ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಅನಿಷ್ಟ ಪದ್ಧತಿಯಿಂದ ಲಿಂಗಾನುಪಾತ ಕುಸಿತ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅಭಿಮತ
Last Updated 4 ಜನವರಿ 2020, 15:42 IST
ಅಕ್ಷರ ಗಾತ್ರ

ಬೀದರ್‌: ‘ಹೆಣ್ಣು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಂಸ್ಕೃತಿ ಹಾಗೂ ಸಂಸ್ಕಾರ ತಲುಪಿಸುವ ಕಾರ್ಯ ಮಾಡುತ್ತಿದ್ದರೂ ಸಾಮಾಜಿಕ ಅನಿಷ್ಟ ಪದ್ಧತಿಯಿಂದಾಗಿ ಲಿಂಗಾನುಪಾತ ಕುಸಿಯುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಆಯೋಜಿಸಿದ್ದ ‘ಬೇಟಿ ಬಚಾವೋ ಬೇಟಿ ಪಡಾವೋ’ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಗಂಡು ಹೆಣ್ಣು ಎನ್ನುವುದು ಸೃಷ್ಟಿಯ ನಿಯಮ. ಗಂಡು, ಹೆಣ್ಣು ಒಬ್ಬೊರನ್ನೊಬ್ಬರು ಬಿಟ್ಟು ಕೌಟುಂಬಿಕ ಬದುಕು ಸಾಗಿಸಲಾರರು. ಪ್ರತಿಯೊಬ್ಬರಿಗೆ ಅವರದ್ದೇ ಆದ ಜವಾಬ್ದಾರಿಗಳಿವೆ. ಮಹಿಳೆಯನ್ನು ಕಡೆಗಣಿಸುವುದು ಸರಿಯಲ್ಲ. ಸೃಷ್ಟಿಯ ನಿಯಮವನ್ನು ಗೌರವಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ’ ಎಂದು ಹೇಳಿದರು.

‘ಸಮಾಜದಲ್ಲಿ ಬಲವಾಗಿ ಬೇರೂರಿರುವ ತಪ್ಪು ಕಲ್ಪನೆಯನ್ನು ತೊಲಗಿಸಬೇಕಿದೆ. ಮಹಿಳೆ, ಪುರುಷನಷ್ಟೇ ಸಮರ್ಥಳಾಗಿದ್ದಾಳೆ. ಮಹಿಳೆಯ ಮನೆಯ ಕೆಲಸಕ್ಕೆ ಬೆಲೆ ಕಟ್ಟಲಾಗದು. ಅವಳ ಕೆಲಸಕ್ಕೆ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯ ಸಂಬಳದ ಮೊತ್ತಕ್ಕೆ ಹೋಲಿಸಿದರೂ ಅದು ಕಡಿಮೆಯಾಗುತ್ತದೆ’ ಎಂದರು.

‘ನನ್ನ ಸೇವಾ ಅವಧಿಯಲ್ಲಿ ಮೂವರು ಮಹಿಳೆಯರು ಡಿವೈಎಸ್‌ಪಿಯಾಗಿ ಪೊಲೀಸ್‌ ಇಲಾಖೆಗೆ ಸೇರಿಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿರುವ 30 ಮಹಿಳಾ ಸಿಬ್ಬಂದಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಪ್ರೇಮಾವತಿ ಮನಗೂಳಿ ಮಾತನಾಡಿ, ‘ಹೆಣ್ಣು ಸೃಷ್ಟಿಯ ಸ್ಥಾನದಲ್ಲಿದ್ದಾಳೆ. ಅಂತೆಯೇ ಭೂ ತಾಯಿ, ನದಿಗಳಿಗೆ ಹೆಣ್ಣಿನ ಹೆಸರಿದೆ. ಆದರೆ ಇಂದು ಹೆಣ್ಣು ಭ್ರೂಣವನ್ನು ಗರ್ಭದಲ್ಲಿರುವಾಗಲೇ ತೆಗೆಸುತ್ತಿರುವುದು ವಿಷಾದನೀಯ’ ಎಂದರು.

‘ಹೆಣ್ಣು ಹುಣ್ಣು ಎನ್ನುವ ತಪ್ಪು ಕಲ್ಪನೆಯಿಂದಾಗಿ ತೆರೆಮರೆಯಲ್ಲಿ ಭ್ರೂಣಹತ್ಯೆ ನಡೆಯುತ್ತಿದೆ. ಅನಿಷ್ಠ ಪದ್ಧತಿಗಳಿಗೆ ಕಡಿವಾಣ ಹಾಕಲೆಂದೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಹ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ಇಂದು ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದಾಳೆ. ಮುಂದಿನ ಪೀಳಿಗೆಗಾಗಿ ಹೆಣ್ಣುಮಕ್ಕಳನ್ನು ಉಳಿಸಬೇಕಿದೆ. ಅವರಿಗೆ ಉತ್ತಮ ಶಿಕ್ಷಣ ನೀಡಿ ಸದೃಢಗೊಳಿಸಬೇಕಾಗಿದೆ’ ಎಂದು ನುಡಿದರು.

ಜಿಲ್ಲಾ ಕಾನೂನು ಸೇವೆಗಳ ಅಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಗದೀಶ ಜಗತಾಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಸಿ.ಚಂದ್ರಶೇಖರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಕಾಂತ ಜಾಧವ್ ಇದ್ದರು.

ಗೌರಿಶಂಕರ ಪ್ರತಾಪುರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT