ಭಾನುವಾರ, ಜೂನ್ 13, 2021
21 °C

ಬೀದರ್: ಆಕಾಶದಲ್ಲಿ ಖಗೋಳ ಕೌತುಕ, ವೃತ್ತಾಕಾರದ ಕಾಮನಬಿಲ್ಲು ಕಂಡು ಬೆರಗಾದ ಜನ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ನಗರ ಸೇರಿದಂತೆ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಬುಧವಾರ ಆಕಾಶದಲ್ಲಿ ಖಗೋಳ ವಿಸ್ಮಯ ಗೋಚರಿಸಿತು.
ಮಧ್ಯಾಹ್ನ ಸೂರ್ಯನ ಸುತ್ತಲೂ ಸಪ್ತರಂಗದ ಉಂಗುರದ ಆಕಾರ ಸುತ್ತುವರಿದಿತ್ತು. ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡಿದ ಸುದ್ದಿ ವಾಟ್ಸ್ಆ್ಯಪ್‌ಗಳಲ್ಲಿ ಹರಡುತ್ತಿದ್ದಂತೆಯೇ ಮಕ್ಕಳು, ಯುವಕರು, ಯುವತಿಯರು ಮನೆಗಳಿಂದ ಹೊರಗೆ ಬಂದು ಖಗೋಳ ವಿಸ್ಮಯ ವೀಕ್ಷಿಸಿ ಸಂಭ್ರಮಿಸಿದರು.

ವಿದ್ಯಾರ್ಥಿಗಳು, ಯುವತಿಯರು ಹಾಗೂ ಯುವಕರು ಆಕಾಶದತ್ತ ಮೊಬೈಲ್‌ ಹಿಡಿದು ಕ್ಯಾಮೆರಾಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿದರು. ಪೂರ್ಣ ವೃತ್ತಾಕಾರದ ಕಾಮನಬಿಲ್ಲು ಸ್ಪಷ್ಟವಾಗಿ ಕಾಣುತ್ತಿದ್ದರಿಂದ ಅನೇಕ ಜನರು ಸೆಲ್ಫಿ ಮಾದರಿಯಲ್ಲಿ ಕ್ಯಾಮೆರಾ ಕ್ಲಿಕ್ಕಿಸಿ ಫೋಟೊ ತೆಗೆದುಕೊಂಡರು.

ಮನೆಯಂಗಳದಲ್ಲಿ ಬಹಳ ಹೊತ್ತಿನವರೆಗೂ ಸೂರ್ಯನ ಸುತ್ತ ಸುತ್ತುವರಿದಿದ್ದ ಕಾಮಮನಬಿಲ್ಲಿನ ದೃಶ್ಯವನ್ನು ವೀಕ್ಷಿಸಿದರು. ಅರ್ಧ ಚಂದ್ರಕಾರದ ಕಾಮನಬಿಲ್ಲು ನೋಡಿದ್ದ ಜನ ನೆತ್ತಿಯ ಮೇಲೆ ಕಾಮನಬಿಲ್ಲು ಕಂಡು ಬೆರಗಾದರು. ತಕ್ಷಣ ಬಂಧು, ಮಿತ್ರರಿಗೂ ಮೊಬೈಲ್‌ ಕರೆ ಮಾಡಿ ವೀಕ್ಷಿಸುವಂತೆ ತಿಳಿಸಿದರು.

ಔರಾದ್ ಹಾಗೂ ಕಮಲನಗರದ ಗ್ರಾಮಾಂತರ ಪ್ರದೇಶದ ಜನ ಸಹ ತಮ್ಮ ಮನೆಗಳಿಂದ ಹೊರಗೆ ಬಂದು ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರಯತ್ನಿಸಿದರು. ಆದರೆ ಅವರಿಗೆ ಈ ದೃಶ್ಯ ಗೋಚರಿಸಲಿಲ್ಲ. ಹೀಗಾಗಿ ಬೀದರ್‌ನಲ್ಲಿರುವ ಬಂಧುಗಳಿಗೆ ಹಾಗೂ ಪತ್ರಿಕಾ ಕಚೇರಿಗಳಿಗೆ ಕರೆ ಮಾಡಿ ಖಾತರಿ ಪಡಿಸಿಕೊಂಡರು. ದೃಶ್ಯ ಕಣ್ಣಿಗೆ ಕಾಣದ ಕಾರಣ ನಿರಾಶರಾದರು.

‘ಮೊದಲ ಬಾರಿಗೆ ಆಕಾಶದಲ್ಲಿ ಸೂರ್ಯನ ಸುತ್ತ ಬೆಳಕಿನ ಉಂಗುರ ಕಂಡು ಆಶ್ಚರ್ಯವಾಯಿತು. ಸೂರ್ಯನ ಸುತ್ತ ಕಾಮನುಬಿಲ್ಲು ಸುತ್ತುವರಿದಿತ್ತು. ಇದು ನಮಗೆ ಹೊಸ ಅನುಭವ ನೀಡಿತು’ ಎಂದು ಬಾಲಕರಾದ ಶ್ರೀಕಾಂತ ತ್ರಿಪುರಾಂತ ಹಾಗೂ ನಿತಿನ್ ಉದಗಿರೆ ಖುಷಿಯಿಂದ ಹೇಳಿದರು.

'ಗಾಳಿ ವೇಗ ತಗ್ಗಿದ ಕಾರಣ ಮೋಡಗಳು ಒಂದೇ ಕಡೆ ಸೇರಿಕೊಂಡಿವೆ. ಸೂರ್ಯನ ಸುತ್ತ ಆವರಿಸಿರುವ ಮೋಡಗಳಲ್ಲಿ ಹುದುಗಿದ ಮಂಜುಗಡ್ಡೆ ಕಣಗಳ ಮೇಲೆ ಬೆಳಕು ಹರಿದ ಪರಿಣಾಮ ಆಕರ್ಷಕ ವೃತ್ತ ಗೋಚರಿಸಿದೆ. 20 ರಿಂದ 25 ವರ್ಷಗಳ ಅವಧಿಯಲ್ಲಿ ಆಕಾಶದಲ್ಲಿ ಇಂತಹ ದೃಶ್ಯಗಳು ಗೋಚರಿಸುತ್ತವೆ’ ಎಂದು ಹವಾಮಾನ ಇಲಾಖೆಯ ತಜ್ಞ ಬಸವರಾಜ ಬಿರಾದಾರ ತಿಳಿಸಿದರು.

‘ವಾತಾವರಣದಲ್ಲಿ ತೇವಾಂಶ ಹೆಚ್ಚು ಇರುವ ಮತ್ತು ಮಳೆ ಬರುವ ಮುನ್ಸೂಚನೆ ನೀಡಿದೆ. ಈ ವರ್ಷ ಉತ್ತಮ ಮಳೆ ಸುರಿಯುವ ಲಕ್ಷಣವೂ ಇದಾಗಿದೆ’ ಎಂದು ಹೇಳಿದರು.

ಸೂರ್ಯನಿಂದ ವಿಕಿರಣ ಹೊರ ಹೊಮ್ಮುತ್ತಿರುತ್ತದೆ. ಸೂರ್ಯನ ಸುತ್ತ ಎಂತಹದ್ದೇ ಕೌತುಕ ನಡೆದರೂ ಬರಿಗಣ್ಣಿನಿಂದ ಬಹಳ ಹೊತ್ತು ನೋಡುವುದು ಸರಿಯಲ್ಲ. ಅದು ಮಿದುಳು ಹಾಗೂ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ತಾರಾಲಯದಲ್ಲಿ ಅಥವಾ ನೆಗೆಟಿವ್ ಫಿಲ್ಮ ಮೂಲಕ ಪರೋಕ್ಷವಾಗಿ ನೋಡುವುದು ಒಳಿತು’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು