕ ನೇಳಗೆ, ರೆಹಮತ್ ಉಲ್ಲಾ ರಹಮತ್, ಪ್ರೊ. ಮಾರುತಿ ಭೀಮಣ್ಣ, ಸಂಗಮೇಶ ಜ್ಯಾಂತೆ, ಮೊಹಮ್ಮದ್‌ ಯೂಸುಫ್ ರಹೀಂ, ಎಸ್.ಎಸ್.ಹೊಡಮನಿ, ವೀರಶೆಟ್ಟಿ ಚೌಕನಪಳ್ಳಿ, ರವಿ ಕಾಂಬಳೆ, ಶಿವಕುಮಾರ ಕಟ್ಟೆ, ಎಂ.ಎಸ್.ಮನೋಹರ, ಮಹಾನಂದ ಪಾಟೀಲ, ಜಯದೇವಿ ಯದಲಾಪುರೆ ಕವನ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT