ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ಹೈನುಗಾರಿಕೆಗೆ ನೆರವಾದ ನರೇಗಾ

₹57 ಸಾವಿರ ಸಹಾಯಧನದಲ್ಲಿ ದನದ ಕೊಟ್ಟಿಗೆ ನಿರ್ಮಾಣ
Published 30 ಜೂನ್ 2024, 6:48 IST
Last Updated 30 ಜೂನ್ 2024, 6:48 IST
ಅಕ್ಷರ ಗಾತ್ರ

ಗುಮ್ಮಾ(ಅಷ್ಟೂರ): ರೈತರಿಗಾಗಿಯೇ ಸರ್ಕಾರದ ಹಲವು ಯೋಜನೆಗಳಿವೆ. ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡರೆ, ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸಬಹದು ಎಂಬುದಕ್ಕೆ ಬೀದರ್‌ ತಾಲ್ಲೂಕಿನ ಗುಮ್ಮಾ ಗ್ರಾಮದ ರೈತ ಕುಶಾಲರಾವ ಘಾಳೆಪ್ಪ ಉತ್ತಮ ನಿದರ್ಶನವಾಗಿದ್ದಾರೆ.

ಕುಶಾಲಾರಾವ ಅವರು, ನರೇಗಾ ಯೋಜನೆ ಅಡಿಯಲ್ಲಿ ₹57 ಸಾವಿರ ಧನಸಹಾಯ ಹಾಗೂ ಒಂದಿಷ್ಟು ವೈಯಕ್ತಿಕ ಹಣ ಖರ್ಚು ಮಾಡಿ, ಹೊಲದಲ್ಲಿ ದನದ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ಅವರಿಗೆ ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉತ್ತಮವಾಗಿ ನಿರ್ವಹಿಸಲು ಅನುಕೂಲವಾಗಿದೆ.

ಸದ್ಯ ಅವರು 6 ಎಮ್ಮೆಗಳನ್ನು ಸಾಕಾಣಿಕೆ ಮಾಡುತ್ತಿದ್ದು, ನಿತ್ಯ 40 ಲೀಟರ್ ಹಾಲು ಸಂಗ್ರಹಿಸುತ್ತಾರೆ. ಜತೆಗೆ ಹಾಲನ್ನು ತಾವೇ ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಪಡೆಯುತ್ತಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ.

‘ನನ್ನ ಮನೆ ಹೊಲದಲ್ಲಿಯೇ ಇದೆ. ಮೊದಲು ಹೈನುರಾಸುಗಳನ್ನು ಬಯಲಲ್ಲಿಯೇ ಕಟ್ಟಬೇಕಿತ್ತು. ಬೇಸಿಗೆ ಹಾಗೂ ಮಳೆಗಾಲದಲ್ಲಿ ಅವುಗಳಿಗೆ ಬಿಸಿಲು ಮತ್ತು ಮಳೆಯಿಂದ ಸಮಸ್ಯೆಯಾಗುತ್ತಿತ್ತು. ಅಷ್ಟೂರ ಗ್ರಾಮ ಪಂಚಾಯಿತಿಯಿಂದ ನರೇಗಾದಡಿ ದನದ ಕೊಟ್ಟಿಗೆ ನಿರ್ಮಿಸಿಕೊಟ್ಟಿದ್ದರಿಂದ ಹೈನುಗಾರಿಕೆಗೆ ಸಹಾಯವಾಗಿದೆ ಎಂದು ಕುಶಾಲರಾವ ತಿಳಿಸಿದರು.

‘ನಾಲ್ಕು ಎಕರೆ ಜಮೀನಿದ್ದು, ಕೃಷಿ ಜತೆಗೆ ಹದಿನೈದು ವರ್ಷಗಳಿಂದ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದೇನೆ. ಹೈನುಗಾರಿಕೆ ನಿರಂತರ ನನ್ನ ಕೈಹಿಡಿದಿದೆ. ಸದ್ಯ 6 ಎಮ್ಮೆಗಳಿದ್ದು, ಬೆಳಿಗ್ಗೆ ಹಾಗೂ ಸಂಜೆ ಸೇರಿ ಪ್ರತಿ ದಿನ 40 ಲೀಟರ್ ಹಾಲು ಸಂಗ್ರಹ ಆಗುತ್ತದೆ. ಬೀದರ್‌ನಲ್ಲಿ ನಾನೇ ಮನೆ ಮನೆಗೆ ತೆರಳಿ ಹಾಲು ಮಾರಾಟ ಮಾಡುತ್ತೇನೆ. ನಿತ್ಯ ಬರುವ ₹ 2,400 ರಲ್ಲಿ ₹ 800 ಖರ್ಚು ತೆಗೆದರೂ, ₹ 1,600 ಉಳಿಯುತ್ತದೆ. ಮಾಸಿಕ ₹ 48 ಸಾವಿರ ಆದಾಯ ಬರುತ್ತಿದೆ. ರೈತರು ಆರ್ಥಿಕ ಅಭಿವೃದ್ಧಿಗಾಗಿ ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಕೈಗೊಳ್ಳಬೇಕು. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದು’ ಎಂದು ಸಲಹೆ ಮಾಡಿದರು.

ನರೇಗಾದಡಿ ರೈತರು ದನದ ಕೊಟ್ಟಿಗೆ, ಕುರಿ, ಕೋಳಿ ಶೆಡ್, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಿಸಿಕೊಂಡು, ತೋಟಗಾರಿಕೆ ಬೆಳೆ ಸಹ ಬೆಳೆದು ಆದಾಯ ಪಡೆಯಬಹುದು ಎಂದು ಬೀದರ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ ತಿಳಿಸಿದರು.

ಕುಶಾಲರಾವ್ ಘಾಳೆಪ್ಪ
ಕುಶಾಲರಾವ್ ಘಾಳೆಪ್ಪ
ಕಿರಣ ಪಾಟೀಲ
ಕಿರಣ ಪಾಟೀಲ

ದನದ ಕೊಟ್ಟಿಗೆಗೆ ₹57 ಸಾವಿರ ಸಹಾಯಧನ 6 ಎಮ್ಮೆ ಸಾಕುತ್ತಿರುವ ರೈತ ಕುಶಾಲರಾವ ಘಾಳೆಪ್ಪ ನಿತ್ಯ 40 ಲೀಟರ್ ಹಾಲು ಸಂಗ್ರಹ, ಮಾರಾಟ

ಮಳೆಗಾಲದಲ್ಲಿ ಹೈನುಗಾರಿಕೆ ರಾಸುಗಳ ಸಂರಕ್ಷಣೆ ಕಷ್ಟವಾಗುತ್ತಿತ್ತು. ವಿಷ ಜಂತುಗಳ ಭಯ ಕಾಡುತ್ತಿತ್ತು. ನರೇಗಾದಡಿ ನಿರ್ಮಿಸಿದ ದನದ ಕೊಟ್ಟಿಗೆ ಜಾನುವಾರು ನಿರ್ವಹಣೆಗೆ ಅನುಕೂಲವಾಗಿದೆ
ಕುಶಾಲರಾವ ಘಾಳೆಪ್ಪ ಗುಮ್ಮಾದ ರೈತ
ಜಾಬ್ ಕಾರ್ಡ್ ಹೊಂದಿರುವ ರೈತರು ಮನೆಯಲ್ಲಿ ದನ ಕರುಗಳಿದ್ದಲ್ಲಿ ತಮ್ಮ ಖಾಲಿ ನಿವೇಶನದಲ್ಲಿ ನರೇಗಾದಡಿ ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಬಹುದು
ಕಿರಣ ಪಾಟೀಲ ಬೀದರ್ ತಾ.ಪಂ. ಇ.ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT