ಬೀದರ್: ಬೀದರ್–ಕಮಲನಗರ ರಾಷ್ಟ್ರೀಯ ಹೆದ್ದಾರಿಯೀಗ (ಎನ್.ಎಚ್.50) ಸಾವಿನ ಹೈವೇ ಆಗಿ ಮಾರ್ಪಟ್ಟಿದೆ.
ಈ ಹೆದ್ದಾರಿಯಲ್ಲಿ ನಿತ್ಯ ಅಪಘಾತಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿ ಸಾವು ನೋವುಗಳ ಸಂಖ್ಯೆ ಏರುತ್ತಲೇ ಇದೆ. 2024ರ ಜನವರಿಯಿಂದ ಜುಲೈ ಅಂತ್ಯದ ವರೆಗೆ ಬರೋಬ್ಬರಿ ಈ ಹೆದ್ದಾರಿಯಲ್ಲಿ 18 ಜನ ಮೃತಪಟ್ಟಿದ್ದಾರೆ. 54 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಣ್ಣಪುಟ್ಟ ಅಪಘಾತಗಳ ಸಂಖ್ಯೆ ಲೆಕ್ಕಕ್ಕಿಲ್ಲದಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2018ರಲ್ಲಿ ಈ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿದ ನಂತರ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. 2018ರಿಂದ 2024ರ ವರೆಗೆ ಒಟ್ಟು 126 ಜನ ಮೃತಪಟ್ಟಿದ್ದಾರೆ. 564ಕ್ಕೂ ಹೆಚ್ಚು ಜನರಿಗೆ ಗಂಭೀರ ಸ್ವರೂಪ ಗಾಯಗಳಾಗಿದ್ದು, ಇಡೀ ಜೀವನ ಅಂಗವೈಕಲ್ಯದಲ್ಲಿ ಕಳೆಯುವಂತಾಗಿದೆ.
ವರ್ಷ ಕಳೆಯುತ್ತಿದ್ದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಗಮನಾರ್ಹ. 2018ರಿಂದ ಇದುವರೆಗಿನ ಅಂಕಿ ಅಂಶಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಇದು ಗೊತ್ತಾಗುತ್ತದೆ. 2018ರಲ್ಲಿ 18 ಜನ ಮೃತಪಟ್ಟಿದ್ದರು.
2019ರಲ್ಲಿ 13, 2020ರಲ್ಲಿ 16, 2021ರಲ್ಲಿ 13 ಸಾವುಗಳು ಸಂಭವಿಸಿ ಸಣ್ಣಪ್ರಮಾಣದ ಏರುಪೇರು ಉಂಟಾಗಿತ್ತು. ಆದರೆ, 2022ನೇ ಸಾಲಿನಿಂದ ಸಾವಿನ ಸಂಖ್ಯೆ ಸತತ ಹೆಚ್ಚಾಗುತ್ತಿದೆ. 2022ರಲ್ಲಿ 21 ಜನ ಮೃತಪಟ್ಟರೆ, 2023ರಲ್ಲಿ 28 ಮಂದಿ ಸಾವಿಗೀಡಾಗಿದ್ದಾರೆ. 2024ನೇ ವರ್ಷ ಮುಗಿಯಲು ಇನ್ನೂ ಐದು ತಿಂಗಳು ಬಾಕಿ ಇದೆ. ಅಷ್ಟರಲ್ಲಾಗಲೇ 18 ಜನ ಅಸುನೀಗಿದ್ದಾರೆ. ಈ ಅಪಘಾತಗಳೆಲ್ಲ ಬೀದರ್‌ನಿಂದ ಕಮಲನಗರ ಗಡಿ ವರೆಗಿನ 54 ಕಿ.ಮೀ ವ್ಯಾಪ್ತಿಯಲ್ಲಿ ಸಂಭವಿಸಿದ್ದು. ಈ ಸಂಬಂಧ ಕಮಲನಗರದ ಗುಂಡಪ್ಪ ಬೆಲ್ಲೆ ಮದನೂರು ಎಂಬುವರು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ ವಿವರಕ್ಕೆ ಬೀದರ್ ಜಿಲ್ಲಾ ಪೊಲೀಸ್ ಇಲಾಖೆಯುು ಕೊಟ್ಟಿರುವ ಮಾಹಿತಿಯಿಂದ ಗೊತ್ತಾಗಿದೆ.
ಈ ಭಾಗದ ಬಹುವರ್ಷಗಳ ಬೇಡಿಕೆಗೆ ಸ್ಪಂದಿಸಿ ಬೀದರ್ ವಾಯಾ ಕಮಲನಗರದಿಂದ ನಾಂದೇಡ್‌ಗೆ ಸಂಪರ್ಕ ಕಲ್ಪಿಸಲು ಹೆದ್ದಾರಿಯನ್ನು ಸಿಮೆಂಟ್‌ನಿಂದ ನಿರ್ಮಿಸಲಾಗಿತ್ತು. ಆದರೆ, ಮೊದಲ ವರ್ಷವೇ ಇದರಲ್ಲಿ ಹಲವು ಕಡೆಗಳಲ್ಲಿ ಬಿರುಕು ಮೂಡಿದ್ದವು. ವರ್ಷದಿಂದ ವರ್ಷಕ್ಕೆ ಅದು ಹೆಚ್ಚಾಗಿ, ಸೀಳಲು ಆರಂಭಿಸಿದ್ದು, ದೊಡ್ಡ ದೊಡ್ಡ ಬಿರುಕುಗಳಿಂದ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಮೃತರಲ್ಲಿ ಹೆಚ್ಚಿನವರು ದ್ವಿಚಕ್ರ ವಾಹನ ಸವಾರರೇ ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ಹಲವು ಸಂಘ ಸಂಸ್ಥೆಗಳು ಹೋರಾಟ ನಡೆಸಿದ್ದರೂ ರಸ್ತೆ ದುರಸ್ತಿಗೊಳಿಸಲು ಮುಂದಾಗಿಲ್ಲ. ಈ ಕುರಿತು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ್ ಕಾಮಶೆಟ್ಟಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಬೀದರ್‌ನಿಂದ ನೌಬಾದ್ ವರೆಗೆ ನಾವು ರಸ್ತೆ ನಿರ್ವಹಣೆ ಮಾಡುತ್ತೇವೆ. ರಾಷ್ಟ್ರೀಯ ಹೆದ್ದಾರಿ 50ರ ನಿರ್ವಹಣೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾಡುತ್ತಾರೆ’ ಎಂದು ಹೇಳಿದರು. ಈ ಸಂಬಂಧ ಪ್ರಾಧಿಕಾರದವರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.
ಬೀದರ್–ಕಮಲನಗರ ಹೆದ್ದಾರಿಯಲ್ಲಿ ಸಂಭವಿಸಿದ ಸಾವುಗಳ (ವಿವರ ವರ್ಷ; ಮೃತರು; ಗಾಯಾಳು)
2018; 17; 70
2019; 13; 70
2020; 16; 37
2021; 13; 66
2022; 21; 78
2023; 28; 89
2024; 18; 54
ಒಟ್ಟು; 126; 564
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.