ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಚಿವ ಖೂಬಾ ಮನೆ ದೇವರು ಸುಳ್ಳು–ಸಚಿವ ಖಂಡ್ರೆ ವ್ಯಂಗ್ಯ

Published 28 ಮಾರ್ಚ್ 2024, 15:11 IST
Last Updated 28 ಮಾರ್ಚ್ 2024, 15:11 IST
ಅಕ್ಷರ ಗಾತ್ರ

ಬೀದರ್‌: ‘ಕೇಂದ್ರ ಸಚಿವ ಭಗವಂತ ಖೂಬಾ ಅವರ ಮನೆ ದೇವರು ಸುಳ್ಳು’ ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ವ್ಯಂಗ್ಯವಾಗಿ ನುಡಿದರು.

ಹಾಲಿ ಬಿಜೆಪಿಯ ಸಂಸದರೂ ಆದ ಕೇಂದ್ರ ಮಂತ್ರಿ ಭಗವಂತ ಖೂಬಾ ಅವರು ಹತ್ತು ವರ್ಷಗಳಲ್ಲಿ ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂದು ಜನ ಉತ್ತರ ಕೇಳುತ್ತಿದ್ದಾರೆ. ಹತ್ತು ವರ್ಷಗಳಲ್ಲಿ ಅವರ ಸಾಧನೆ ಏನೂ ಇಲ್ಲ. ಬರೀ ಸುಳ್ಳು ಹೇಳುವುದೇ ಅವರ ಕೆಲಸ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

ಜಿಲ್ಲೆಗೆ ‘ಸಿಪೆಟ್‌’ ತರುತ್ತೇನೆ ಎಂದು ಹೇಳಿದ್ದರು. ಆದರೆ, ಅದು ಬರಲಿಲ್ಲ. ಎಫ್‌ಎಂ ಕೇಂದ್ರ ಬರಲಿಲ್ಲ. ನಮ್ಮ ಪ್ರಯತ್ನದಿಂದ ಆರಂಭಗೊಂಡಿದ್ದ ಬೀದರ್‌–ಬೆಂಗಳೂರು ವಿಮಾನಯಾನ ಸೇವೆ ನಿಂತು ಹೋಗಿದೆ. ಮರು ಆರಂಭಿಸಲು ಅವರು ಏನೂ ಮಾಡಿಲ್ಲ. ಜಿಲ್ಲೆಯ ಜನ ಅವರ ದುರಹಂಕಾರ, ದರ್ಪ ನೋಡುತ್ತಿದ್ದಾರೆ. ಯಾರ ಜತೆಗೂ ಅವರ ನಡವಳಿಕೆ ಸರಿ ಇಲ್ಲ. ಜನ ಅವರಿಂದ ಬೇಸತ್ತು ಹೋಗಿದ್ದಾರೆ. ಹತ್ತು ವರ್ಷದ ಅವರ ಅಧಿಕಾರ ಅಂತ್ಯಗೊಳಿಸಲು ಜನ ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಖೂಬಾ ಬಗ್ಗೆ ಅವರ ಸ್ವಪಕ್ಷೀಯ ಶಾಸಕರಿಗೂ ಬೇಸರವಿದೆ. ಖೂಬಾ ಅವರು ನನ್ನ ಕೊಲೆ ಮಾಡಿಸಿ ಉಪಚುನಾವಣೆ ಮಾಡಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಅವರ ಪಕ್ಷದ ಶಾಸಕರು (ಪ್ರಭು ಚವಾಣ್‌) ಬಹಿರಂಗ ಸಭೆಯಲ್ಲಿ ಅವರ ಪಕ್ಷದ ಮುಖಂಡರ ಕಾಲಿಗೆ ಬಿದ್ದಿದ್ದಾರೆ. ಅದಕ್ಕೆ ಖೂಬಾ ಉತ್ತರವೇ ಕೊಡಲಿಲ್ಲ. ಖೂಬಾ ಅವರಿಗೆ ಇದು ಕೊನೆಯ ಚುನಾವಣೆ. ಅವರ ಅಧಿಕಾರದ ಅವಧಿಯಲ್ಲಿ ಉದ್ಯಮ ತರಲಿಲ್ಲ. ಉದ್ಯೋಗ ಸೃಷ್ಟಿಸಲಿಲ್ಲ. ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸುತ್ತೇನೆ ಎಂದು ಗೃಹಸಚಿವ ಅಮಿತ್‌ ಷಾ ಅವರ ಮೂಲಕ ಭರವಸೆ ಕೊಡಿಸಿದ್ದರು. ಆದರೆ, ಆ ಭರವಸೆ ಈಡೇರಿಲ್ಲ. ಬದಲಾಗಿ ಬಿಎಸ್‌ಎಸ್‌ಕೆ ನಾಶವಾಗಿದೆ ಎಂದು ಆರೋಪಿಸಿದರು.

‘ನನ್ನ ಸ್ಪರ್ಧೆ ಸಾಗರ್‌ ಖಂಡ್ರೆ ವಿರುದ್ಧವಲ್ಲ, ಅವರ ತಂದೆ ಈಶ್ವರ ಖಂಡ್ರೆ ಅವರೊಂದಿಗೆ ಇದೆ’ ಎಂದು ಖೂಬಾ ಹೇಳಿದ್ದಾರೆ. ಅವರ ಸವಾಲು ಸ್ವೀಕರಿಸುತ್ತೇನೆ. ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅದು ಮರುಕಳಿಸಲಿದೆ ಎಂದರು.

ನೌಬಾದ್‌–ಭಾಲ್ಕಿ, ಔರಾದ್‌–ಬೀದರ್‌ ಎಷ್ಟು ವರ್ಷಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ಅಪೂರ್ಣ, ಕಳಪೆ ಕಾಮಗಾರಿ ಆಗಿದೆ. ಅನೇಕರು ಆ ಹೆದ್ದಾರಿಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ, ಗಾಯಗೊಂಡಿದ್ದಾರೆ. ಖೂಬಾ ಅವರಿಗೆ ದೂರದೃಷ್ಟಿಯೇ ಇಲ್ಲ. ನಮ್ಮ ಅವಧಿಯಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಅವರು ಓಡಾಡುತ್ತಿದ್ದಾರೆ. ನಾವು ಕಟ್ಟಿದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಮ್ಮ ಪಕ್ಷ, ನಮ್ಮ ಮನೆತನ ಏನು ಮಾಡಿದೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಬಿಜೆಪಿಯ ವೈಫಲ್ಯ, ಸ್ಥಳೀಯ ಸಂಸದರ ಸುಳ್ಳು, ಅವರ ದುರ್ನಡತೆ, ದರ್ಪ ಹಾಗೂ ಕಾಂಗ್ರೆಸ್‌ ಪಕ್ಷದ ಸಾಧನೆಗಳನ್ನು ತಿಳಿಸಿ ಜನರಿಂದ ಮತ ಕೇಳುತ್ತೇವೆ. ಬರುವ ದಿನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಪರ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಕರ್ನಾಟಕ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ಹಲವು ಮುಖಂಡರು ಬರಲಿದ್ದಾರೆ ಎಂದರು.

ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್‌ ಅವರ ಲೋಕಸಭೆ ಚುನಾವಣೆ ಟಿಕೆಟ್‌ ಕಟ್‌ ಆಗಿರಲಿಲ್ಲ. ಅವರು ಸ್ಪರ್ಧಿಸುವುದಿಲ್ಲ ಎಂದು ಹೇಳಿ ಹಿಂದೆ ಸರಿದರು ಎಂದು ಪ್ರಶ್ನೆಗೆ ಸಚಿವ ಖಂಡ್ರೆ ಪ್ರತಿಕ್ರಿಯಿಸಿದರು.

ಲೋಕಸಭೆ ಚುನಾವಣೆ ಮುಗಿದ ನಂತರ ಭಗವಂತ ಖೂಬಾ ಅವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತು ಗೆದ್ದು ತೋರಿಸಲಿ.

–ಈಶ್ವರ ಬಿ. ಖಂಡ್ರೆ ಪರಿಸರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT