ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಣ್ಣ ವಿಶ್ವದ ಸಾಂಸ್ಕೃತಿಕ ನಾಯಕ: ಈಶ್ವರ ಬಿ. ಖಂಡ್ರೆ

ಬಸವಣ್ಣನ ಕಾಯಕ, ದಾಸೋಹ ತತ್ವ ಜಾರಿಗೆ ಬಂದರೆ ಬಡತನ ನಿವಾರಣೆ–ಸಚಿವ ಈಶ್ವರ ಬಿ. ಖಂಡ್ರೆ
Published 17 ಫೆಬ್ರುವರಿ 2024, 16:21 IST
Last Updated 17 ಫೆಬ್ರುವರಿ 2024, 16:21 IST
ಅಕ್ಷರ ಗಾತ್ರ

ಬೀದರ್‌: ‘ವಿಶ್ವಗುರು ಬಸವಣ್ಣನವರು ಇಡೀ ವಿಶ್ವದ ಸಾಂಸ್ಕೃತಿಕ ನಾಯಕರು. ಅವರನ್ನು ಒಂದು ಜಾತಿಗೆ ಸೀಮಿತರಾಗಿ ಮಾಡಬಾರದು. ಜಗತ್ತಿನ 750 ಕೋಟಿ ಜನರನ್ನು ಬಸವಣ್ಣ ಪ್ರತಿನಿಧಿಸುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಜಿಲ್ಲಾಡಳಿತದಿಂದ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಾರ್ಲ್‌ ಮಾರ್ಕ್ಸ್‌ನ ‘ದಾಸ್‌ ಕ್ಯಾಪಿಟಲ್‌’ಗೂ ಮೊದಲು ಬಸವಣ್ಣನವರು ಸಮಾಜವಾದವನ್ನು ಪ್ರತಿಪಾದಿಸಿದ್ದರು. ನಮ್ಮ ದೇಶದ ಸಂವಿಧಾನದಲ್ಲಿರುವ ಸಾಮಾಜಿಕ, ಆರ್ಥಿಕ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇವೆಲ್ಲವುಗಳನ್ನೂ ಬಸವಣ್ಣ 12ನೇ ಶತಮಾನದಲ್ಲಿ ಹೇಳಿದ್ದರು. ಅದನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಕಾನೂನು ರೂಪದಲ್ಲಿ ಜಾರಿಗೆ ತಂದರು ಎಂದರು.

ಬಸವಣ್ಣನವರ ಕಾಯಕ, ದಾಸೋಹ ತತ್ವ ಜಾರಿಗೆ ಬಂದರೆ ಬಡತನನೇ ಇರುವುದಿಲ್ಲ. ಬಸವತತ್ವ ಹೇಳುವುದು ಬಹಳ ಸುಲಭ. ಆದರೆ, ಅದರ ಆಚರಣೆ ಬಹಳ ಕಷ್ಟಕರವಾದುದು. ವಿರಳಾತಿವಿರಳರು ಆ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ. ಅನೇಕ ಜನ ಮಠಾಧೀಶರು, ವಾಗ್ಮಿಗಳು ಇದ್ದಾರೆ. ಆದರೆ, ಬಸವಣ್ಣನವರ ತತ್ವಗಳನ್ನು ಆಚರಣೆ ಮಾಡುವುದಿಲ್ಲ ಎಂದು ಹೇಳಿದರು.

ಬಸವಣ್ಣನವರು ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ. 12ನೇ ಶತಮಾನದಲ್ಲೇ ಅಂತರ್ಜಾತಿ ವಿವಾಹ ಮಾಡಿಸಿದ್ದರು. ಮನುಷ್ಯ ಮನುಷ್ಯರ ನಡುವೆ ವೈಷಮ್ಯ, ದ್ವೇಷ ಬೆಳೆಯಬಾರದು. ಪ್ರತಿಯೊಬ್ಬರೂ ಸಹೋದರತ್ವ, ಪ್ರೀತಿ ಬೆಳೆಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರಾಗಿ ಘೋಷಿಸಿದೆ ಎಂದರು.

ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ಜನರನ್ನು ಮೌಢ್ಯದ ಕಡೆಗೆ ಕರೆದೊಯ್ಯುವ ಕೆಲಸಗಳಾಗುತ್ತಿವೆ. ಒಂದೇ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯುವ ಪ್ರಯತ್ನಗಳಾಗುತ್ತಿವೆ. ಅದರಿಂದ ದೂರವಿದ್ದು, ಬಸವಣ್ಣನವರು ಕೊಟ್ಟ ವೈಚಾರಿಕ ವಿಚಾರಗಳ ತಳಹದಿ ಮೇಲೆ ಸುಂದರ ಸಮಾಜ ನಿರ್ಮಿಸಬೇಕಿದೆ. ಸಮ ಸಮಾಜ ನಿರ್ಮಾಣವಾಗಬೇಕಿದೆ ಎಂದು ತಿಳಿಸಿದರು.

ಬುದ್ಧ, ಬಸವ, ಅಂಬೇಡ್ಕರ್‌ ಹಾಗೂ ಗಾಂಧೀಜಿ ಅವರ ತತ್ವಾದರ್ಶಗಳಿಂದ ಪ್ರೇರಣೆ ಪಡೆದು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಯಾರೂ ಮಾಡದ ಐತಿಹಾಸಿಕ ತೀರ್ಮಾನವನ್ನು ಸಿದ್ದರಾಮಯ್ಯನವರು ತೆಗೆದುಕೊಂಡು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಾರೆ. ಜಗತ್ತಿನಲ್ಲಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಕ್ರಾಂತಿ ನಡೆದಿದೆ. ಆದರೆ, ಸಮಾನತೆ, ಸಮ ಸಮಾಜಕ್ಕಾಗಿ ಕ್ರಾಂತಿ ನಡೆದಿದ್ದು 12ನೇ ಶತಮಾನದಲ್ಲಿ ಮಾತ್ರ ಎಂದರು.

ಪೌರಾಡಳಿತ ಸಚಿವ ರಹೀಂ ಖಾನ್‌ ಮಾತನಾಡಿ, ಬಸವಣ್ಣನವರ ವಚನಗಳಿಗೆ ತಕ್ಕಂತೆ ನಡೆದುಕೊಂಡರೆ ಜಗತ್ತಿನಲ್ಲಿ ಯಾವುದೇ ಸಂಘರ್ಷಗಳು ನಡೆಯುವುದಿಲ್ಲ. ಜಾತೀಯತೆ, ಶ್ರೀಮಂತ–ಬಡವ ಎಂಬ ಭೇದ ಇರುವುದಿಲ್ಲ. ಬಸವೇಶ್ವರರ ಕರ್ಮಭೂಮಿ ಬೀದರ್‌ ಆಗಿರುವುದರಿಂದ ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಕೆಲಸಗಳಾಗಬೇಕು. ಜಿಲ್ಲೆಯಿಂದ ಸಂದೇಶ ಹೋಗುವಂತಾಗಬೇಕು ಎಂದರು.

ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ರಾಜ್ಯ ಸರ್ಕಾರದ ತೀರ್ಮಾನದಿಂದ ಬಸವಭಕ್ತರಿಗೆ ಬಹಳ ಖುಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಎಲ್ಲ ಸಚಿವ ಸಹೊದ್ಯೋಗಿಗಳು ಅಭಿನಂದನಾರ್ಹರು. ಕಾಯಕಕ್ಕೆ ಹಾಗೂ ಹೆಣ್ಣು ಮಕ್ಕಳಿಗೆ ದೈವತ್ವದ ಪಟ್ಟ ಕಟ್ಟಿದವರು ಬಸವಣ್ಣನವರು ಎಂದು ಹೇಳಿದರು.

ಬಸವಕಲ್ಯಾಣ ಹರಳಯ್ಯ ಪೀಠದ ಅಕ್ಕ ಗಂಗಾಂಬಿಕೆ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌., ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌ ಹಾಜರಿದ್ದರು.

ಬೀದರ್‌ನಲ್ಲಿ ಶನಿವಾರ ನಡೆದ ಬಸವೇಶ್ವರ ಭಾವಚಿತ್ರದ ಮೆರವಣಿಗೆಯಲ್ಲಿ ಬಸವಭಕ್ತರು ಕುಣಿದು ಕುಪ್ಪಳಿಸಿದರು
ಬೀದರ್‌ನಲ್ಲಿ ಶನಿವಾರ ನಡೆದ ಬಸವೇಶ್ವರ ಭಾವಚಿತ್ರದ ಮೆರವಣಿಗೆಯಲ್ಲಿ ಬಸವಭಕ್ತರು ಕುಣಿದು ಕುಪ್ಪಳಿಸಿದರು

Cut-off box - ‘ಲಿಂಗಾಯತರು ಸಿಎಂ ಆಗಿದ್ದರೂ ಮಾಡಿರಲಿಲ್ಲ’ ‘ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಘೋಷಿಸಬೇಕೆಂಬ ಬಹುವರ್ಷಗಳ ಬೇಡಿಕೆಯನ್ನು ನಮ್ಮ ಸಮುದಾಯದ (ಲಿಂಗಾಯತ) ಅನೇಕರು ಸಿ.ಎಂ ಆಗಿದ್ದರೂ ಮಾಡಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಕೆಲಸ ಮಾಡಿದ್ದಾರೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು. ಮಠಾಧೀಶರು ಲಿಂಗಾಯತ ಸಮುದಾಯದ ಮುಖಂಡರು ಪರಿಶಿಷ್ಟ ಪಂಗಡದವರು ಪ್ರಗತಿಪರ ಸಂಘಟನೆಗಳವರು ಇತ್ತೀಚೆಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ‘ನಾನು ಕೂಡ ಬಸವಣ್ಣನ ಅನುಯಾಯಿ’ ಎಂದು ಸಿ.ಎಂ ಆ ಸಂದರ್ಭದಲ್ಲಿ ಹೇಳಿದರು. ಅದಾದ ಕೆಲವೇ ದಿನಗಳಲ್ಲಿ ಘೋಷಣೆ ಮಾಡಿದ್ದಾರೆ ಎಂದರು.

Cut-off box - 26ರಂದು ಮುಖ್ಯಮಂತ್ರಿ ಅಭಿನಂದನಾ ಸಮಾರಂಭ ‘ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭ ಫೆ. 26ರಂದು ಬಸವಕಲ್ಯಾಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಪ್ರಗತಿಪರ ಸಂಘಟನೆಗಳಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ‘ಸಿದ್ದರಾಮಯ್ಯನವರು ಬಹು ವರ್ಷಗಳ ಕನಸು ನನಸು ಮಾಡಿದ್ದಾರೆ. 26ರಂದು ಬಸವಕಲ್ಯಾಣದಲ್ಲಿ ಅವರಿಗೆ ಅಭಿನಂದನಾ ಸಮಾರಂಭ ಇಟ್ಟುಕೊಳ್ಳಲಾಗಿದೆ. ಮಹತ್ವದ ಕೆಲಸ ಮಾಡಿರುವ ಅವರಿಗೆ ಅಭಿನಂದನೆ ಸಲ್ಲಿಸುವುದು ನಮ್ಮ ಕರ್ತವ್ಯ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಯಶಸ್ವಿ ಮಾಡಬೇಕು’ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

Cut-off box - ಬಸವೇಶ್ವರ ವೃತ್ತದಲ್ಲಿ ಸಂಭ್ರಮಾಚರಣೆ ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಹಾಕುವಂತೆ ಆದೇಶ ಹೊರಡಿಸಿರುವುದರಿಂದ ಲಿಂಗಾಯತ ಸಂಘಟನೆಗಳು ಬಸವ ಭಕ್ತರು ಪ್ರಗತಿಪರ ಸಂಘಟನೆಗಳವರು ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಸಂಭ್ರಮಾಚರಣೆ ಮಾಡಿದರು. ಬಸವೇಶ್ವರರ ಅಶ್ವಾರೂಢ ಮೂರ್ತಿಗೆ ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧಿಪತಿ ಮಾತೆ ಗಂಗಾದೇವಿ ಅವರು ಮಾಲಾರ್ಪಣೆ ಮಾಡಿದರು. ಬಳಿಕ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ರಂಗಮಂದಿರದ ವರೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಿತು. ಬಸವಕಲ್ಯಾಣ ಹರಳಯ್ಯ ಪೀಠದ ಅಕ್ಕ ಗಂಗಾಂಬಿಕೆ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಬಸವಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT