ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಟಾಚಾರ ಉಲ್ಲಂಘನೆ: ಆರೋಪ

ಬಿಜೆಪಿಯಿಂದ ಪ್ರತಿಭಟನೆ: ದೂರು ಸಲ್ಲಿಕೆ
Last Updated 13 ಮಾರ್ಚ್ 2021, 4:27 IST
ಅಕ್ಷರ ಗಾತ್ರ

ಭಾಲ್ಕಿ: ‘ತಾಲ್ಲೂಕಿನಲ್ಲಿ ಸರ್ಕಾರದಿಂದ ಮಂಜೂರಾದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಶಾಸಕ ಈಶ್ವರ ಖಂಡ್ರೆ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲಗೆ ದೂರು ಸಲ್ಲಿಸಿದರು.

‘ನಂತರ ಮಾತನಾಡಿದ ಬಿಜೆಪಿ ಪ್ರಮುಖರು, ಶಾಸಕ ಖಂಡ್ರೆ ಅವರು ವಿವಿಧ ಯೋಜನೆಗಳ ಅನುಷ್ಠಾನ, ಫಲಾನುಭವಿಗಳಿಗೆ ಚೆಕ್‌, ಹಕ್ಕುಪತ್ರ ವಿತರಣೆ ಸೇರಿದಂತೆ ಸರ್ಕಾರದ ಕಾರ್ಯಕ್ರಮ ಯಾವ ರೀತಿ ಇರಬೇಕು ಆ ರೀತಿ ಮಾಡುತ್ತಿಲ್ಲ. ಈ ಹಿಂದೆಯೂ ಚುನಾವಣೆಯಲ್ಲಿ ಮತ ಗಳಿಸುವ ಉದ್ದೇಶದಿಂದ ಶಿಷ್ಟಾಚಾರ ಉಲ್ಲಂಘಿಸಿ ವಸತಿ ಮನೆಗಳ ಹಕ್ಕುಪತ್ರ ಹಂಚಿರುವ ಪರಿಣಾಮ ರಾಜ್ಯದೆಲ್ಲೆಡೆ ಚರ್ಚೆ ನಡೆದಿರುವ ಸಂಗತಿ ಎಲ್ಲರಿಗೂ ತಿಳಿದ ಸಂಗತಿ’ ಎಂದು ಹೇಳಿದರು.

‘ವಸತಿ ಹಗರಣದಲ್ಲಿ ₹93 ಕೋಟಿ ಅವ್ಯವಹಾರ ನಡೆದಿದೆ. ಸುಮಾರು ಒಂಬತ್ತು ಸಾವಿರ ಮನೆಗಳನ್ನು ಅನರ್ಹ ಫಲಾನುಭವಿಗಳಿಗೆ ಹಂಚಲಾಗಿದೆ ಎಂದು ರಾಜೀವ ಗಾಂಧಿ ವಸತಿ ನಿಗಮದವರು ಈಗಾಗಲೇ ವರದಿ ನೀಡಿದ್ದಾರೆ. ಪುನಃ ನಡೆಸಿದ ತನಿಖೆಯಲ್ಲಿ ಅದೇ ರೀತಿಯ ವರದಿಯನ್ನು ಅಧಿಕಾರಿಗಳು ನೀಡಿದ್ದಾರೆ’ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.

‘ಇಷ್ಟೆಲ್ಲಾ ಆದರೂ ತಾಲ್ಲೂಕಿನ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಶಾಸಕರ ಮಾತಿಗೆ ತಲೆಬಾಗಿ ಅವರ ಮನೆ, ಥೇಟರ್‌, ಕಾಲೇಜಿನಲ್ಲಿ ವಿವಿಧ ಇಲಾಖೆಗಳ ಯೋಜನೆಗಳನ್ನು ಫಲಾನುಭವಿಗಳಿಗೆ ಹಂಚುತ್ತಿದ್ದಾರೆ’ ಎಂದು ದೂರಿದರು.

‘ಈಚೆಗೆ ಎಸ್‌.ಇ.ಟಿ.ಪಿ.ಯ ಫಲಾನುಭವಿಗಳಿಗೂ, ಪಶುಭಾಗ್ಯ ಫಲಾನುಭವಿಗಳಿಗೂ ತಮ್ಮ ಮನೆಯಲ್ಲಿಯೇ ಚೆಕ್‌ ವಿತರಿಸಿದ್ದಾರೆ. ಇದಕ್ಕೆ ಕಾರಣೀಕತ೯ರಾದ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಬಿಜೆಪಿ ತಾಲ್ಲೂಕು ಘಟಕ ಒತ್ತಾಯಿಸುತ್ತದೆ. ಇನ್ನೂ ಮುಂದೆಯಾದರೂ ಯಾವುದೇ ಅಧಿಕಾರಿಗಳು, ಯಾವುದೇ ಕಾರಣಕ್ಕೂ ಶಿಷ್ಟಾಚಾರ ಉಲ್ಲಂಘಿಸದಂತೆ ನೋಡಿಕೊಳ್ಳಬೇಕು’ ಎಂದು ತಹಶೀಲ್ದಾರ್‌ಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಂಡಿತ ಶಿರೋಳೆ, ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ, ಪ್ರಮುಖರಾದ ಶಿವರಾಜ ಗಂದಗೆ, ಸೂರಜಸಿಂಗ್‌ ರಜಪೂತ, ಪಂಡಿತ ಶಿರೋಳೆ, ಶಾಂತವೀರ ಕೇಸ್ಕರ್‌, ಸಂಜು ಪಾಟೀಲ, ಸುಧಾಕರ ಸೂರ್ಯವಂಶಿ, ರಮೇಶ ಕಡಗಂಚಿ, ಪ್ರವೀಣ ಸವರೆ, ಸುರೇಶ ಹುಬ್ಬಳ್ಳಿಕರ, ಸಂತೋಷ ತಗರಖೇಡೆ, ರಫಿಕ್‌ ಚೌಧರಿ, ನಾಗೇಶ ಶಿಂಧೆ, ವಿನೋದ ಕಾರಾಮುಂಗೆ, ಸತೀಶ ಬಿರಾದರ, ಸಂತೋಷ ಪಾಟೀಲ, ಶಿವಾಜಿ ಮೇತ್ರೆ, ಬಾಬುರಾವ್‌ ಧೂಪೆ ಹಾಗೂ ಸಂಗಮೇಶ ಭೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT