ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಚರಂಡಿಗೆ ಹೂಳು, ರಸ್ತೆಗೆ ಹೊಲಸು

Published : 30 ಸೆಪ್ಟೆಂಬರ್ 2024, 5:03 IST
Last Updated : 30 ಸೆಪ್ಟೆಂಬರ್ 2024, 5:03 IST
ಫಾಲೋ ಮಾಡಿ
Comments

ಬೀದರ್‌: ನಗರದಲ್ಲಿ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಹೊಲಸು ರಸ್ತೆಯ ಮೇಲೆಲ್ಲಾ ಹರಿದಾಡುತ್ತಿದೆ.

ನಗರದ ಓಲ್ಡ್‌ ಸಿಟಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ, ಅದರಲ್ಲಿ ತುಂಬಿಕೊಳ್ಳುವ ಹೂಳು ಕಾಲಕಾಲಕ್ಕೆ ತೆಗೆಯುತ್ತಿಲ್ಲ. ಇದರ ಪರಿಣಾಮ ಚರಂಡಿಗಳು ಉಕ್ಕಿ ಹರಿದು ನೀರು ರಸ್ತೆಗೆ ಬರುತ್ತಿದೆ.

ಭಾರಿ ಮಳೆಯಾದಾಗಲಂತೂ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ನಗರದ ಬಸವೇಶ್ವರ ವೃತ್ತದ ರೈಲ್ವೆ ಮೇಲು ಸೇತುವೆ ಕೆಳಗಿನ ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ಚರಂಡಿ ನೀರು ಸಂಗ್ರಹಗೊಂಡಿತು. ಹಳ್ಳದಂತೆ ಹೊಲಸು ನೀರು ಹರಿದಿತ್ತು. ಎಲ್ಲೆಡೆ ದುರ್ಗಂಧಕ್ಕೆ ಕಾರಣವಾಗಿತ್ತು. ರಸ್ತೆಯ ಎರಡೂ ಬದಿಯಲ್ಲಿ ಸಂಗ್ರಹಗೊಂಡಿದ್ದ ಮಣ್ಣನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದ್ದರು. ಆದರೂ ಸಮಸ್ಯೆ ಶಾಶ್ವತ ಪರಿಹಾರ ಕಂಡಿಲ್ಲ. ಅಶೋಕ ಹೋಟೆಲ್‌ ಸಮೀಪದ ರೈಲ್ವೆ ಮೇಲ್ಸೇತುವೆ ಕೆಳಗಿನ ರಸ್ತೆಯ ಭಾಗದ ಪರಿಸ್ಥಿತಿಯೂ ಭಿನ್ನವಾಗೇನೂ ಇಲ್ಲ.

ಹಾರೂರಗೇರಿ ಕಮಾನ್‌ ಎದುರಿನ ರಸ್ತೆಯ ಸಮಸ್ಯೆ ದಶಕಗಳದ್ದು. ಪ್ರತಿ ವರ್ಷ ಅಲ್ಲಿನ ಚರಂಡಿ, ರಸ್ತೆ ದುರಸ್ತಿ ಮಾಡಲಾಗುತ್ತಿದೆ. ಮಾಡಿದ ಕೆಲವೇ ದಿನಗಳಲ್ಲಿ ಅದು ಹಾಳಾಗಿ ಮತ್ತೆ ಹಿಂದಿನಂತಾಗುತ್ತದೆ. ಇತ್ತೀಚೆಗೆ ಭಾರಿ ಮಳೆಯಿಂದ ಅಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದವು. ಅದಾದ ಕೆಲ ದಿನಗಳ ನಂತರ ಅಲ್ಲಿ ಸಿಮೆಂಟ್‌, ಜಲ್ಲಿ ಹಾಕಿ ನೆಲ ಸಮತಟ್ಟುಗೊಳಿಸಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದು ಕೂಡ ಕಿತ್ತುಕೊಂಡು ಹೋಗಿದೆ. ಸಾರ್ವಜನಿಕರ ತೆರಿಗೆಯ ಹಣದಲ್ಲಿ ಕಳಪೆ ಕಾಮಗಾರಿ ಮಾಡುತ್ತಿರುವುದಕ್ಕೆ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಆಡಳಿತ ಮಾತ್ರ ಕಣ್ಣು, ಕಿವಿ ಇಲ್ಲದಂತೆ ಸೂಕ್ಷ್ಮತೆ ಕಳೆದುಕೊಂಡು ವರ್ತಿಸುತ್ತಿದೆ ಎನ್ನುವುದು ಜನರ ಆರೋಪ.

ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ನಗರದ ಓಲ್ಡ್‌ ಸಿಟಿಯ ಚೌಬಾರ ಸಮೀಪದ ಸುತ್ತಮುತ್ತಲಿನ ಎಲ್ಲ ಚರಂಡಿಗಳ ಹೊಲಸು ರಸ್ತೆಯ ಮೇಲೆ ನದಿಯಂತೆ ಹರಿದಿತ್ತು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದ್ದವು. ಸಾರ್ವಜನಿಕರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅದು ನಮ್ಮ ವ್ಯವಸ್ಥೆಗೆ ಕನ್ನಡಿ ಹಿಡಿದಿತ್ತು.

ಹೊಲಸು ನೀರು ಅನೇಕ ಮನೆಗಳಿಗೆ ನುಗ್ಗಿದ ಪರಿಣಾಮ ಅದನ್ನು ಸರಿಪಡಿಸಿಕೊಳ್ಳಲು ಅವರಿಗೆ ಹಲವು ದಿನಗಳೇ ಬೇಕಾಯಿತು. ಹೀಗಾದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಇನ್ನು, ಡಿಸಿಸಿ ಬ್ಯಾಂಕ್‌ ಹಾಗೂ ಅದಕ್ಕೆ ಹೊಂದಿಕೊಂಡಿರುವ ಪೆಟ್ರೋಲ್‌ ಬಂಕ್‌ ಸಮೀಪದ ಚರಂಡಿ ನೀರು ಕೂಡ ಬಸವೇಶ್ವರ ವೃತ್ತದ ಎದುರಿನ ಮುಖ್ಯರಸ್ತೆಯಲ್ಲಿ ಹರಿಯುತ್ತಿತ್ತು. ಸಾಕಷ್ಟು ಟೀಕೆಗಳು ವ್ಯಕ್ತವಾದ ನಂತರ ಕೆಲ ದಿನಗಳ ಹಿಂದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಹೋದ ವಾರ ಸುರಿದ ಭಾರಿ ಮಳೆಗೆ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ನ್ಯಾಯಾಲಯ, ತಹಶೀಲ್ದಾರ್‌ ಕಚೇರಿ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಅಪಾರ ನೀರು ಸಂಗ್ರಹಗೊಂಡಿತು. ಮಳೆ ನಿಂತು ಹಲವು ಗಂಟೆಗಳ ನಂತರವೂ ನೀರು ಸುಗಮವಾಗಿ ಹರಿದು ಹೋಗಲಿಲ್ಲ. ಇದರೊಂದಿಗೆ ಚರಂಡಿ ನೀರು ಕೂಡ ಸೇರಿಕೊಂಡಿದ್ದರಿಂದ ದುರ್ಗಂಧಕ್ಕೆ ಕಾರಣವಾಗಿತ್ತು. ಇದು ನಗರದ ಹೃದಯ ಭಾಗ. ನ್ಯಾಯಾಲಯ ಸೇರಿದಂತೆ ಪ್ರಮುಖ ಕಚೇರಿಗಳು ಇರುವ ಭಾಗ. ಹೀಗಿದ್ದರೂ ಇಲ್ಲಿ ಚರಂಡಿಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತಿದೆ ಎನ್ನುವುದನ್ನು ಇದರಿಂದಲೇ ತಿಳಿಯಬಹುದು.

ಇಡೀ ನಗರದ ಪರಿಸ್ಥಿತಿ ಹೇಗಿದೆ ಎನ್ನುವುದಕ್ಕೆ ಮೇಲಿನ ಅಂಶಗಳು ಕೆಲ ನಿದರ್ಶನಗಳಷ್ಟೇ. ಇದರಿಂದ ಅತಿ ಹೆಚ್ಚು ಸಮಸ್ಯೆಗೆ ಒಳಗಾಗುತ್ತಿರುವವರು ತಗ್ಗು ಪ್ರದೇಶದ ಬಡಾವಣೆಗಳ ನಿವಾಸಿಗಳು. ಮಳೆಗಾಲ ಬಂತೆಂದರೆ ಅವರ ಚಿಂತೆ ಹೆಚ್ಚಾಗುತ್ತದೆ. ಏಕೆಂದರೆ ಮಳೆ ನೀರು ರಸ್ತೆಗಳ ಮೂಲಕ ನೇರ ಅವರ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ಬದುಕು ಪುನಃ ಹಳಿಗೆ ಬರಲು ಅನೇಕ ದಿನಗಳೇ ಬೇಕಾಗುತ್ತದೆ. ಇದಕ್ಕೆಲ್ಲ ಶಾಶ್ವತ ಪರಿಹಾರವಿಲ್ಲವೇ?

ಖಂಡಿತ ಇದೆ. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದ ಹೀಗಾಗುತ್ತಿದೆ ಎನ್ನುವುದು ನಾಗರಿಕರ ನೇರ ಆರೋಪ. ಎಲ್ಲ ಗೊತ್ತಿದ್ದೂ ಗೊತ್ತಿಲ್ಲದವರಂತೆ ವರ್ತಿಸುವವರಿಗೆ ಏನು ಹೇಳಬೇಕು ಎಂದು ಪ್ರಶ್ನಿಸುತ್ತಾರೆ ಜನರು.

‘ನಗರದಲ್ಲಿ ಚರಂಡಿಗಳ ಸಮಸ್ಯೆ ಹೇಳತೀರದ್ದಾಗಿದೆ. ಅವುಗಳಿಂದ ಹೊಲಸು ರಸ್ತೆಯ ಮೇಲೆ ಹರಿದಾಡುತ್ತಿದೆ. ಇನ್ನು, ರಸ್ತೆಗಳ ಪರಿಸ್ಥಿತಿಯಂತೂ ಬೇಡವೇ ಬೇಡ. ಯಾರಾದರೂ ಬಿದ್ದರೆ ಬದುಕುಳಿಯುವುದು ಕಷ್ಟ. ಅಷ್ಟರಮಟ್ಟಿಗೆ ಹಾಳಾಗಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಅವುಗಳ ಮೂಲಕವೇ ಓಡಾಡುತ್ತಾರೆ. ಆದರೆ, ಸರಿಪಡಿಸಲು ಮನಸ್ಸೇಕೆ ಮಾಡುತ್ತಿಲ್ಲ’ ಎಂದು ಚೌಬಾರ ನಿವಾಸಿ ಆಸಿಫ್‌ ಪ್ರಶ್ನಿಸಿದರು.

ಬೀದರ್‌ನ ಮನಿಯಾರ್‌ ತಾಲೀಮ್‌ನಲ್ಲಿರುವ ಉದ್ಯಾನದ ದುಃಸ್ಥಿತಿ
ಬೀದರ್‌ನ ಮನಿಯಾರ್‌ ತಾಲೀಮ್‌ನಲ್ಲಿರುವ ಉದ್ಯಾನದ ದುಃಸ್ಥಿತಿ

‘ಚರಂಡಿ, ರಸ್ತೆ, ಕಸ ವಿಲೇವಾರಿ ಇವುಗಳೆಲ್ಲ ಕನಿಷ್ಠ ಮೂಲಸೌಕರ್ಯಗಳು. ಅವುಗಳನ್ನೇ ಕೊಡಲು ಆಗದಿದ್ದರೆ ನಗರಸಭೆ ಯಾಕಿರಬೇಕು. ಅಷ್ಟೊಂದು ಸಿಬ್ಬಂದಿ ಏಕೆ ಬೇಕು. ಜನರ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ. ಕಾಮಗಾರಿಗಳೇಕೆ ಕಳಪೆಯಾಗುತ್ತಿವೆ. ಸ್ಥಳೀಯ ಶಾಸಕರೇ ಪೌರಾಡಳಿತ ಸಚಿವರಾಗಿದ್ದರೂ ಮೂಲಸೌಕರ್ಯ ಕಲ್ಪಿಸಲು ಸಾಧ್ಯವೇಕೆ ಆಗುತ್ತಿಲ್ಲ. ಅವರಿಗೆ ಇಚ್ಛಾಶಕ್ತಿ ಎನ್ನುವುದು ಇಲ್ಲವೇ’ ಎಂದು ಕೇಳುತ್ತಾರೆ ಹಾರೂರಗೇರಿಯ ಸಂಗಮೇಶ.

ಈ ಸಂಬಂಧ ಬೀದರ್‌ ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

Cut-off box - ನ್ಯೂ ಆದರ್ಶ ಕಾಲೊನಿಯಲ್ಲಿ ತೀವ್ರ ಸಮಸ್ಯೆ ನಗರದ ನ್ಯೂ ಆದರ್ಶ ಕಾಲೊನಿಯ ಜನರಿಗೆ ಮಳೆಯೆಂದರೆ ಭಯ ಬೀಳುತ್ತಿದ್ದಾರೆ. ಭಾರತೀಯ ವಾಯುಪಡೆ ತರಬೇತಿ ಕೇಂದ್ರದಿಂದ ಆಣತಿ ದೂರದಲ್ಲಿ ಈ ಬಡಾವಣೆ ತಲೆ ಎತ್ತಿದೆ. ನೂರಾರು ಮನೆಗಳು ಈ ಭಾಗದಲ್ಲಿ ನಿರ್ಮಾಣವಾಗಿವೆ. ಹೊಸ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಆದರೆ ಇಲ್ಲಿ ಚರಂಡಿ ರಸ್ತೆ ಸೇರಿದಂತೆ ಕನಿಷ್ಠ ಸೌಕರ್ಯಗಳೇ ಇಲ್ಲ. ಮಳೆ ಬಂದರೆ ಈ ಬಡಾವಣೆಯಲ್ಲಿ ನೀರು ಹೊಳೆಯಂತೆ ಹರಿಯುತ್ತದೆ. ಕೆಂಪು ಮಣ್ಣಿನೊಂದಿಗೆ ನೀರು ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಇಷ್ಟೇ ಆದರೆ ಸುಮ್ಮನಿರಬಹುದು. ಆದರೆ ಹಾವು ಚೇಳು ಸೇರಿದಂತೆ ವಿಷಜಂತುಗಳು ಮಳೆಯೊಂದಿಗೆ ಮನೆಯೊಳಗೆ ಬರುತ್ತಿವೆ. ಇದರಿಂದ ಸ್ಥಳೀಯರ ನೆಮ್ಮದಿ ಕದಡಿದೆ. ‘ಇತ್ತೀಚೆಗೆ ಸುರಿದ ಭಾರಿ ಮಳೆಗೆ ನಮ್ಮ ಮನೆಯೊಳಗೆ ಹಾವುಗಳೆಲ್ಲ ಬಂದಿದ್ದವು. ಹೊಲಸು ಕೂಡ ಹರಿದು ಬಂದಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿದ್ದೇವೆ. ನಮ್ಮ ಏರಿಯಾದಲ್ಲಿ ಕನಿಷ್ಠ ಸೌಕರ್ಯಗಳನ್ನು ಕಲ್ಪಿಸಲು ನಗರಸಭೆಯವರಿಗೆ ಸಾಧ್ಯವಾಗಿಲ್ಲ. ಇದರಿಂದ ಸ್ಥಳೀಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ’ ಎಂದು ಸ್ಥಳೀಯ ನಿವಾಸಿ ದಿಗಂಬರ ಗೋಳು ತೋಡಿಕೊಂಡರು.

ಉದ್ಯಾನಗಳೇ ಕಸದ ತೊಟ್ಟಿ

ಬೀದರ್‌ ನಗರದಲ್ಲಿ ಕಸ ವಿಲೇವಾರಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಕೆಲ ಬಡಾವಣೆಗಳಿಗೆ ಎರಡ್ಮೂರು ದಿನಗಳಿಗೊಮ್ಮೆ ಕಸ ಸಂಗ್ರಹಿಸುವ ವಾಹನಗಳು ಹೋದರೆ ಕೆಲವೆಡೆ ವಾರಕ್ಕೊಮ್ಮೆ ಹೋಗುತ್ತವೆ. ಜನ ಅನಿವಾರ್ಯವಾಗಿ ಖಾಲಿ ನಿವೇಶನಗಳು ಉದ್ಯಾನಗಳಲ್ಲಿ ರಸ್ತೆಯ ಪಕ್ಕದಲ್ಲಿ ಕಸ ಎಸೆದು ಹೋಗುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನ ಮನಿಯಾರ್‌ ತಾಲೀಮ್‌ನಲ್ಲಿರುವ ಉದ್ಯಾನ. ಅಲ್ಲಿ ಸುತ್ತಮುತ್ತಲಿನ ಜನ ಕಸ ಎಸೆದು ಹೋಗುವುದರಿಂದ ಉದ್ಯಾನದೊಳಗೆ ಜನ ಓಡಾಡದಂತಹ ಪರಿಸ್ಥಿತಿ ಇದೆ. ಬೀಡಾಡಿ ದನಗಳು ಹಂದಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಈ ರೀತಿ ನಗರದಲ್ಲಿ ಹಲವು ಉದ್ಯಾನಗಳ ಪರಿಸ್ಥಿತಿ ಹೆಚ್ಚು ಕಮ್ಮಿ ಹೀಗೆಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT