ಮಂಗಳವಾರ, ಏಪ್ರಿಲ್ 7, 2020
19 °C

ಜಿಲ್ಲೆಯ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ: ಸಂಸದ ಭಗವಂತ ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ರಾಜಕೀಯ ನಾಯಕರು ಪಕ್ಷ ಬೇಧ ಮರೆತು ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಬೇಕಿದೆ. ಇದಕ್ಕೆ ಜನರ ಸಹಕಾರವೂ ಅಗತ್ಯ’ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ನಗರದ ಡಾ.ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಬೀದರ್ ಜಿಲ್ಲೆಯ ಅಭಿವೃದ್ಧಿ ಸಾಧ್ಯತೆಗಳು’ ಕುರಿತ ಸಂವಾದ ಗೋಷ್ಟಿಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮಗಳೇನು’ ಎಂದು ಶ್ರೀಕಾಂತ ಸ್ವಾಮಿ ಪ್ರಶ್ನಿಸಿದರು.

‘ಬೀದರ್‌ ತಾಲ್ಲೂಕಿನ ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ಸ್ಥಗಿತಗೊಂಡಿರುವ ಕಾರ್ಖಾನೆಗಳನ್ನು ಪ್ರಾರಂಭಿಸಲು ಒತ್ತು ಕೊಡಲಾಗುವುದು. ಹೊಸ ಕಾರ್ಖಾನೆಗಳನ್ನು ಸಹ ಪ್ರಾರಂಭಿಸಲು ಚಿಂತನೆ ನಡೆದಿದೆ’ ಎಂದು ಸಚಿವ ಪ್ರಭು ಚವಾಣ್ ಉತ್ತರಿಸಿದರು.

ಹೋರಾಟಗಾರ ಚಂದ್ರಶೇಖರ ಪಾಟೀಲ ಅವರು ‘ಕಾರಂಜಾ ನಿರಾಶ್ರಿತರಿಗೆ ಪರಿಹಾರ ಧನ ಕೊಡಲು ವಿಳಂಬ ಮಾಡುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು. ‘ಇದೊಂದು ದೊಡ್ಡ ಮೊತ್ತದ ಪರಿಹಾರವಾಗಿದೆ. ಶೀಘ್ರದಲ್ಲೇ  ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಅವರು ಜಿಲ್ಲೆಯ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲು ಗೋದಾವರಿ ಜಲಾನಯನ ಅಭಿವೃದ್ಧಿ ಮಂಡಳಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು. ರಾಜೇಂದ್ರ ಮಣಿಗೇರಿ ಜಿಲ್ಲೆಯಲ್ಲಿ ಕೃಷಿ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕನ್ನಡ ಭವನ ನಿರ್ಮಾಣ,  ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಜಿಲ್ಲೆಯಲ್ಲಿ ಕೆಎಎಸ್‌, ಐಎಎಸ್‌ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗೆ ಮುಂದಾಗಬೇಕು ಎಂದು ಹಲವರು ಮನವಿ ಮಾಡಿದರು.

‘ಆಡಳಿತದಲ್ಲಿ ಭ್ರಷ್ಟಾಚಾರ ಮುಕ್ತ ಮಾಡುವ ಉದ್ದೇಶದಿಂದ ಈಗಾಗಲೇ ಜಿಲ್ಲೆಯ ಎಲ್ಲ ತಹಶೀಲ್ದಾರ್ ಕಚೇರಿಗಳಲ್ಲಿ ದೂರು ಪೆಟ್ಟಿಗೆ ಅಳವಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಚಿವರು ತಿಳಿಸಿದರು.

ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ್‌ (ಬಿ)ದಲ್ಲ, ಬೀದರ್ ಸಕ್ಕರೆ ಕಾರ್ಖಾನೆಯನ್ನು ಆರಂಭಿಸುವಂತೆ ಜಿಲ್ಲೆಯ ರೈತರು ಮನವಿ ಮಾಡಿಕೊಂಡರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹಳ್ಳಿಖೇಡದ ಯುವಕರು ಅಸಮಾಧಾನ ವ್ಯಕ್ತ ಪಡಿಸಿದರು.

‘ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಕೆಎಎಸ್, ಐಎಎಸ್ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು’  ಎಂದು ಭರವಸೆ ನೀಡಿದರು.

ಬಸವರಾಜ ಬಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ಜಗದೀಶ ಖೂಬಾ, ಬಿ.ಜಿ.ಶೆಟಕಾರ, ಚನ್ನಬಸಪ್ಪ ಹಾಲಹಳ್ಳಿ, ಪಾಂಡುರಂಗ ಬೆಲ್ದಾರ್,ಡಿ.ಕೆ.ಸಿದ್ರಾಮ್, ನಾಗಶೆಟ್ಟಿ ಧರಂಪುರ ಇದ್ದರು.

ಉದ್ಯಮಿಗಳಾದ ನಾಗೇಂದ್ರ ನಿಟ್ಟೂರೆ, ಚಂದ್ರಕಾಂತ ಕಾಡಾದಿ, ಮಹೇಶ ಚಂದಾಪುರೆ, ರಾಜೇಂದ್ರ ಮಣಿಗೇರೆ,ಭದ್ರಪ್ಪ ಮಿರಕಲ್, ವೀರೇಶ ಚಿದ್ರಿ ಅವರಿಗೆ ಸನ್ಮಾನಿಸಲಾಯಿತು.

ವಿರೂಪಾಕ್ಷ ಗಾದಗಿ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು