ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಪಾಪನಾಶ ಕೆರೆ ಪರಿಸರ ಶುಚಿಗೊಳಿಸಿದ ಬಿಜೆಪಿ ಕಾರ್ಯಕರ್ತರು

ಡಾ. ಶ್ಯಾಮಪ್ರಸಾದ್ ಮುಖರ್ಜಿ ಕೊಡುಗೆ ಅನನ್ಯ: ಚಂದ್ರಶೇಖರ ಪಾಟೀಲ
Last Updated 2 ಜುಲೈ 2021, 11:23 IST
ಅಕ್ಷರ ಗಾತ್ರ

ಬೀದರ್: ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶುಕ್ರವಾರ ನಗರದ ಪಾಪನಾಶ ಕೆರೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕೈಗೊಂಡರು.

ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಶೇಕಾಪುರ ಅವರ ನೇತೃತ್ವದಲ್ಲಿ ಕೆರೆ ಪರಿಸರದಲ್ಲಿ ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಕಸ, ಕಡ್ಡಿಗಳನ್ನು ಆಯ್ದು, ಗೋಣಿ ಚೀಲಗಳಲ್ಲಿ ತುಂಬಿ ವಿಲೇವಾರಿ ಮಾಡಿದರು.
ಪಾಪನಾಶ ದೇಗುಲದ ಪರಿಸರದಲ್ಲಿ ಮಾವು, ಪೇರಲ, ಬೇವು, ಹುಣಸೆ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಸಸಿಗಳನ್ನು ನೆಟ್ಟರು.

ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ವೃಕ್ಷಾರೋಪಣ ಕಾರ್ಯಕ್ರಮ ನಿಮಿತ್ತ ಪಾಪನಾಶ ದೇವಸ್ಥಾನ ಪರಿಸರದಲ್ಲಿ ಸಸಿ ನೆಡುವ ಜತೆಗೆ ಕೆರೆ ಪರಿಸರವನ್ನೂ ಸ್ವಚ್ಛಗೊಳಿಸಲಾಗಿದೆ ಎಂದು ಚಂದ್ರಶೇಖರ ಪಾಟೀಲ ಶೇಕಾಪುರ ತಿಳಿಸಿದರು.

ಪಾಪನಾಶ ದೇಗುಲ ಐತಿಹಾಸಿಕ ಮಹತ್ವ ಪಡೆದಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಸಸಿಗಳನ್ನು ನೆಡುವ ಮೂಲಕ ದೇವಸ್ಥಾನ ಪರಿಸರವನ್ನು ಇನ್ನಷ್ಟು ಸುಂದರಗೊಳಿಸಬೇಕಿದೆ. ಕೆರೆ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಹೇಳಿದರು.

ಸಾರ್ವಜನಿಕರು ದೇವಸ್ಥಾನ ಹಾಗೂ ಕೆರೆ ಪರಿಸರದಲ್ಲಿ ಸ್ವಚ್ಛತೆ ಕಾಪಾಡಬೇಕು. ಕೆರೆ ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರ ಅನುಪಯುಕ್ತ ವಸ್ತುಗಳನ್ನು ಬೀಸಾಡಬಾರದು ಎಂದು ಮನವಿ ಮಾಡಿದರು.

ದೇಶಕ್ಕೆ ಡಾ. ಶಾಮಪ್ರಸಾದ್ ಮುಖರ್ಜಿ ಅವರ ಕೊಡುಗೆ ಅಪಾರವಾಗಿದೆ. ಅವರ ತ್ಯಾಗ, ಬಲಿದಾನವನ್ನು ಪ್ರತಿಯೊಬ್ಬರೂ ಸ್ಮರಿಸಬೇಕಾಗಿದೆ. ಜನಸಂಘದ ಬೆಳವಣಿಗೆಗೆ ಕಾರಣರಾದ ಪ್ರಮುಖರಲ್ಲಿ ಅವರೂ ಒಬ್ಬರಾಗಿದ್ದರು ಎಂದು ತಿಳಿಸಿದರು.

ಯುವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಜನಾರ್ದನ್ ರೆಡ್ಡಿ, ಕೈಲಾಶನಾಥ ಕಾಜಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ಘಟಕದ ಸಹ ಸಂಚಾಲಕ ತಾನಾಜಿ ಸಗರ, ಮುಖಂಡರಾದ ವೀರೇಶ ಸ್ವಾಮಿ, ಸಚಿನ್ ಮಠಪತಿ, ಮಲ್ಲಿಕಾರ್ಜುನ ದೇಶಮುಖ, ರಾಕೇಶ್ ಪಾಟೀಲ, ಸಂತೋಷ ಕಾಳೆ, ಸಾಯಿನಾಥ ಪಾಟೀಲ, ಮಹೇಶ ವಿಶ್ವಕರ್ಮ, ಸತೀಶ ಶಟಗುಂಡಿ, ವಿಶಾಲ ಅತಿವಾಳ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT