ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನ ಕೀರ್ತನಾ ಅಮೆರಿಕ ವಿವಿ ಜಾಗತಿಕ ರಾಯಭಾರಿ

ವಕೀಲರು, ನಿವೃತ್ತ ಶಿಕ್ಷಕರಿಂದ ತವರಲ್ಲಿ ಆತ್ಮೀಯ ಸನ್ಮಾನ
Last Updated 23 ಫೆಬ್ರುವರಿ 2021, 4:17 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಎಂಜಿನಿಯರಿಂಗ್ ಪದವೀಧರೆ ಕೀರ್ತನಾ ಡಿ. ಕೋಳೆಕರ್ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ‘ಯುನಿವರ್ಸಿಟಿ ಆಫ್ ಮೆರಿಲ್ಯಾಂಡ್ ಬಾಲ್ಟಿಮೋರ್'ನ ಜಾಗತಿಕ ರಾಯಭಾರಿಯಾಗಿ ಆಯ್ಕೆ ಆಗುವ ಮೂಲಕ ಗಮನ ಸೆಳೆದಿದ್ದಾರೆ.

ಸದ್ಯ ಬೀದರ್‍ನಲ್ಲಿ ಇರುವ ಅವರು ಅಮೆರಿಕದ ಕಾಲಮಾನದಲ್ಲಿ ಆನ್‍ಲೈನ್‍ನಲ್ಲೇ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ವಿವಿಧ ಕೋರ್ಸ್‍ಗಳು, ಉತ್ಕೃಷ್ಟಶೈಕ್ಷಣಿಕ ಗುಣಮಟ್ಟ ಹಾಗೂ ಸೌಕರ್ಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

‘ಕೀರ್ತನಾ, ಯುನಿವರ್ಸಿಟಿ ಆಫ್ ಮೆರಿಲ್ಯಾಂಡ್ ಬಾಲ್ಟಿಮೋರ್‌ನಲ್ಲಿ ಎರಡು ವರ್ಷಗಳ ಮಾಸ್ಟರ್ಸ್ ಇನ್ ಇನ್ಫಾರ್ಮೆಷನ್ ಸಿಸ್ಟಂ ಕೋರ್ಸ್ ಅಧ್ಯಯನ ಮಾಡುತ್ತಿದ್ದಾರೆ. ಸೆಪ್ಟೆಂಬರ್‍ನಲ್ಲಿ ಭಾರತಕ್ಕೆ ಬಂದಿದ್ದಾರೆ. ಬರುವ ಡಿಸೆಂಬರ್‍ನಲ್ಲಿ ಅವರ ಕೋರ್ಸ್ ಪೂರ್ಣಗೊಳ್ಳಲಿದೆ.

ಬೀದರ್‍ನ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದ್ದಾರೆ. ಗುರುನಾನಕ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದಾರೆ. ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ಸ್‍ನಲ್ಲಿ ಪದವಿ ಪಡೆದಿದ್ದಾರೆ. ಕೀರ್ತನಾ, ನಗರದ ಪ್ರಸಿದ್ಧ ವಕೀಲ ದಾದಾರಾವ್ ಕೋಳೆಕರ್ ಹಾಗೂ ದಿ. ಪ್ರೊ. ಅಲ್ಕಾ ಕೋಳೆಕರ್ ದಂಪತಿಯ ಪುತ್ರಿಯಾಗಿದ್ದಾರೆ.

ಸನ್ಮಾನ

ಯುನಿವರ್ಸಿಟಿ ಆಫ್ ಮೆರಿಲ್ಯಾಂಡ್ ಬಾಲ್ಟಿಮೋರ್ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾದ ಪ್ರಯುಕ್ತ ಕೀರ್ತನಾ ಅವರನ್ನು ನಗರದಲ್ಲಿ ವಕೀಲರಾದ ವೀರಶೆಟ್ಟಿ ಭಂಡೆ, ಕೆ. ಕಾಶೀನಾಥ, ಬಾಬುರಾವ್ ಎಂ.ಪಾಟೀಲ ಹಾಗೂ ಗುರುನಾನಕ ಪಬ್ಲಿಕ್ ಶಾಲೆಯ ನಿವೃತ್ತ ಶಿಕ್ಷಕಿ ವಿಮಲಾ ಪಾಟೀಲ ಶಾಲು ಹೊದಿಸಿ ಸನ್ಮಾನಿಸಿದರು.

ಬೀದರ್ ಪ್ರತಿಭೆ ಅಮೆರಿಕದ ವಿಶ್ವವಿದ್ಯಾಲಯವೊಂದರ ರಾಯಭಾರಿ ಆಗಿರುವುದು ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದು ವೀರಶೆಟ್ಟಿ ಭಂಡೆ ಹೇಳಿದರು.

ವಿಶ್ವವಿದ್ಯಾಲಯದ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾಗಿದ್ದಕ್ಕೆ ಬಹಳ ಸಂತಸವಾಗಿದೆ. ನಾನು 2020ನೇ ಸಾಲಿನ ಮೊದಲ ರಾಯಭಾರಿ ಆಗಿರುವುದನ್ನು ವಿಶ್ವವಿದ್ಯಾಲಯ ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಕೋವಿಡ್ ಸಂದರ್ಭದಲ್ಲಿನ ಕಾರ್ಯಕ್ಕಾಗಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದೆ ಎಂದು 26 ವರ್ಷದ ಕೀರ್ತನಾ ಸಂತಸದಿಂದ ನುಡಿದರು.

ಪರಿಶ್ರಮ ವಹಿಸಿ ವ್ಯಾಸಂಗ ಮಾಡಿದರೆ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋಗಬಹುದು. ತಂದೆ, ತಾಯಿ, ಕಲಿತ ಶಾಲೆ, ಕಾಲೇಜು ಹಾಗೂ ಊರಿಗೂ ಕೀರ್ತಿ ತರಬಹುದು ಎಂದು ಹೇಳಿದರು. ವಕೀಲ ದಾದಾರಾವ್ ಕೋಳೆಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT