ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಕಲಾ ತಂಡಗಳ ಮೆರುಗು

Last Updated 1 ಮಾರ್ಚ್ 2020, 10:00 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ನಗರದಲ್ಲಿ ಶನಿವಾರ ನಡೆದ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷ ಸೋಮನಾಥ ಯಾಳವಾರ ಅವರ ಮೆರವಣಿಗೆಗೆ ಕಲಾ ತಂಡಗಳು ಮೆರುಗು ನೀಡಿದವು.

ತುಮಕೂರಿನ ಗೊಂಬೆ ಕುಣಿತ, ಕಲಬುರ್ಗಿ ಜಿಲ್ಲೆಯ ಕುಸನೂರಿನ ಹಲಗೆ, ಬಸವಕಲ್ಯಾಣ ತಾಲ್ಲೂಕಿನ ಹಣಮಂತವಾಡಿಯ ಡೊಳ್ಳು ಕುಣಿತ, ಸ್ಥಳೀಯ ಚಿಟಿಕೆ ಭಜನೆ, ಲೇಜಿಮ್ ತಂಡಗಳು ಕಲಾ ಪ್ರದರ್ಶನ ಮಾಡಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದವು. ಸಾಂಪ್ರದಾಯಿಕ ವೇಷ ಭೂಷಣ ಧರಿಸಿ ತಲೆ ಮೇಲೆ ಕೊಡ ಹೊತ್ತುಕೊಂಡಿದ್ದ ಲಂಬಾಣಿ ಮಹಿಳೆಯರು, ಮುಖವಾಡಧಾರಿಗಳು ಗಮನ ಸೆಳೆದರು. ಶುಭ್ರ ವಸ್ತ್ರ ಧರಿಸಿದ್ದ ಯುವಕರು, ಸಮವಸ್ತ್ರ ತೊಟ್ಟಿದ್ದ ವಿದ್ಯಾರ್ಥಿಗಳು ಕೈಯಲ್ಲಿ ನಾಡ ಧ್ವಜ ಹಿಡಿದುಕೊಂಡಿದ್ದರು.

ಧ್ವನಿವರ್ಧಕದಲ್ಲಿ ಮೊಳಗಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...’, ‘ಅವ್ವ ಕಣೋ ಕನ್ನಡ...’ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು. ಹಿರಿಯರೂ ಹೆಜ್ಜೆ ಹಾಕಿ ಯುವಕರ ಉತ್ಸಾಹ ಇಮ್ಮಡಿಗೊಳಿಸಿದರು. ಕನ್ನಡ ತಾಯಿ ಭುವನೇಶ್ವರಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮೊಳಗಿದವು.

ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಸೋಮನಾಥ ಯಾಳವಾರ ದಂಪತಿ ಇದ್ದರು. ಸಾರೋಟಿನ ಮುಂಭಾಗದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಇಡಲಾಗಿತ್ತು. ಮೆರವಣಿಗೆ ಮಾರ್ಗದಲ್ಲಿ ಅಲ್ಲಲ್ಲಿ ಸಮ್ಮೇಳನಾಧ್ಯಕ್ಷರನ್ನು ಸ್ನೇಹಿತರು, ಹಿತೈಶಿಗಳು ಹೂಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು.

ಮನ್ನಳ್ಳಿ ರಸ್ತೆಯಲ್ಲಿ ಇರುವ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಿಂದ ಆರಂಭಗೊಂಡ ಮೆರವಣಿಗೆಯು ರಾಣಿ ಕಿತ್ತೂರು ಚೆನ್ನಮ್ಮ ವೃತ್ತ, ರಾಮ ಚೌಕ್, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಮಡಿವಾಳ ಮಾಚಿದೇವ ವೃತ್ತ, ರೋಟರಿ ವೃತ್ತದ ಮೂಲಕ ಹಾಯ್ದು ಜಿಲ್ಲಾ ರಂಗಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು. ಇದಕ್ಕೂ ಮುನ್ನ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ತಮಟೆ ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಶಕುಂತಲಾ ವಾಲಿ, ಉದ್ಯಮಿಗಳಾದ ಜೈರಾಜ ಖಂಡ್ರೆ, ಚಂದ್ರಶೇಖರ ಹೆಬ್ಬಾಳೆ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಸಾಹಿತಿ ಎಂ.ಜಿ.ದೇಶಪಾಂಡೆ, ಮುಖಂಡರಾದ ಶಿವಶಂಕರ ಟೋಕರೆ, ಶಿವಕುಮಾರ ಪಾಟೀಲ ತೇಗಂಪೂರ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT