ಸೋಮವಾರ, ಜೂಲೈ 6, 2020
23 °C
ಜೆಸ್ಕಾಂ ಕಾರ್ಯವೈಖರಿಗೆ ಗ್ರಾಹಕರ ಆಕ್ರೋಶ

ಬೆಂಕಿ ಬಿಸಿಲಲ್ಲೇ ನಿರಂತರ ವಿದ್ಯುತ್‌ ಕಡಿತ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ನಗರದಲ್ಲಿ ಜೆಸ್ಕಾಂ ಸಿಬ್ಬಂದಿ ಬೇಕಾಬಿಟ್ಟಿಯಾಗಿ ವಿದ್ಯುತ್‌ ಕಡಿತಗೊಳಿಸುತ್ತಿದ್ದಾರೆ. ಸುಡುವ ಬಿಸಿಲಲ್ಲಿ ವಿದ್ಯುತ್‌ ಕಡಿತಗೊಳಿಸುತ್ತಿರುವ ಕಾರಣ ಜನ ಒಂದು ವಾರದಿಂದ ಹಿಂಸೆ ಅನುಭವಿಸುತ್ತಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ತಾಂತ್ರಿಕ ಕಾರ್ಯಕ್ಕೆ ನಿರ್ಬಂಧ ವಿಧಿಸಿರಲಿಲ್ಲ. ಆಗ ವಿದ್ಯುತ್‌ ಮಾರ್ಗಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬಹುದಿತ್ತು. ವಿದ್ಯುತ್‌ ತಂತಿಗಳ ಮೇಲೆ ಬೆಳೆದ ಗಿಡಮರಗಳ ಟೊಂಗೆಗಳನ್ನು ಕಡಿದು ಮಳೆಗಾಲದಲ್ಲಿ ವಿದ್ಯುತ್‌ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬಹುದಿತ್ತು. ಆದರೆ, ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಜೆಸ್ಕಾಂ ಸಿಬ್ಬಂದಿ ಆಗಾಗ ವಿದ್ಯುತ್ ಕಡಿತಗೊಳಿಸಲು ಶುರು ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರಗಳ ಟೊಂಗೆಗಳನ್ನು ಮಾತ್ರ ಕಡಿದು ವಿದ್ಯುತ್‌ ಲೈನ್‌ಗಳಿಗೆ ತಗುಲದಂತೆ ಮಾಡಬೇಕಿತ್ತು. ಆದರೆ, ಜೆಸ್ಕಾಂ ಸಿಬ್ಬಂದಿ ಅನೇಕ ಗಿಡ ಮರಗಳನ್ನೂ ಕಡಿದು ಹಾಕಿದ್ದಾರೆ. ಜ್ಯೋತಿ ಕಾಲೊನಿಯಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು ನಾಲ್ಕು ದೊಡ್ಡ ದೊಡ್ಡ ಮರಗಳನ್ನು ನೆಲಕ್ಕೆ ಉರುಳಿಸಿದ್ದಾರೆ. ನಗರದ ಇನ್ನೂ ಅನೇಕ ಕಡೆ ಮರಗಳನ್ನು ಕಡಿದು ಹಾಕಿದ್ದಾರೆ.

ಜೆಸ್ಕಾಂ ಸಿಬ್ಬಂದಿ ಹಗಲು- ರಾತ್ರಿಯೆನ್ನದೆ ಕರೆಂಟ್ ತೆಗೆಯುತ್ತಿದ್ದಾರೆ.  ಪಿಯುಸಿ, ಎಸ್ಸೆಸ್ಸೆಲ್ಸಿ ಹಾಗೂ ಪದವಿ ಪರೀಕ್ಷೆಗಳು ಆರಂಭಗೊಳ್ಳುತ್ತಿವೆ. ರಾತ್ರಿ ವೇಳೆಯಲ್ಲೂ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ವಿದ್ಯಾರ್ಥಿಗಳು ನಿದ್ದೆ ಗೆಡುತ್ತಿದ್ದಾರೆ. ಸೆಕೆಯಿಂದಾಗಿ ನಿದ್ರಿಸಲಾಗದೆ ಬಹಳ ಹೊತ್ತಿನ ವರೆಗೂ ತೊಳಲಾಡುತ್ತಿದ್ದಾರೆ. ಹೀಗಾಗಿ ಬೆಳಿಗ್ಗೆ ಓದಲಾಗದೆ ತೂಕಡಿಸುತ್ತ ಕುಳಿತುಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ ಗೋರನಾಳಕರ್‌ ಹೇಳುತ್ತಾರೆ.

ವಿದ್ಯುತ್‌ ಕೈಕೊಟ್ಟರೆ ಕಾಂಕ್ರೀಟ್‌ ಮನೆಗಳಲ್ಲಿ ಒಂದು ನಿಮಿಷ ಸಹ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಶುಕ್ರವಾರ ಬೆಳಗಿನ ಜಾವ 2 ಗಂಟೆಗೆ ವಿದ್ಯುತ್‌ ಕಡಿತಗೊಳಿಸಿದ ಕಾರಣ ಜನ ಬೆವರಿನ ಸ್ನಾನ ಮಾಡುವಂತಾಯಿತು.
ಜ್ಯೋತಿ ಕಾಲೊನಿ, ಶರಣನಗರ, ದೇವಿ ಕಾಲೊನಿ ಹಾಗೂ ಬ್ಯಾಂಕ್‌ ಕಾಲೊನಿಯಲ್ಲಿ ಜನ ಬೆಳಿಗಿನ ಜಾವ 3 ಗಂಟೆಯ ವೇಳೆಗೆ ಸೆಕೆಯನ್ನು ತಡೆದುಕೊಳ್ಳಲಾಗದೆ ಮನೆಗಳ ಮಾಳಿಗೆಯ ಮೇಲೆ ಅತ್ತಿಂದ ಇತ್ತ, ಇತ್ತಿಂದ ಅತ್ತ ಅಲೆದಾಡುವಂತಾಯಿತು. ಬೆಳಿಗ್ಗೆ 6 ಗಂಟೆಗೆ ಕರೆಂಟ್‌ ಬಂದರೂ ಮಧ್ಯಾಹ್ನದ ವರೆಗೆ ಮತ್ತೆ ಎರಡು ಮೂರು ಬಾರಿ ವಿದ್ಯುತ್‌ ಕಡಿತಗೊಳಿಸಲಾಯತು.

ಮೆ 21 ಹಾಗೂ 27 ರಂದು ರಂದು ಬೀದರ್‌ನ ಗುರುನಗರ, ಸಿದ್ಧಾರ್ಥ ಮತ್ತು ಫೈಯಾಸಪುರ ಫೀಡರ್‌ನ ವ್ಯಾಪ್ತಿಯ ಹೈದರ್ ಕಾಲೊನಿ, ಹಳೆಯ ಆದರ್ಶ ಕಾಲೊನಿ, ಜ್ಯೋತಿ ಕಾಲೊನಿ, ಶರಣನಗರ, ದೇವಿ ಕಾಲೊನಿ, ಭಾಲ್ಕೆ ಆಸ್ಪತ್ರೆ, ಬಚ್ಚಾ ಲೇಔಟ್, ಶಿವನಗರ ದಕ್ಷಿಣ, ರಂಗಮಂದಿರ, ಅಕ್ಕಮಹಾದೇವಿ ಕಾಲೊನಿ, ಮೇಗೂರ್‌ ಆಸ್ಪತ್ರೆ, ಶ್ರೀ ಆಸ್ಪತ್ರೆ, ಅಶೋಕ ಹೋಟೆಲ್, ಶಹಾಗಂಜ್, ಡಿ.ಸಿ.ಸಿ. ಬ್ಯಾಂಕ್, ಬಸವೇಶ್ವರ ಚೌಕ್, ಶಾಹಪುರ ಗೇಟ್, ಲಾಲವಾಡಿ, ಪಿ.ಡಿ.ಪಿ ಚನ್ನಬಸವನಗರ, ಖಾಜಿ ಕಾಲೊನಿ, ಎಸ್.ಪಿ ಬಂಗಲೆ, ಗಾಂಧಿಗಂಜ್, ಅಂಬೇಡ್ಕರ್ ಕಾಲೊನಿ, ಹಾರೋಗೇರಿ ಹಾಗೂ ಕಾಳಿದಾಸ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ನಗರದಲ್ಲಿ 41 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರುವ ಕಾರಣ ಜನ ಬೆವರಿನಿಂದ ಬಸವಳಿದು ಹೋಗುತ್ತಿದ್ದಾರೆ.

ಬಿಸಿಲಿನ ಝಳಕ್ಕೆ ಬೆವರಿ ಸುಸ್ತಾದ ಜನರು ತಂಪು ಪಾನೀಯಕ್ಕೆ ಮೊರೆ ಹೋಗಬೇಕೆಂದರೂ ಕೂಲ್‌ಡ್ರಿಂಕ್ಸ್‌ ಅಂಗಡಿಗಳು ತೆರೆದುಕೊಂಡಿಲ್ಲ. ಮಜ್ಜಿಗೆ ಹಾಗೂ ಐಸ್‌ಕ್ರೀಮ್‌ ಸಹ ಸಿಗುತ್ತಿಲ್ಲ. ಹೀಗಾಗಿ ಜೆಸ್ಕಾಂಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಎರಡು ತಿಂಗಳ ನಂತರ ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್‌ ಅಂಗಡಿಗಳು ತೆರೆದುಕೊಂಡಿವೆ. ವಿದ್ಯುತ್‌ ಸರಿಯಾಗಿ ಪೂರೈಸದ ಕಾರಣ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ಸಹ ತೊಂದರೆ ಅನುಭವಿಸುತ್ತಿದ್ದಾರೆ.

ಜೆಸ್ಕಾಂ ಅಧಿಕಾರಿಗಳು ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯ ವರೆಗೆ ವಿದ್ಯುತ್‌ ಸ್ಥಗಿತಗೊಳಿಸಿ ದುರಸ್ತಿ ಕಾರ್ಯಗಳನ್ನು ಮಾಡಿಕೊಳ್ಳಲಿ. ಆದರೆ, ಮಧ್ಯಾಹ್ನ ಹಾಗೂ ಮಧ್ಯರಾತ್ರಿ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ಝೆರಾಕ್ಸ್‌ ಅಂಗಡಿ ಮಾಲೀಕ ಶಿವಕುಮಾರ ಪಟಪಳ್ಳಿ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು