ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಸ್ವತಂತ್ರ ಧರ್ಮ: ಮರು ಪ್ರಸ್ತಾವಕ್ಕೆ ಆಗ್ರಹ

Published 28 ನವೆಂಬರ್ 2023, 16:50 IST
Last Updated 28 ನವೆಂಬರ್ 2023, 16:50 IST
ಅಕ್ಷರ ಗಾತ್ರ

ಬೀದರ್‌: ‘ಮರು ಪರಿಶೀಲಿಸಬೇಕು ಎಂದು ಲಿಂಗಾಯತ ಸ್ವತಂತ್ರ ಧರ್ಮದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ವಾಪಸ್‌ ಕಳಿಸಿದ್ದು, ರಾಜ್ಯ ಸರ್ಕಾರ ಅದಕ್ಕೆ ಉತ್ತರ ಕೊಟ್ಟು, ಅದನ್ನು ಪುನಃ ಕೇಂದ್ರಕ್ಕೆ ಕಳಿಸಬೇಕು’ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ರಾತ್ರಿ ನಡೆದ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಸಮಾವೇಶ ಹಾಗೂ ಬಸವ ದಳದ ನೂತನ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸಮ ಸಮಾಜ ನಿರ್ಮಾಣಕ್ಕಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕರೆಂದು ಘೋಷಿಸಬೇಕು ಎಂದರು.

ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಿಸಬೇಕು. ಯಶವಂತಪುರ ರೈಲು ನಿಲ್ದಾಣಕ್ಕೆ ಬಸವೇಶ್ವರರ ‌ಹೆಸರಿಡಬೇಕು. ಕೂಡಲಸಂಗಮ, ಬಸವಕಲ್ಯಾಣ ಸೇರಿದಂತೆ ಇತರೆ ಶರಣರ ಸ್ಥಳಗಳನ್ನು ಸೇರಿಸಿಕೊಂಡು ಕಾರಿಡಾರ್‌ ಮಾಡಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.

ಲಿಂಗೈಕ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಲಿಂಗೈಕ್ಯ ಮಾತೆ ಮಹಾದೇವಿಯವರು ಬಹಳ ದೂರದೃಷ್ಟಿ ಇಟ್ಟುಕೊಂಡು ಬಸವ ದಳವನ್ನು ಹುಟ್ಟು ಹಾಕಿದ್ದರು. ದೇಶದ ಹಲವೆಡೆ ಬಸವ ದಳದ ಶಾಖೆಗಳಿವೆ. ಬರುವ ದಿನಗಳಲ್ಲಿ ಇದು ಇನ್ನಷ್ಟು ಸಂಘಟಿತವಾಗಿ, ಎಲ್ಲೆಡೆ ಬಸವತತ್ವವನ್ನು ಹೆಚ್ಚು ಪ್ರಚಾರ ಮಾಡಬೇಕು. ವಚನ ಸಾಹಿತ್ಯದ ಸಾರ ಜನಸಾಮಾನ್ಯರಿಗೆ ತಿಳಿಸಬೇಕು ಎಂದು ಹೇಳಿದರು.

ಮಾತೆ ಗಂಗಾದೇವಿಯವರು ರಾಜೇಂದ್ರಕುಮಾರ ಗಂದಗೆ ಅವರಿಗೆ ಷಟಸ್ಥಳ ಧ್ವಜ ಕೊಟ್ಟು ರಾಷ್ಟ್ರೀಯ ಬಸವ ದಳದ ಜವಾಬ್ದಾರಿ ವಹಿಸಿದರು.

ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಬಸವಕಲ್ಯಾಣ ಅಲ್ಲಮಪ್ರಭು ಪೀಠದ ಬಸವಕುಮಾರ ಸ್ವಾಮೀಜಿ, ಮಹಾರಾಷ್ಟ್ರದ ಬಸವಕುಮಾರ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕೆ, ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ, ರಾಷ್ಟ್ರೀಯ ಬಸವ ದಳದ ರಾಜ್ಯ ಅಧ್ಯಕ್ಷ ಚನ್ನಬಸವ ಬಿಜಲಿ, ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಮುಖಂಡರಾದ ಗುರುನಾಥ ಕೊಳ್ಳೂರ, ಬಸವರಾಜ ಬುಳ್ಳಾ, ಬಾಬುವಾಲಿ, ಪ್ರಭುರಾವ ವಸ್ಮತೆ, ರಾಜೇಂದ್ರ ಜೊನ್ನಿಕೇರಿ, ಜೈರಾಜ ಖಂಡ್ರೆ, ಆರ್‌.ಜಿ. ಶೆಟಕಾರ, ಚನ್ನಬಸವ ಬಳತೆ, ವಿಜಯಕುಮಾರ ಪಾಟೀಲ ಖಾಜಾಪುರ, ಸುರೇಶ ಸ್ವಾಮಿ ಹಾಗೂ ಇತರರಿದ್ದರು.

‘ಗುರುಗಳಿಂದ ಒಡಕು’
‘ಗುರುಸ್ಥಾನದಲ್ಲಿ ಕುಳಿತಿರುವ ಗುರುಗಳಿಂದ ಲಿಂಗಾಯತ ಸಮಾಜದಲ್ಲಿ ಒಡಕು ಉಂಟಾಗುತ್ತಿದೆ ಹೊರತು ಭಕ್ತರಿಂದಲ್ಲ. ಜ್ಞಾನದ ಮಾರ್ಗ ತೋರಿಸಬೇಕಾದವರು ಪರಸ್ಪರ ಜಗಳವಾಡುತ್ತಿದ್ದಾರೆ. ಅಕ್ಕ ಅನ್ನಪೂರ್ಣ ಹಾಗೂ ಅಕ್ಕ ಗಂಗಾಂಬಿಕೆಯವರು ಉತ್ತಮ ಕೆಲಸ ಮಾಡುತ್ತಿದ್ದರು. ಆದರೆ ಅವರಿಬ್ಬರ ಪರಸ್ಪರ ಜಗಳದಿಂದ ಸಮಾಜದಲ್ಲಿ ತಪ್ಪು ಸಂದೇಶ ರವಾನೆಯಾಯಿತು. ಈ ರೀತಿ ಆಗಬಾರದು’ ಎಂದು ಹಿರಿಯ ಮುಖಂಡ ಶಿವಶರಣಪ್ಪಾ ವಾಲಿ ಹೇಳಿದರು. ತಮ್ಮ ಭಾಷಣದಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ಅಕ್ಕ ಗಂಗಾಂಬಿಕೆ ನ್ಯಾಯ–ಅನ್ಯಾಯ ಏನೆಂದು ತಿಳಿಯಬೇಕು. ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT