ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

Last Updated 10 ಜೂನ್ 2020, 13:27 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ವಿವಿಧೆಡೆ ಬುಧವಾರ ಉತ್ತಮ ಮಳೆಯಾಗಿದೆ. ಬೀದರ್, ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಮಧ್ಯಾಹ್ನ ಸುಮಾರು ಎರಡು ತಾಸು ಮಳೆ ಸುರಿದಿದೆ.

ಬೀದರ್ ನಗರದಲ್ಲಿ ಬೆಳಿಗ್ಗೆಯಿಂದಲೇ ಧಗೆ ಇತ್ತು. ಮಧ್ಯಾಹ್ನ ವಾತಾವರಣದಲ್ಲಿ ದಿಢೀರ್‌ ಬದಲಾವಣೆ ಕಂಡು ಬಂದಿತು. ಆಗಸದಲ್ಲಿ ಮೋಡಗಳು ಆವರಿಸಿದವು. ಮಧ್ಯಾಹ್ನ 1.30ಕ್ಕೆ ಶುರುವಾದ ಸಾಧಾರಣದಿಂದ ಕೂಡಿದ ಧಾರಾಕಾರ ಮಳೆ 3.30 ವರೆಗೂ ಮುಂದುವರಿಯಿತು.

ನಗರದ ರೋಟರಿ ವೃತ್ತ, ಹಳೆಯ ಬಸ್ ನಿಲ್ದಾಣ, ಅಶೋಕ ಹೋಟೇಲ್‍ನಿಂದ ಬೊಮ್ಮಗೊಂಡೇಶ್ವರ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳಸೇತುವೆ, ಬಸವೇಶ್ವರ ವೃತ್ತ ಸಮೀಪದ ರೈಲ್ವೆ ಕೆಳಸೇತುವೆ, ಹಾರೂರಗೇರಿ ಕಮಾನ್, ಚಿದ್ರಿ ರಸ್ತೆ, ಜನವಾಡ ರಸ್ತೆ ಸೇರಿದಂತೆ ವಿವಿಧೆಡೆ ರಸ್ತೆಯಲ್ಲಿ ನೀರು ಸಂಗ್ರಹಗೊಂಡು ಸಂಚಾರಕ್ಕೆ ಅಡಚಣೆ ಉಂಟಾಯಿತು.

ನೀರು ಸಂಗ್ರಹವಾದ ಕಾರಣ ರಸ್ತೆಯಲ್ಲಿನ ತಗ್ಗು ಕಾಣದೆ ಅನೇಕ ವಾಹನ ಸವಾರರು ತೊಂದರೆ ಅನುಭವಿಸಿದರು. ಕೆಲವರು ಮಳೆಯಲ್ಲೇ ನೆನೆದುಕೊಂಡು ಮನೆಗಳಿಗೆ ತೆರಳಿದರು.

ಮಳೆಗಾಲ ಶುರುವಾದರೂ ಬಿಸಿಲಿನ ತಾಪ ಕಡಿಮೆಯಾಗಿರಲಿಲ್ಲ. ಮಳೆರಾಯನ ಆಗಮನವು ಭುವಿಯನ್ನು ತಂಪಾಗಿಸಿತು. ಸಂಜೆ ವೇಳೆ ತಣ್ಣನೆಯ ವಾತಾವರಣವೂ ಸೃಷ್ಟಿಯಾಯಿತು.

ರೈತರಲ್ಲಿ ಸಂತಸ:

ಮುಂಗಾರು ಹಂಗಾಮಿನ ಆರಂಭದಲ್ಲೇ ಉತ್ತಮ ಮಳೆಯಾದ ಕಾರಣ ರೈತರಲ್ಲಿ ಸಂತಸ ಮೂಡಿದೆ.

‘ಜಿಲ್ಲೆಯ ಕೆಲಕಡೆ ಈಗಾಗಲೇ ಬಿತ್ತನೆ ಆಗಿದೆ. ಇನ್ನೂ ಕೆಲಕಡೆ ಬಿತ್ತನೆ ಕಾರ್ಯ ಮುಂದುವರಿದಿದೆ. ಬುಧವಾರ ಸುರಿದ ಮಳೆ ರೈತರಿಗೆ ಹರ್ಷ ಉಂಟು ಮಾಡಿದೆ. ಈ ಬಾರಿ ಒಳ್ಳೆಯ ಬೆಳೆ ಪಡೆಯುವ ನಿರೀಕ್ಷೆಯಲ್ಲಿರುವ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದೆ’ ಎಂದು ಜೈನಾಪುರದ ರೈತ ಚಂದ್ರಶೇಖರ ಪಾಟೀಲ ತಿಳಿಸಿದರು.

ಕೊರೊನಾ ಸೋಂಕಿನಿಂದ ವಿಧಿಸಲಾದ ಲಾಕ್‍ಡೌನ್‍ನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನ ಮೇಲೆಯೇ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವರುಣ ಕೃಪೆ ತೋರಲಿದ್ದಾನೆ ಎನ್ನುವ ನಂಬಿಕೆಯಲ್ಲಿ ಇದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT