ಶನಿವಾರ, ಮೇ 15, 2021
24 °C

ಕೈ ಹಿಡಿಯದ ಅನುಕಂಪ; ಬಸವಕಲ್ಯಾಣದಲ್ಲಿ ಬಿಜೆಪಿಗೆ ಗೆಲುವಿನ ಸಿಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನುಕಂಪ ಮತ್ತು ‘ಸ್ವಾಭಿಮಾನ’ ಕೆಲಸ ಮಾಡಲಿಲ್ಲ. ಮತದಾರರು ‘ಇವನಾರವ’ ಎನ್ನದೆ ‘ಹೊರಗಿನ’ ಅಭ್ಯರ್ಥಿಯನ್ನು ಗೆಲ್ಲಿಸಿದರು.

ಕಾಂಗ್ರೆಸ್‌ ಶಾಕರಾಗಿದ್ದ ಬಿ.ನಾರಾಯಣರಾವ್‌ ಅವರು ಕೋವಿಡ್‌ನಿಂದ ನಿಧನರಾಗಿದ್ದರಿಂದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು. ದಿವಂಗತ ನಾರಾಯಣರಾವ್‌ ಅವರ ಪತ್ನಿ ಮಾಲಾ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ ಪಕ್ಷ ಅನುಕಂಪದಲ್ಲಿ ಗೆಲುವು ಸಾಧಿಸಬಹುದು ಎಂದು ನಂಬಿತ್ತು.

ಬಿಜೆಪಿ ಟಿಕೆಟ್‌ ಸಿಗದ ಕಾರಣ ಬಂಡೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ‘ಬಿಜೆಪಿ ನಾಯಕರು ಹೊರಗಿನ ವ್ಯಕ್ತಿಗೆ ಮಣೆ ಹಾಕಿದ್ದಾರೆ. ಸ್ವಾಭಿಮಾನಕ್ಕೆ ಮತ ನೀಡಿ’ ಎಂದು ಪ್ರಚಾರ ನಡೆಸಿದ್ದರು. ಆದರೆ, ಇಲ್ಲಿ ಅದೂ ಕೆಲಸ ಮಾಡಲಿಲ್ಲ.

‘ಇದು ಬಸವಣ್ಣನ ನಾಡು. ಇವನಾರವ, ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎನ್ನಿ’ ಎಂದು ಬಿಜೆಪಿಯವರು ಪ್ರಚಾರದ ವೇಳೆ ಮನವಿ ಮಾಡುತ್ತಿದ್ದರು.

ಬಿಜೆಪಿ ಅಭ್ಯರ್ಥಿ ಶರಣು ಸಲಗರ ಕಳೆದ ಬಾರಿಯ ಕೋವಿಡ್‌ ಲಾಕ್‌ಡೌನ್‌ ವೇಳೆ ಇಡೀ ಕ್ಷೇತ್ರ ಸುತ್ತಿ ಜನರಿಗೆ ನೆರವಾಗಿದ್ದರು. ‘ಸಮಾಜ ಸೇವಕ’ ಎಂದು ಜನ ತಮ್ಮನ್ನು ನಂಬುವಂತೆ ಮಾಡಿದ್ದರು.

ಶರದ್‌ ಪವಾರ್‌ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ, ಮರಾಠ ಸಮಾಜದ ಮುಖಂಡ ಮಾರುತಿರಾವ್‌ ಮುಳೆ ಅವರನ್ನು ಕಣದಿಂದ ಹಿಂದೆ ಸರಿಸಿ  ಅವರನ್ನು ತನ್ನತ್ತ ಸೆಳೆದು ಮರಾಠ ಮತಗಳ ವಿಭಜನೆ ತಪ್ಪಿಸಿದ್ದು ಬಿಜೆಪಿಗೆ ಅನುಕೂಲವಾಯಿತು.

ಜೆಡಿಎಸ್‌ ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಕಾಂಗ್ರೆಸ್‌ಗೆ ದುಬಾರಿಯಾಗಿ ಪರಿಣಮಿಸಿತು.   ಇಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗಿ, ಕಾಂಗ್ರೆಸ್‌ ಅಭ್ಯರ್ಥಿಯ ಸೋಲಿಗೆ ಕಾರಣವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು