ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಕಲರವ, ಚೆಂದದ ಆಟ

Last Updated 9 ನವೆಂಬರ್ 2021, 5:38 IST
ಅಕ್ಷರ ಗಾತ್ರ

ಬೀದರ್: ಕೋವಿಡ್ ಕಾರಣದಿಂದ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಅಂಗನವಾಡಿಗಳು ಸೋಮವಾರದಿಂದ ಮತ್ತೆ ತೆರೆದಿದ್ದು, ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿ ಪುಟ್ಟ ಮಕ್ಕಳ ನಗುವಿನ ಕಲರವ ಕೇಳಿಬಂತು.

ಅಂಗನವಾಡಿಗಳ ಪುನರಾರಂಭಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾಯಾದ್ಯಂತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತೆಗೆದು ಕೊಂಡಿತು. ಜಿಲ್ಲೆಯ ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿ, ಔರಾದ್ ಸೇರಿದಂತೆ ಎಲ್ಲ ಕೇಂದ್ರಗಳಲ್ಲಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿತ್ತು. ಕೇಂದ್ರದಲ್ಲಿ ಮಕ್ಕಳು ಕುಳಿತುಕೊಳ್ಳುವ ಡೆಸ್ಕ್‌, ಕುರ್ಚಿ, ಆಟಿಕೆ ಸಾಮಾನುಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗಿತ್ತು.

ಮಕ್ಕಳ ಜತೆಗೆ ಪಾಲಕರು ಸಹ ಅಂಗನವಾಡಿಗಳಿಗೆ ಆಗಮಿಸಿದರು. ಮೊದಲ ದಿನವೇ ಶೇ 50ಕ್ಕೂ ಅಧಿಕ ಹಾಜರಾತಿ ಇತ್ತು. ಮನೆಯಿಂದ ಮೊದಲ ಬಾರಿ ಹೊರ ಒಂದೆಡೆ ಸೇರಿದ ಮಕ್ಕಳು ವಿವಿಧ ಕಲಿಕಾ ಚಟುವಟಿಕೆಗಳಲ್ಲಿ ಸಂತಸದಿಂದ ತೊಡಗಿಸಿಕೊಂಡದ್ದು ಕಂಡುಬಂತು.

ಅಂಗನವಾಡಿಗಳಲ್ಲಿ ಮಕ್ಕಳಿಗೆ ಹೂವು ನೀಡಿ, ಪುಷ್ಪ ವೃಷ್ಟಿ ಮಾಡಿ ಬರಮಾಡಿಕೊಳ್ಳಲಾಯಿತು. ಕೆಲವು ಕಡೆ ಬಿಸ್ಕತ್ ಹಾಗೂ ಚಾಕೊಲೇಟ್ ನೀಡಲಾಯಿತು.

ನಗರದ ಹಳ್ಳದಕೇರಿ, ಲಾಡಗೇರಿ, ಹೂಗೇರಿ, ಶಹಾಪುರ ಗೇಟ್, ಟಿಡಿಬಿ ಕಾಲೊನಿ ಸೇರಿದಂತೆ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಹೂವು, ಮಾವಿನ ತೋರಣ ಕಟ್ಟಿ ಸಿಂಗರಿಸಲಾಯಿತು. ಆವರಣದಲ್ಲಿ ರಂಗೋಲಿ ಸಹ ಬಿಡಿಸಲಾಯಿತು.

ಹಳ್ಳದಕೇರಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಮಂಗಲಾ ದಿಡಗೆ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಗುಲಾಬಿ ಹೂವು ನೀಡಿ ಮಕ್ಕಳನ್ನು ಸ್ವಾಗತಿಸಿದರು.

ಬಾಲ ವಿಕಾಸ ಸಮಿತಿಯ ಅನಿಲಕುಮಾರ, ರಾಣಿ, ಸಪ್ನಾ, ಅಂಬಿಕಾ, ಸಹಾಯಕಿ ಶೋಭಾರಾಣಿ ಇದ್ದರು.

ಚಿಣ್ಣರ ಮೇಲೆ ಪುಷ್ಪವೃಷ್ಟಿ ಮಾಡಿ ಸ್ವಾಗತ

ಭಾಲ್ಕಿ: ತಾಲ್ಲೂಕಿನ ಡೊಂಗರಗಿ ಗ್ರಾಮದಲ್ಲಿ ಸೋಮವಾರ ಅಂಗನ ವಾಡಿ ಕೇಂದ್ರ ಆರಂಭವಾದ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಪುಷ್ಪವೃಷ್ಟಿಗೈದು ಬರ ಮಾಡಿಕೊಳ್ಳಲಾಯಿತು.

ತಳಿರು-ತೋರಣಗಳಿಂದ ಶೃಂಗಾರಗೊಂಡಿದ್ದ ಅಂಗನವಾಡಿ ಕೇಂದ್ರ ಮದುವಣಗಿತ್ತಿಯಂತೆ ಕಾಣುತ್ತಿತ್ತು.

ಗ್ರಾಮ ಪಂಚಾಯಿತಿ ಸದಸ್ಯರಾದ ಮುನ್ನೆಮ್ಮ ಪೊಲೀಸ್ ಪಾಟೀಲ ಮಾತನಾಡಿ, ‘ಇಂದಿನ ಮಕ್ಕಳೇ ನಾಳಿನ ಸದೃಢ ಭಾರತದ ನಿರ್ಮಾಪಕರು. ಮಕ್ಕಳ ಆರೈಕೆ, ಪಾಲನೆ, ಪೋಷಣೆಯಲ್ಲಿ ಪಾಲಕರು ಕಿಂಚಿತ್ತೂ ನಿಷ್ಕಾಳಜಿಯನ್ನು ತೋರಬಾರದು. ಚಿಕ್ಕಂದಿನಿಂದಲೇ ದೇಶ, ಸಮಾಜ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸಬೇಕು’ ಎಂದು ಹೇಳಿದರು.

ಮಕ್ಕಳಿಗೆ ಧೀರ, ಶೂರ, ಯೋಧರ, ಐತಿಹಾಸಿಕ ನಾಯಕರ ಕುರಿತ ಕಥೆಗಳನ್ನು ಹೇಳುವುದರ ಮೂಲಕ ಅವರನ್ನು ಬಾಲ ವೀರರನ್ನಾಗಿ ಮಾಡಬೇಕು. ಮಕ್ಕಳ ದೇಹ, ಮನಸ್ಸು, ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿಯನ್ನು ತೋರಬೇಕು ಎಂದರು.

ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಂಗಮ್ಮ, ಗ್ರಾಮಲೆಕ್ಕಾಧಿಕಾರಿ ಮಾರುತಿ, ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕರಾದ ಮಹಾ ನಂದಾ, ಜಗನ್ನಾಥ, ವಿಶಾದ್ ಖಾದ್ರಿ ಮಕ್ಕಳಿಗೆ ಹಾಲು, ಹಣ್ಣು, ಸಿಹಿ ನೀಡಿದರು.

ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಬಂಡೆಪ್ಪಾ ಧೂಳೆ, ಮುಖಂಡರಾದ ಬಾಬುರಾವ್‌ ಹುಣಜೆ, ಬಂಡೆಪ್ಪಾ ಬಿರಾದಾರ, ಹಾವಗಿರಾವ್‌ ಪೊಲೀಸ್ ಪಾಟೀಲ, ಗಂಗಶೆಟ್ಟಿ ಬಿರಾದಾರ, ವಿದ್ಯಾವತಿ ಹುಣಜೆ, ಆಶಾ ಕಾರ್ಯಕರ್ತೆ ಚಿನ್ನಮ್ಮ ಪೊಲೀಸ್ ಪಾಟೀಲ, ಅಶ್ವಿನಿ ಮಹೇಶ, ಲಕ್ಷ್ಮೀ ದಿಲೀಪ, ಶೋಭಾ ಪಂಡಿತ ಇದ್ದರು.

ಶೇ 50ರಷ್ಟು ಮಕ್ಕಳು ಹಾಜರು

ಔರಾದ್: ತಾಲ್ಲೂಕಿನಾದ್ಯಂತ ಸೋಮವಾರ ಎಲ್‌ಕೆಜಿ, ಯುಕೆಜಿ ಹಾಗೂ ಅಂಗವಾಡಿ ಕೇಂದ್ರಗಳ ತರಗತಿಗಳು ಆರಂಭವಾದವು.

ಮಕ್ಕಳನ್ನು ಸ್ವಾಗತಿಸಲು ಅಂಗನವಾಡಿ ಕೇಂದ್ರಗಳನ್ನು ಸಿಂಗರಿಸಲಾಯಿತು. ತಾಲ್ಲೂಕಿನ ಜೀರ್ಗಾ (ಬಿ) ಗ್ರಾಮದ ಸೂಪರ್ ಅಂಗನವಾಡಿಯಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ಶಂಭುಲಿಂಗ ಹಿರೇಮಠ ಅವರು ಮಕ್ಕಳಿಗೆ ಹೂ, ಚಾಕೂಲೇಟ್ ನೀಡಿ ಬರಮಾಡಿಕೊಂಡರು.
'ಸರ್ಕಾರದ ಮಾರ್ಗಸೂಚಿ‌ ಪ್ರಕಾರ ಅಗತ್ಯ ಸಿದ್ಧತೆ ಮಾಡಿಕೊಂಡು ಅಂಗನವಾಡಿ ಕೇಂದ್ರಗಳು‌ ತೆರೆಯಲಾಗಿದೆ. ಮಕ್ಕಳು ಖುಷಿಯಿಂದ ಬಂದಿದ್ದಾರೆ. ಪಾಲಕರಿಂದಲೂ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಆಸನ, ಆಟಿಕೆ, ಪಾಠದ ಉಪಕರಣಗಳು ಶುಚಿ‌ ಮಾಡಲಾಗಿದೆ. ಆಹಾರ ತಯಾರಿಕೆಯಲ್ಲೂ ಶುಚಿತ್ವ ಕಾಪಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

‘ಸರ್ಕಾರಿ ಹಾಗೂ ಅನುದಾನಿತ, ಅನುದಾನರಹಿತ ಶಾಲೆಗಳಲ್ಲೂ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಗೊಂಡಿವೆ. ಶೇ 50ರಷ್ಟು ಮಕ್ಕಳು‌ ಶಾಲೆಗೆ ಬಂದಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಚ್. ನಗನೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT