ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಕ್ರಿಯಾ ಯೋಜನೆ ಸಿದ್ಧಪಡಿಸಿ

ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 12 ಜೂನ್ 2020, 13:49 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಕಾರ್ಯ ಮುಂದುವರಿಯಲಿದೆ. ಮುಂದಿನ ಆರು ತಿಂಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೋವಿಡ್-19 ಹರಡುವಿಕೆ ತಡೆಯಲು ನಾವೀಗ ಮೊದಲಿಗಿಂತ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತರಾಗಿ ಕೆಲಸ ಮಾಡಬೇಕಿದೆ. ಯಾವುದೇ ಸಂದರ್ಭ ಬಂದರೂ ಅದನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಬೇಕಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ತಲಾ 10 ಜನ ಸ್ವಯಂ ಸೇವಕರನ್ನು ಗುರುತಿಸಬೇಕು’ ಎಂದು ಸೂಚನೆ ನೀಡಿದರು.

‘ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟಲು ಜಿಲ್ಲೆಯ 50 ಸರ್ಕಾರೇತರ ಸಂಘಟನೆಗಳು ಜಿಲ್ಲಾಡಳಿತದೊಂದಿಗೆ ಮೂರು ತಿಂಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಿವೆ. ತುರ್ತು ಸಂದರ್ಭದಲ್ಲಿ ಜನತೆಗೆ ಬೇಕಾದ ಸರ್ಕಾರೇತರ ಸೇವೆ ನೀಡಲು ಸನ್ನದ್ಧರಾಗಿರಬೇಕು’ ಎಂದು ಎನ್‌ಜಿಒಗಳ ಪದಾಧಿಕಾರಿಗಳಲ್ಲಿ ಕೋರಿದರು.

‘ನಿರ್ಗತಿಕರು, ಭಿಕ್ಷುಕರು, ಬಡವರು, ಕಾರ್ಮಿಕರು ಹಾಗೂ ವಲಸಿಗರಿಗೆ ಆಹಾರಧಾನ್ಯ ಕಿಟ್ ವಿತರಣೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆಸ್ಪತ್ರೆಗೆ ಸೇರ್ಪಡೆ, ಔಷಧಿ ಸರಬರಾಜು, ತುರ್ತು ಸಂದರ್ಭದಲ್ಲಿ ಬೇರೆಡೆ ಸಂಚರಿಸಲು ವಾಹನಗಳ ಪಾಸ್ ದೊರಕಿಸಿಕೊಡುವುದು ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿವೆ’ ಎಂದು ತಿಳಿಸಿದರು.

‘ಪರಿಸರ ಸಂರಕ್ಷಣೆ ಕಾರ್ಯವನ್ನು ಮಾಡಬೇಕಿದೆ. ಅರಣ್ಯ ಇಲಾಖೆ ಸಹಯೋಗ ಪಡೆದು ಜಿಲ್ಲೆಯಲ್ಲಿ ಸಸಿ ನೆಡುವ ಕಾರ್ಯವನ್ನು ಜಿಲ್ಲೆಯ ಎಲ್ಲ ಎನ್‌ಜಿಒಗಳು ಮಾಡಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ್ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಕೋಟಪ್ಪಗೋಳ, ಡಿಎಚ್‌ಒ ಡಾ.ವಿ.ಜಿ.ರೆಡ್ಡಿ ಹಾಗೂ ಜಿಲ್ಲೆಯ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರಮುಖರಾದ ಅನಿಲ ಬೆಲ್ದಾರ, ಕೋವಿಡ್-19 ಜಿಲ್ಲಾ ನೋಡಲ್ ಎನ್‌ಜಿಒ ಪುನೀತ್ ಸಾಳೆ, ಟೀಮ್‌ ಯುವಾದ ವಿನಯ ಮಾಳಗೆ, ಕಲಾವಿದರ ಸಂಘದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಎಂ.ಪಿ.ಮುದಾಳೆ, ಸುನೀಲ ಭಾವಿಕಟ್ಟಿ, ವಿಪತ್ತು ನಿರ್ವಹಣಾ ವ್ಯವಸ್ಥಾಪಕ ಸಂದೀಪ್ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT