ಭಾನುವಾರ, ಸೆಪ್ಟೆಂಬರ್ 19, 2021
24 °C
ಸಮಸ್ಯೆಯಲ್ಲಿ ಮೂರು ರಾಜ್ಯಗಳ ಪ್ರಯಾಣಿಕರು

ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ಸಂಚಾರ ನಿರ್ಬಂಧ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬೀದರ್-ಔರಾದ್ ಮಧ್ಯದ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 161ಎ)ಯಲ್ಲಿರುವ ಮಾಂಜ್ರಾ ನದಿಗೆ ನಿರ್ಮಸಿದ ಸೇತುವೆಯನ್ನು ಅದೆಷ್ಟು ಬಾರಿ ದುರಸ್ತಿ ಮಾಡಿದ್ದಾರೋ ಲೆಕ್ಕವಿಲ್ಲ. ಜಿಲ್ಲೆಯ ಔರಾದ್‌ ತಾಲ್ಲೂಕು ಅಷ್ಟೇ ಅಲ್ಲ; ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದ ಜಿಲ್ಲೆಗಳಿಗೂ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದು. ಆದರೆ ಅಧಿಕಾರಿಗಳು ಸೇತುವೆ ದುರಸ್ತಿ ಮಾಡಲು ಕಿಂಚಿತ್ತೂ ಆಸಕ್ತಿ ತೋರಿಸುತ್ತಿಲ್ಲ.

ಮಾಂಜ್ರಾ ನದಿಗೆ ಅಡ್ಡಲಾಗಿರುವ ಕೌಠಾ(ಬಿ) ಸೇತುವೆ ರಿಪೇರಿ ಹೆಸರಿನಲ್ಲಿ ಈ ಹಿಂದೆ ಆರು ತಿಂಗಳಿಗೂ ಹೆಚ್ಚು ಕಾಲ ಬಸ್ ಸೇರಿದಂತೆ ಎಲ್ಲ ರೀತಿಯ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಕಳಪೆ ಕಾಮಗಾರಿ ಹಾಗೂ ಸೇತುವೆಯ ಎರಡೂ ಬದಿ ಭೂ ಕುಸಿತ ಆಗಿ ಈ ರಸ್ತೆ ಮೇಲಿನ ಸಂಚಾರ ನಿರ್ಬಂಧಿಸಲಾಗಿದೆ. ಒಂದೂವರೆ ವರ್ಷದಲ್ಲಿ ಎರಡನೇ ಬಾರಿ ಸಂಚಾರ ನಿರ್ಬಂಧಿಸಲಾಗಿದೆ.

ಬೀದರ್-ಔರಾದ್ ನಡುವಿನ ಅಂತರರಾಜ್ಯ ಹೆದ್ದಾರಿಯಲ್ಲಿ ಪದೇ ಪದೇ ಸಂಚಾರ ನಿರ್ಬಂಧಿಸುತ್ತಿರುವ ಕಾರಣ ಗಡಿ ಭಾಗದ ಜನ ತೊಂದರೆಗೆ ಒಳಗಾಗಬೇಕಾಗಿದೆ. ಕೃಷಿ ಉತ್ಪನ್ನಗಳನ್ನು ಬೀದರ್‌ ನಗರಕ್ಕೆ ತರಲು ಹರಸಾಹಸ ಮಾಡಬೇಕಾಗಿದೆ. ಕಂದಗೂಳ ಸೇತುವೆ ಮಾರ್ಗವಾಗಿ ಸಂಚರಿಸಬೇಕಾಗಿದೆ. ವ್ಯಾಪಾರ ವಹಿವಾಟಿನ ಮೇಲೂ ದುಷ್ಪರಿಣಾಮ ಪರಿಣಾಮ ಬೀರಿದೆ

ಔರಾದ್ ತಾಲ್ಲೂಕಿನ ಜನ ಆರೋಗ್ಯ, ಶಿಕ್ಷಣ, ವ್ಯಾಪಾರ ಸೇರಿದಂತೆ ಎಲ್ಲದಕ್ಕೂ ಜಿಲ್ಲಾ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಬೀದರ್‌ನ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್‌ ಕಾಲೇಜುಗಳಿಗೆ ನಿತ್ಯ ನೂರಾರು ಜನ ಬಂದು ಹೋಗುತ್ತಾರೆ. ಔರಾದ್‌ನಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಬೀದರ್‌ನಲ್ಲೇ ವಾಸವಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕೌಠಾ(ಬಿ) ಸೇತುವೆ ಬಳಿಯ ಬೀದರ್‌ಗೆ ಹೋಗುವ ರಸ್ತೆ ಸಂಚಾರ ಬಂದ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೀದರ್-ಔರಾದ್ ನಡುವಿನ 42 ಕಿ.ಮೀ. ಕ್ರಮಿಸಲು ಹದಗೆಟ್ಟ ರಸ್ತೆಯಿಂದಾಗಿ ಒಂದು ತಾಸು ಬೇಕು.
ಈಗ ಈ ಮುಖ್ಯ ರಸ್ತೆ ಸಂಚಾರ ನಿರ್ಬಂಧದಿಂದ 10 ರಿಂದ 12 ಕಿ.ಮೀ. ಹೆಚ್ಚುವರಿಯಾಗಿ ಕ್ರಮಿಸಿ ಬದಲಿ ರಸ್ತೆ ಮೂಲಕ ಹೋಗಬೇಕಾಗಿದೆ. ಇದರಿಂದ ಸಮಯದ ಜತೆಗೆ ಹೆಚ್ಚುವರಿ ಪ್ರಯಾಣ ಶುಲ್ಕವೂ ಭರಿಸಬೇಕಾಗಿದೆ.

‘ನೋಡಿ ಔರಾದ್ ತಾಲ್ಲೂಕಿನ ಜನರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಕಳೆದ ಆರು ತಿಂಗಳಿನಿಂದ ಬೀದರ್– ಔರಾದ್ ರಸ್ತೆ ಮೇಲೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದರೂ ಯಾರೂ ಕೇಳುತ್ತಿಲ್ಲ. ಒಂದೂವರೆ ವರ್ಷದ ಹಿಂದೆಯೇ ಕೋಟಿಗಟ್ಟಲೇ ಹಣ ಖರ್ಚು ಮಾಡಿ ರಿಪೇರಿ ಮಾಡಿದ ಕೌಠಾ ಸೇತುವೆ ಮತ್ತೆ ಹಾಳಾಗಿದೆ ಎಂದರೆ ಜನ ಏನು ತಿಳಿದುಕೊಳ್ಳಬೇಕು. ಇದೇ ಕ್ಷೇತ್ರವನ್ನು ಪ್ರತಿನಿಧಿಸುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರಿಗೆ ಜನರ ಸಮಸ್ಯೆ ಕಾಣುತ್ತಿಲ್ಲವೆ’ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಧನರಾಜ ಮುಸ್ತಾಪುರ ಪ್ರಶ್ನಿಸುತ್ತಾರೆ.

‘ಬೀದರ್-ಔರಾದ್ ರಸ್ತೆ ಪದೇ ಪದೇ ಹಾಳಾಗುವುದು ಹಾಗೂ ರಿಪೇರಿ ಹೆಸರಿನಲ್ಲಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳುವುದು ನಿರಂತರವಾಗಿ ನಡೆಯುತ್ತಿದೆ. ಈ ಕುರಿತು ನಾನು ಅನೇಕ ಸಾರಿ ಕಾನೂನು ಹೋರಾಟ ಮಾಡಿದ್ದೇನೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿಧಿಗಳು ಸೇರಿಕೊಂಡು ಹೋರಾಟಕ್ಕೂ ಬೆಲೆ ಇಲ್ಲದಂತೆ ಮಾಡಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಸಮಸ್ಯೆ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುಲು ಹಾಗೂ ಭಾರತ ಮಾಲಾ ಯೋಜನೆಯಡಿ ಮಂಜೂರಾದ ಬೀದರ್-ಔರಾದ್ ನಡುವಿನ ಹೆದ್ದಾರಿ ಕಾಮಗಾರಿ ಶೀಘ್ರ ಆರಂಭಿಸಲು ಆಗ್ರಹಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇನೆ’ ಎಂದು ಬೇಸರದಿಂದ ಹೇಳುತ್ತಾರೆ.

‘ಬೀದರ್‌–ಔರಾದ್‌ ಹೆದ್ದಾರಿ ದುರಸ್ತಿ ಕಾರ್ಯಕ್ಕೆ ₹135 ಕೋಟಿ ಮಂಜೂರಾಗಿದೆ. ಹೆದ್ದಾರಿ ಪ್ರಾಧಿಕಾರ ಕಾಮಗಾರಿಯ ಟೆಂಡರ್‌ ಸಹ ಕರೆದಿದೆ. ಆದರೆ, ಹೈದರಾಬಾದ್‌ನ ಕಂಪನಿಯೊಂದು ಹೈಕೋರ್ಟ್‌ ಮೊರೆ ಹೋಗಿರುವ ಕಾರಣ ಹೈಕೋರ್ಟ್‌ ಟೆಂಡರ್‌ಗೆ ತಡೆಯಾಜ್ಞೆ ನೀಡಿದೆ. ಟೆಂಡರ್‌ ತೆರವಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು’ ಎಂದು ಸಂಸದ ಭಗವಂತ ಖೂಬಾ ಹೇಳುತ್ತಾರೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹಾಗೂ ಸಂಸದ ಭಗವಂತ ಖೂಬಾ ಅವರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಎಂದು ಎರಡು ವರ್ಷಗಳಿಂದ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಕಾಮಗಾರಿ ಮಾತ್ರ ಈ ವರೆಗೂ ಆರಂಭವಾಗಿಲ್ಲ ಬೇಸರದಿಂದ ನುಡಿಯುತ್ತಾರೆ ಜನ.

‘ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹಾಗೂ ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ಎರಡು ವಾರಗಳ ಹಿಂದೆ ಸ್ಥಳಕ್ಕೆ ಭೇಟಿ ಕೊಟ್ಟು ಒಂದು ವಾರದಲ್ಲಿ ರಸ್ತೆ ದುರಸ್ತಿ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ, ಈ ವರೆಗೂ ಕಾಮಗಾರಿ ಆರಂಭವಾಗಿಲ್ಲ’ ಎಂದು ಕೌಠಾ ಗ್ರಾಮದ ರೈತ ಸಂಘದ ಮುಖಂಡ ರವಿ ದೇವರೆ ಬೇಸರ ವ್ಯಕ್ತಪಡಿಸುತ್ತಾರೆ.

‘ಲಾರಿಗಳ ಸಂಚಾರ ನಿಷೇಧಿಸಲಿ ಆದರೆ, ರಸ್ತೆ ಸಾರಿಗೆ ಸಂಸ್ಥೆಯ ಸಂಚಾರ ಸ್ಥಗಿತಗೊಳಿಸಿರುವುದು ಸರಿಯಲ್ಲ. ಸೇತುವೆ ಪಕ್ಕ ಇನ್ನೊಂದು ಸರ್ವಿಸ್‌ ರಸ್ತೆಯನ್ನು ನಿರ್ಮಿಸಬೇಕು. ಪ್ರಯಾಣಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು’ ಎಂದು ಕೌಠಾದ ನಿವಾಸಿ ವಿಶ್ವನಾಥ ಧರಣಿ ಮನವಿ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು