ಭಾನುವಾರ, ಜುಲೈ 25, 2021
22 °C

ಜೈವಿಕ ಪೀಡೆ ನಾಶಕ ಅಗತ್ಯ: ರಾಯಚೂರು ಕೃಷಿ ವಿ.ವಿ ಮುಖ್ಯ ವಿಜ್ಞಾನಾಧಿಕಾರಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ನಿಸರ್ಗದ ಸಂರಕ್ಷಣೆಗೆ ಜೈವಿಕ ಪೀಡೆ ನಾಶಕಗಳ ಅಗತ್ಯ ಇದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶನಾಲಯದ ಮುಖ್ಯ ವಿಜ್ಞಾನಾಧಿಕಾರಿ ಡಾ. ಅರುಣಕುಮಾರ ಹೊಸಮನಿ ಅಭಿಪ್ರಾಯಪಟ್ಟರು.

ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರವು ಕೆ.ವಿ.ಕೆ ಕೃಷಿ ಪಾಠಶಾಲೆ ಸರಣಿಯಲ್ಲಿ ‘ಬೆಳೆಗಳಲ್ಲಿ ಕೀಟ, ಪೀಡೆಗಳ ಸಮಗ್ರ ಹತೋಟೆಯಲ್ಲಿ ಜೈವಿಕ ವಿಧಾನಗಳು’ ಕುರಿತು ರೈತರಿಗೆ ಆನ್‍ಲೈನ್‍ನಲ್ಲಿ ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತಿಯಾದ ರಾಸಾಯನಿಕಗಳ ಬಳಕೆಯು ಪ್ರಕೃತಿ ಹಾಗೂ ಮಾನವನ ಮೇಲೆ ಅನೇಕ ದುಷ್ಪರಿಣಾಮ ಉಂಟು ಮಾಡುತ್ತಿದೆ. ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಜೈವಿಕ ಪೀಡೆ ಹತೋಟಿ ವಿಧಾನ ಇದಕ್ಕೆ ಪರಿಹಾರವಾಗಬಲ್ಲದು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಜೈವಿಕ ನಿಯಂತ್ರಣ ವಿಭಾಗ ಮತ್ತು ಸಾವಯವ ಕೃಷಿ ಘಟಕದಲ್ಲಿ ಉತ್ಪಾದಿಸುತ್ತಿರುವ ಟ್ರೈಕೋಗ್ರಾಮ, ಟ್ರೈಕೊಡರ್ಮಾ, ಮೆಟರೈಝಿಯಂ ರಿಲೈ, ಮೆಟರೈಝಿಯಂ ಅನಿಸೋಪ್ಲಿಯೆ, ಬೆವೆರಿಯಾ ಬ್ಯಾಷಿಯಾನ ಮತ್ತು ಲೆಕ್ಯಾನಿಸಿಲಿಯಮ್ ಲೇಕ್ಯಾನಿ ಜೈವಿಕ ಪರಿಕರಗಳು ತೊಗರಿ, ಹೆಸರು, ಉದ್ದು, ಸೋಯಾ ಅವರೆ, ಜೋಳ, ತರಕಾರಿ ಹಾಗೂ ಹಣ್ಣಿಗಳಿಗೆ ಕಾಡುವ ಕೀಟ, ಪೀಡೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಮರ್ಥವಾಗಿವೆ ಎಂದು ಹೇಳಿದರು.

ಜೈವಿಕ ಪೀಡೆ ನಾಶಕಗಳನ್ನು ವಿವೇಚನೆಯಿಂದ ಬಳಸಿದ್ದಲ್ಲಿ ಆರೋಗ್ಯಕರ ಕೃಷಿ ಉತ್ಪನ್ನಗಳನ್ನು ಪಡೆಯಲು ಸಾಧ್ಯವಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ ಹೇಳಿದರು.
ಜೈವಿಕ ಪೀಡೆ ನಾಶಕಗಳ ಖರ್ಚು ಕಡಿಮೆ ಇದೆ. ನಿಸರ್ಗದ ಸಮತೋಲನ ಕಾಪಾಡಲು ಸಹಕಾರಿ ಕೂಡ ಆಗಿವೆ ಎಂದು ತಿಳಿಸಿದರು.

ಜಿಲ್ಲೆಯ ಹಂದ್ರಾಳದ ರೈತ ಮಹಾದೇವ ರೆಡ್ಡಿ ಅವರು ಕಬ್ಬಿನಲ್ಲಿ ಗೊಣ್ಣೆ ಹುಳು ನಿರ್ವಹಣೆಗೆ ಮೆಟರೈಝಿಯಂ ಅನಿಸೋಪ್ಲಿಯೆ ಅನ್ನು ಬೆಲ್ಲ ಹಾಗೂ ಕಡಲೆ ಹಿಟ್ಟಿನೊಂದಿಗೆ ಬಳಸಿ ಯಶಸ್ವಿಯಾದ ತಮ್ಮ ಅನುಭವ ಹಂಚಿಕೊಂಡರು.

ಬೀದರ್, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕಲಬುರ್ಗಿ, ಬೆಂಗಳೂರು ಸೇರಿದಂತೆ ವಿವಿಧೆಡೆಯ 55 ರೈತರು ಪಾಲ್ಗೊಂಡು, ತಮ್ಮ ಪ್ರಶ್ನೆ, ಸಂದೇಹ, ಕೀಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು