ಶುಕ್ರವಾರ, ಜನವರಿ 17, 2020
24 °C
ಭಾಲ್ಕಿ:ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪ

ವಸತಿ ಹಣ ಬಿಡುಗಡೆಗೆ ಬಿಜೆಪಿ ತಾರತಮ್ಯ :ಈಶ್ವರ ಖಂಡ್ರೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಕ್ಷೇತ್ರದಲ್ಲಿ ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರಾತಿ ಮಾಡಿಸಿದ ವಸತಿ ಮನೆಗಳ ಹಣ ಬಿಡುಗಡೆ ಮಾಡುವಲ್ಲಿ ಬಿಜೆಪಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಶಾಸಕ ಈಶ್ವರ ಖಂಡ್ರೆ ಆರೋಪಿಸಿದರು.

ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾನಾ ಯೋಜನೆಯಡಿ ಮಂಜೂರಾಗಿದ್ದ ಸುಮಾರು 2542 ಮನೆಗಳು ಈಗಿನ ಬಿಜೆಪಿ ಸರ್ಕಾರ ಬ್ಲಾಕ್ ಮಾಡುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದು, ಅರ್ಹ ಫಲಾನುಭವಿಗಳು ತೊಂದರೆಗೆ ಸಿಲುಕುವಂತಾಗಿದೆ ಎಂದು ದೂರಿದರು.

3 ವರ್ಷಗಳಲ್ಲಿ 16 ಸಾವಿರ ಮನೆ ಮಂಜೂರಾಗಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ 4360 ಅರ್ಹ ಫಲಾನುಭವಿಗಳು ಮನೆ ಕಟ್ಟಿಸಿಕೊಂಡಿದ್ದು ಹಣ ಕೂಡ ಬಿಡುಗಡೆ ಮಾಡಲಾಗಿದೆ. ಆದರೆ, ಈಗಿನ ಸರ್ಕಾರದಲ್ಲಿ ಸುಮಾರು 4500 ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿಯೂ ಕೂಡ 2017-18ನೇ ಸಾಲಿನಲ್ಲಿ 1912 ಮನೆ ಮಂಜೂರು ಮಾಡಿಸಿದ್ದು, 912 ಫಲಾನುಭವಿಗಳ ಖಾತೆ ಹಣ ಜಮಾ ಆಗಿದ್ದು, 187 ಮನೆಗಳು ಬ್ಲಾಕ್ ಮಾಡಲಾಗಿದ್ದು, ಉಳಿದ ಫಲಾನು ಭವಿಗಳು ಮನೆ ಕಟ್ಟಿಸಿಕೊಂಡರೂ ಕೂಡ ಅವರ ಖಾತೆಗೆ ಹಣ ಜಮಾ ಆಗಿಲ್ಲ. ಫಲಾನುಭವಿಗಳ ಖಾತೆಗೆ ಸರ್ಕಾರ ಹಣ ಜಮಾ ಮಾಡಬೇಕು. ಬ್ಲಾಕ್ ಆಗಿರುವ ಮನೆಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಾನು ಸಚಿವನಿದ್ದ ಸಂದರ್ಭದಲ್ಲಿ ಈಗಿರುವ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಹೊಸದಾಗಿ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ ರೂಪಿಸಿ ಸುತ್ತಮುತ್ತಲಿನ ಇಲಾಖೆಗಳ ಒಪ್ಪಿಗೆ ಪಡೆದು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಚುನಾವಣೆ ಘೋಷಣೆ ಆಗಿದ್ದರಿಂದ ಕಟ್ಟಡ ನಿರ್ಮಾಣದ ಪ್ರಕ್ರಿಯೆ ನನೆಗುದಿಗೆ ಬಿದ್ದಿತು. ಸಂಸದ ಖೂಬಾ ಅವರು ಕೂಡ ನನಗೆ ಮನವಿ ಸಲ್ಲಿಸಿ ಈಗಿರುವ ಸ್ಥಳದಲ್ಲೇ ಜಿಲ್ಲಾಡಳಿತ ಸಂಕೀರ್ಣ ನಿರ್ಮಿಸುವಂತೆ ಒತ್ತಾಯಿಸಿದ್ದರು.

ಆದರೆ, ಇದೀಗ ಬೀದರ್ ನಗರದಿಂದ 9 ಕಿ.ಮೀ. ದೂರದಲ್ಲಿರುವ ನೌಬಾದ್‍ನ ಹೊರ ವಲಯದಲ್ಲಿ ಜಿಲ್ಲಾ ಆಡಳಿತ ಸಂಕೀರ್ಣ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಹಿಂದೆ ಜಿಲ್ಲಾಡಳಿತ ಕಟ್ಟಡದ ಸ್ಥಳ ಮಾಮನಕೆರೆಯಲ್ಲಿ ಆಯ್ಕೆ ಮಾಡುವಲ್ಲಿ ನನ್ನ ಹಿತಾಸಕ್ತಿ ಅಡಗಿದೆ ಎಂದು ಸಂಸದರು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾಗಿದೆ. ಈ ಕುರಿತು ಅವರು ಸ್ಪಷ್ಟನೆ ನೀಡಬೇಕು ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು