ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ₹2,200 ಲಂಚ ಪಡೆದ ಗ್ರಾಮ ಲೆಕ್ಕಿಗನಿಗೆ ಮೂರು ವರ್ಷ ಜೈಲು ಶಿಕ್ಷೆ

Published 8 ಏಪ್ರಿಲ್ 2024, 13:28 IST
Last Updated 8 ಏಪ್ರಿಲ್ 2024, 13:28 IST
ಅಕ್ಷರ ಗಾತ್ರ

ಬೀದರ್‌: ಜಮೀನಿನ ಸರ್ವೇಗೆ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ಬಸವಕಲ್ಯಾಣ ತಾಲ್ಲೂಕಿನ ಬೇಟಬಾಲಕುಂದಾ ಗ್ರಾಮದ ಗ್ರಾಮ ಲೆಕ್ಕಿಗ ಅಯೂಬ್‌ ಖಾನ್‌ ಅಬ್ದುಲ್‌ ಖಾನ್‌ ಎಂಬುವರಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬೀದರ್‌ನ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಎಮ್‌. ಆನಂದಶೆಟ್ಟಿ ಪ್ರಕರಣದ ವಿಚಾರಣೆ ನಡೆಸಿ, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಯೂಬ್‌ ಖಾನ್‌ಗೆ ಮೂರು ವರ್ಷ ಜೈಲು, ₹20 ಸಾವಿರ ದಂಡ ವಿಧಿಸಿದ್ದಾರೆ. ದಂಡ ಭರಿಸಲು ತಪ್ಪಿದ್ದಲ್ಲಿ ಆರು ತಿಂಗಳು ಜೈಲು ಶಿಕ್ಷೆ ನೀಡಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತ ಪೊಲೀಸರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ ಶ್ರೀಮಾಳೆ ವಾದ ಮಂಡಿಸಿದರು.

ಏನಿದು ಪ್ರಕರಣ?:

ಬಸವಕಲ್ಯಾಣ ತಾಲ್ಲೂಕಿನ ಬೇಟಬಾಲಕುಂದಾ ಗ್ರಾಮದ ಸರ್ವೇ ನಂಬರ್‌ 149/ಎ/2 ನಲ್ಲಿರುವ 6 ಎಕರೆ 38 ಗುಂಟೆ ಕೃಷಿ ಜಮೀನು ಸಹೋದರನ ಹೆಸರಿಗೆ ಪೋಡಿ ಮಾಡಿಕೊಡುವುದಕ್ಕಾಗಿ ಗ್ರಾಮದ ಮೊಹಮ್ಮದ್‌ ಖಾನ್‌ ಶೇರ್‌ ಖಾನ್‌ ಅವರು ಗ್ರಾಮ ಲೆಕ್ಕಿಗ ಅಯೂಬ್‌ ಖಾನ್‌ಗೆ ಅರ್ಜಿ ಕೊಟ್ಟಿದ್ದರು. ಇದಕ್ಕಾಗಿ ₹2,200 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2011ರ ಜನವರಿ 19ರಂದು ಬಸವಕಲ್ಯಾಣ ನಗರದ ಮಳಿಗೆಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಪೊಲೀಸ್‌ ಇನ್‌ಸ್ಪೆಕ್ಟರ್‌ ಆರ್‌.ಎಸ್‌. ಜಹಾಗೀರದಾರ ಅವರು ತನಿಖೆ ನಡೆಸಿ, ಲಂಚ ನಿಷೇಧ ಕಾಯ್ದೆ ಅಡಿಯಲ್ಲಿ ಅಯೂಬ್‌ ಖಾನ್‌ ವಿರುದ್ಧ ದೋಷರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT