ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟದ್ದೇವರ ಕಡೆಗಣನೆ: ಅಸಮಾಧಾನ

ಬಸವಕಲ್ಯಾಣ ಯಾತ್ರಾ ಪರ್ವ: ನಂದಿ ಲೋಗೋ ಬಳಕೆಗೆ ಆಕ್ಷೇಪ
Last Updated 7 ಏಪ್ರಿಲ್ 2022, 5:08 IST
ಅಕ್ಷರ ಗಾತ್ರ

ಭಾಲ್ಕಿ: ‘ಬಸವಕಲ್ಯಾಣದಲ್ಲಿ ಏ.9 ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಯಾತ್ರೆ ಪರ್ವ ಕಾರ್ಯಕ್ರಮದಲ್ಲಿ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಅವರನ್ನು ಕಡೆಗಣಿಸಿದ್ದು ಸರಿಯಲ್ಲ’ ಎಂದು ಡಾ.ಚನ್ನಬಸವ ಪಟ್ಟದ್ದೇವರು ಯುವಕ ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ ಅಸಮಾಧಾನ ಹೊರಹಾಕಿದ್ದಾರೆ.

ಬಸವಣ್ಣನವರ ನಂತರ ಅನುಭವ ಮಂಟಪ ಕಟ್ಟಿದ್ದು ಭಾಲ್ಕಿ ಹಿರೇಮಠ ಸಂಸ್ಥಾನದ ಚನ್ನಬಸವ ಪಟ್ಟದ್ದೇವರು. ಪೂಜ್ಯರು ಸ್ವತಃ ಕಲ್ಲು ಮಣ್ಣು ಹೊತ್ತು ಅನುಭವ ಮಂಟಪ ಕಟ್ಟಿದರು. ಶರಣ ಕಮ್ಮಟವನ್ನು ಅನುಭವ ಮಂಟಪ ಉತ್ಸವವಾಗಿ ಪರಿವರ್ತಿಸಿ ಶರಣರ ವಿಚಾರಧಾರೆಯನ್ನು ಎಲ್ಲೆಡೆ ಪ್ರಸಾರ ಮಾಡುವ ಜಂಗಮ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದ ಫಲವಾಗಿಸರ್ಕಾರದಿಂದ ನೂತನ ಅನುಭವ ಮಂಟಪದ ಯೋಜನೆ ರೂಪ ತಾಳಿತು. ಪಟ್ಟದ್ದೇವರ ನಿರಂತರ ಪ್ರಯತ್ನದ ಫಲವಾಗಿ ಸರ್ಕಾರ ₹200 ಕೋಟಿ ಅನುದಾನ ಬಿಡುಗಡೆ ಮಾಡಿತು. 2021ರ ಜನವರಿ ತಿಂಗಳಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಅಂದಿನ ಸಿಎಂ ಬಿಎಸ್‍ವೈ ಅವರು ಅನುಭವ ಮಂಟಪ ನಿರ್ಮಾಣ ದ ಭೂಮಿ ಪೂಜೆ ನೆರವೇರಿಸಿ, ಕಟ್ಟಡ ಜವಾಬ್ದಾರಿಯನ್ನು ಬಸವ ರಾಜ ಪಾಟೀಲ ಸೇಡಂ ಅವರಿಗೆ ಒಪ್ಪಿಸಿದರು ಎಂದರು.

ಸೇಡಂ ಅವರು ಕಟ್ಟಡದ ಕಾರ್ಯದಲ್ಲಿ ಆಸಕ್ತಿ ವಹಿಸದೆ ಬೇರೆ ಬೇರೆ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿರುವುದು ವಿರ್ಪಯಾಸವೇ ಸರಿ. ಭೂಮಿ ಪೂಜೆಯಾಗಿ 1 ವರ್ಷ ಕಳೆದರೂ ಇನ್ನು ಕಟ್ಟಡ ಪ್ರಾರಂಭವಾಗಲಿಲ್ಲ. ಸೇಡಂ ಅವರ ನಡೆ ಅನೇಕ ಸಂಶಯಗಳನ್ನು ಹುಟ್ಟಿಸುತ್ತಿದೆ. ಅನುಭವ ಮಂಟಪ ಭೂಮಿ ಪೂಜೆಯ ಸರ್ಕಾರದ ಜಾಹೀರಾತುಗಳಲ್ಲಿ ಸನಾತನ ಪದದ ಬಳಕೆಯಿಂದ ಕರ್ನಾಟಕದೆಲ್ಲೆಡೇ ವಿರೋಧ ವ್ಯಕ್ತವಾಗಿತ್ತು. ಅನುಭವ ಮಂಟಪದ ಕೆಲಸ ಕಾರ್ಯದಲ್ಲಿ ನಂದಿ ಲೋಗೋಉಪಯೋಗಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಸವನಿಷ್ಠ ಮಠಾಧೀಶರನ್ನು ಕಡೆಗೆಣಿಸಿ,ವೈದಿಕ ವಿಚಾರವುಳ್ಳ ಸ್ವಾಮಿಗಳಿಗೆ ಆದ್ಯತೆ ನೀಡಿರುವುದು ಅತ್ಯಂತ ನೋವಿನ ಸಂಗತಿ. ಡಾ.ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪ ನಿರ್ಮಾಣಕ್ಕಾಗಿ ಉಚಿತವಾಗಿ ಅನುಭವ ಮಂಟಪ ಟ್ರಸ್ಟ್‌ನ ಭೂಮಿಯನ್ನು ದಾಸೋಹ ಮಾಡಿದ್ದಾರೆ. ಅಲ್ಲದೆ ನಿರಂತರ ಅನ್ನ ದಾಸೋಹ ನಡೆಸುತ್ತಿದ್ದಾರೆ. ಸೇಡಂ ಅವರಿಗೆ ಒಪ್ಪಿಸಿದ ಕಟ್ಟಡದ ಕಾರ್ಯದಲ್ಲಿ ಆಸಕ್ತಿ ವಹಿಸಿ ಆದಷ್ಟು ಬೇಗ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವತ್ತ ಗಮನ ಹರಿಸಬೇಕು. ಏಪ್ರಿಲ್ 9 ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಯಾತ್ರೆ ಪರ್ವ ಕಾರ್ಯಕ್ರಮ ಡಾ.ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ನಡೆಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಆಹ್ವಾನ ಪತ್ರಿಕೆಯಲ್ಲಿ ಲೋಪ: ಖಂಡನೆ
ಬೀದರ್‌:
ಜಿಲ್ಲೆಯ ಚುನಾಯಿತ ಪ್ರತಿನಿಧಿಗಳನ್ನು ಬಿಟ್ಟು ಬಸವಕಲ್ಯಾಣದಲ್ಲಿ ಏಪ್ರಿಲ್‌ 9ರಂದು ‘ಕಲ್ಯಾಣ ಕರ್ನಾಟಕ ಯಾತ್ರಾ ಪರ್ವ’ ಕಾರ್ಯಕ್ರಮ ಆಯೋಜಿಸಿರುವುದನ್ನು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಖಂಡಿಸಿದ್ದಾರೆ.

ಸ್ಥಳೀಯ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರು, ರಾಜ್ಯದ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಗರಸಭೆ ಅಧ್ಯಕ್ಷರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಗೌರವ ಸಲ್ಲಿಸಬೇಕಾಗುತ್ತದೆ. ಪತ್ರಿಕೆಯಲ್ಲಿ ಪರುಷ ಕಟ್ಟೆಯ ಮೇಲೆ ನಂದಿ ಚಿತ್ರಹಾಕಿ ಬಸವಣ್ಣನವರಿಗೆ ಅವಮಾನ ಮಾಡಲಾಗಿದೆ. ಸಂಘಟಕರು ಆಮಂತ್ರಣ ಪತ್ರಿಕೆಯಲ್ಲಾದ ಲೋಪವನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು.

ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಮಠಾಧೀಶರ ಹೆಸರುಗಳನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT