ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಕುಂದು ಕೊರತೆ: ಬಸ್ ನಿಲುಗಡೆ ಮಾಡಿ

Last Updated 24 ನವೆಂಬರ್ 2022, 4:53 IST
ಅಕ್ಷರ ಗಾತ್ರ

ಹುಲಸೂರ: ಮಹಾರಾಷ್ಟ್ರದ ಲಾತೂರ್ ಘಟಕಕ್ಕೆ ಸೇರಿದ ಬಸ್ ಪಟ್ಟಣದ ಮೂಲಕ ಹೈದರಾಬಾದ್‌ಗೆ ತೆರಳುತ್ತದೆ. ಈ ಬಸ್ ಹೈದರಾಬಾದ್‌ನಿಂದ ಮರಳಿ ರಾತ್ರಿ 11ಕ್ಕೆ ಬರುತ್ತದೆ. ಈ ವೇಳೆ ಹುಲಸೂರಿನ ಪ್ರಯಾಣಿಕರನ್ನು ಬಸ್ ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 752ರ ನಿರ್ಜನ ಪ್ರದೇಶದಲ್ಲಿ ಇಳಿಸಲಾಗುತ್ತದೆ. ಇದರಿಂದ ಮಹಿಳೆಯರು, ಮಕ್ಕಳಿಗೆ ತೊಂದರೆಯಾಗುತ್ತಿದೆ.

ಕೇಳಿದರೆ ನಿರ್ವಾಹಕರು ಇಲ್ಲಿಯೇ ಇಳಿಸುವುದು ಇಳಿರಿ ಎಂದು ಮರಾಠಿ ಭಾಷೆಯಲ್ಲಿ ಬೆದರಿಸುತ್ತಾರೆ. ಈಶಾನ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಲಾತೂರ್ ಬಸ್‌ ಘಟಕ ವ್ಯವಸ್ಥಾಪಕರ ಗಮನಕ್ಕೆ ತಂದು ಪಟ್ಟಣದ ಒಳಗೆ ಹಾದು ಹೋಗುವಂತೆ ಮಾಡಬೇಕು.

ಸಂಗಮೇಶ ಭೋಪಳೆ, ಗುಲಾಮ ಬಡಾಯಿ ನಿವಾಸಿಗಳು

ಚರಂಡಿ ಸ್ವಚ್ಛ ಮಾಡಿ

ಹುಮನಾಬಾದ್: ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿರುವ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದು ಗಬ್ಬು ನಾರುತ್ತಿದೆ. ಅಲ್ಲದೆ, ಜನ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಅನೈರ್ಮಲ್ಯ ಉಂಟಾಗುತ್ತಿದೆ.

ಬಸ್ ನಿಲ್ದಾಣದ ಮುಂಭಾಗದ ಹೈಮಾಸ್ಟ್ ದೀಪ ದುರಸ್ತಿಗೆ ಬಂದಿದೆ. ಇದರಿಂದ ತೊಂದರೆಯಾಗುತ್ತಿದೆ.

ಸಂಬಂಧಪಟ್ಟವರು ತಕ್ಷಣ ಚರಂಡಿ ಸ್ವಚ್ಛ ಮಾಡಬೇಕು. ಹೈಮಾಸ್ಟ್‌ ದೀಪ ದುರಸ್ತಿ ಮಾಡಬೇಕು.

ಆಕಾಶ, ನಿವಾಸಿ

ಹೆಚ್ಚುವರಿ ಬಸ್ ಓಡಿಸಿ

ಜನವಾಡ: ಬೀದರ್ ತಾಲ್ಲೂಕಿನ ಶ್ರೀಮಂಡಲ್‍ನಿಂದ ಕಂಗಟಿ, ಗಾದಗಿ ಮಾರ್ಗ ಹಾಗೂ ಚಿಲ್ಲರ್ಗಿಯಿಂದ ಚಿಮಕೋಡ್, ಖಾಜಾಪುರ, ಗಾದಗಿ ಮಾರ್ಗವಾಗಿ ಬೀದರ್‌ಗೆ ತಲಾ ಎರಡು ಹೆಚ್ಚುವರಿ ಬಸ್‍ಗಳನ್ನು ಓಡಿಸಬೇಕು.

ಶ್ರೀಮಂಡಲ್ ಹಾಗೂ ಚಿಲ್ಲರ್ಗಿಯಿಂದ ಬೀದರ್‌ಗೆ ತೆರಳುವ ಬಸ್‍ಗಳು ಸದಾ ಪ್ರಯಾಣಿಕರಿಂದ ತುಂಬಿರುತ್ತವೆ. ಹೀಗಾಗಿ ಬೀದರ್‌ನ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.

ಬಸ್‍ಗಳು ಪ್ರಯಾಣಿಕರಿಂದ ತುಂಬಿದ ಕಾರಣ ವಿದ್ಯಾರ್ಥಿಗಳು ಕೆಲವೊಮ್ಮೆ ಖಾಸಗಿ ವಾಹನಗಳ ಮೊರೆ ಹೋಗಬೇಕಾಗುತ್ತಿದೆ. ಖಾಸಗಿ ವಾಹನಗಳು ಕೂಡ ಇಲ್ಲದಿದ್ದಾಗ ಅನಿವಾರ್ಯವಾಗಿ ಮನೆಗೆ ವಾಪಸಾಗಬೇಕಾಗುತ್ತದೆ.

ಬೀದರ್ ಹತ್ತಿರದ ಪ್ರಾದೇಶಿಕ ವಿಜ್ಞಾನ ಉಪ ಕೇಂದ್ರದ ಸಮೀಪದಿಂದ ಜಿಲ್ಲಾಧಿಕಾರಿ ನಿವಾಸದವರೆಗಿನ ರಸ್ತೆಯಲ್ಲಿ ಎತ್ತರ ಪ್ರದೇಶ ಹತ್ತುವಾಗ ಸಾಮರ್ಥ್ಯಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ಬಸ್‍ಗಳು ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗುವ ಸಾಧ್ಯತೆಗಳು ಇರುತ್ತವೆ. ಕಾರಣ, ಶ್ರೀಮಂಡಲ್ ಹಾಗೂ ಚಿಲ್ಲರ್ಗಿಯಿಂದ ಹೆಚ್ಚುವರಿ ಬಸ್‍ಗಳನ್ನು ಓಡಿಸಿ ಸದ್ಯದ ಬಸ್‍ಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.

ಮಹೇಶ ಎಸ್.ರಾಂಪುರೆ, ಅಧ್ಯಕ್ಷ, ದಿ ಬುದ್ಧ ಯೂತ್ ಕ್ಲಬ್

ಕೊಠಡಿ ಬೀಳಿಸಿ

ಬಸವಕಲ್ಯಾಣ: ತಾಲ್ಲೂಕಿನ ಚಿಟ್ಟಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿಥಿಲ ಕೊಠಡಿ ಇದ್ದು, ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಅದನ್ನು ಬೀಳಿಸಬೇಕು.

ಈ ಕೊಠಡಿಯ ಗೋಡೆಗಳಲ್ಲಿ ಗಿಡಗಳು ಬೆಳೆದಿವೆ. ಪ್ರವೇಶ ದ್ವಾರದ ಎದುರಲ್ಲಿಯೂ ಗಿಡ–ಗಂಟಿಗಳಿವೆ. ಅವನ್ನು ತೆರವು ಮಾಡಿ ಸ್ವಚ್ಛ ಮಾಡಬೇಕು. ಅಲ್ಲದೆ ಚರಂಡಿ ಇದೆ. ಅದರಲ್ಲಿ ಮಕ್ಕಳು ಕಾಲು ಜಾರಿ ಬೀಳುವ ಸಾಧ್ಯತೆ ಇರುವ ಕಾರಣ ಅದರ ಮೇಲೆ ಹಾಸುಗಲ್ಲುಗಳನ್ನು ಮುಚ್ಚಬೇಕು.

ಕಿರಣಕುಮಾರ ಹುಲಸೂರೆ, ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT