ಬೀದರ್: ‘ಭಾರತದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗುವ ಸ್ಥಿತಿ ಮೂಡಿದಾಗ ಮೀಸಲಾತಿ ತೆಗೆದು ಹಾಕುವುದರ ಬಗ್ಗೆ ಪಕ್ಷ ಆಲೋಚಿಸಲಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇತ್ತೀಚೆಗೆ ಅಮೆರಿಕದಲ್ಲಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.
ನಗರದ ಗಣೇಶ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಮಾರ್ಗದುದ್ದಕ್ಕೂ ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಹಾಕಿದರು. ಆನಂತರ ಪೊಲೀಸರ ಕಣ್ಣು ತಪ್ಪಿಸಿ, ಕಾರ್ಯಕ್ರಮದ ಕೊನೆಯಲ್ಲಿ ಕಾರಿನಿಂದ ದಿಢೀರನೆ ಅವರ ಪ್ರತಿಕೃತಿ ತಂದು ದಹಿಸಿದರು. ಇದನ್ನು ತಡೆಯಲು ಪೊಲೀಸರು ನಡೆಸಿದ ಪ್ರಯತ್ನ ಫಲ ಕೊಡಲಿಲ್ಲ.
ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಹುಲ್ ಗಾಂಧಿ ಅವರು ವಿದೇಶಿ ನೆಲದಲ್ಲಿ ನಿಂತು ಮೀಸಲಾತಿ ತೆಗೆಯುವ ಮಾತುಗಳನ್ನು ಆಡಿದ್ದಾರೆ. ಮೀಸಲಾತಿ ಕೊಟ್ಟಿದ್ದು ಇವರಾ? ಅವರ ಮುತ್ತಜ್ಜ ಜವಾಹರಲಾಲ್ ನೆಹರೂ, ಅಜ್ಜಿ ಇಂದಿರಾ ಗಾಂಧಿ, ತಂದೆ ರಾಜೀವ್ ಗಾಂಧಿ ಅವರು ಮೀಸಲಾತಿ ಕೊಟ್ಟಿದ್ರಾ? ನಮ್ಮ ತಂದೆ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿ ಕೊಟ್ಟಿದ್ದಾರೆ. ಅವರ ಹೋರಾಟದ ಫಲದಿಂದ ಎಲ್ಲರಿಗೂ ಮೀಸಲಾತಿ ಫಲ ದೊರೆತಿದೆ ಎಂದು ಹೇಳಿದರು.
ರಾಹುಲ್ ಅವರ ಮುತ್ತಜ್ಜ ಪ್ರಧಾನಿಯಿದ್ದಾಗ ರಾಜ್ಯಗಳಿಗೆ ಪತ್ರ ಬರೆದು, ಮೀಸಲಾತಿ ತೆಗೆಯಬೇಕೆಂದು ಹೇಳಿದ್ದರು. ಅದಕ್ಕೆ ರಾಹುಲ್ ಉತ್ತರಿಸಬೇಕು. ಅದನ್ನೇ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮಾಡಿದ್ದರು. ಈಗ ರಾಹುಲ್ ಮುಂದುವರೆಸಿದ್ದಾರೆ. ಇವರು ದಲಿತ ವಿರೋಧಿ, ಹಿಂದುಳಿದ ವರ್ಗದವರ ವಿರೋಧಿಗಳು. ಚುನಾವಣೆಗಳಲ್ಲಿ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿದ್ದಾರೆ. ಜನ ಬುದ್ಧಿವಂತರಾಗಿರದಿದ್ದರೆ ಇವರ ಅಂಗಡಿ ವ್ಯಾಪಾರ ಜೋರಾಗಿ ನಡೆಯುತ್ತಿತ್ತು ಎಂದು ವ್ಯಂಗ್ಯವಾಡಿದರು.
ನನ್ನ ಪಕ್ಷ ಜಾತಿ ನಿಂದನೆ ಮಾಡಿದ್ದನ್ನು ಬೆಂಬಲಿಸಲ್ಲ. ಮುನಿರತ್ನ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ಕ್ರಮ ಕೈಗೊಳ್ಳಬೇಕಿತ್ತು. ಪಿಎಸ್ಐ ಪರಶುರಾಮ ಸತ್ತಾಗ ಅವರ ಗರ್ಭಿಣಿ ಹೆಂಡತಿ ರಸ್ತೆಯಲ್ಲಿ ಧರಣಿ ಮಾಡಿದ್ದರು. ಆದರೂ ಆಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಶಾಸಕ ಚನ್ನಾರೆಡ್ಡಿ ಮೇಲೆ ಎಫ್‌ಐಆರ್ ಆಗಿದ್ದರೂ ಬಂಧಿಸಿಲ್ಲ. ಇಂದು ನಡೆದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ದಲಿತರು ಆಕ್ಷೇಪಿಸಿದ್ದರಿಂದ ಅವರು ವೇದಿಕೆಯಿಂದ ಕೆಳಗಿಳಿದು ಹೋಗಿದ್ದಾರೆ. ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಅವರು ಬಿಜೆಪಿ ಶಾಸಕನ ನಾಲಿಗೆ ಕಟ್ ಮಾಡುತ್ತೇನೆ ಎಂದು ಹೇಳಿಕೆ ಕೊಟ್ಟರೂ ಕ್ರಮ ಕೈಗೊಂಡಿಲ್ಲ. ನಿಮಗೆ ತಾಕತ್ತಿದ್ದರೆ ವಿದೇಶಿ ನೆಲದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ನಾಲಿಗೆ ಕಟ್ ಮಾಡಿ ಎಂದು ಸವಾಲೆಸೆದರು.
ಕಾಂಗ್ರೆಸ್‌ನವರ ಭ್ರಷ್ಟಾಚಾರ ಮಿತಿ ಮೀರಿದೆ. ಪರಸ್ಪರ ಅವರೇ ಜಗಳವಾಡಿಕೊಳ್ಳುತ್ತಿದ್ದಾರೆ. ಬರುವ ಬುಧವಾರ ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ. ಬಂಡವಾಳ ಖಾಲಿಯಾಗಿದೆ. ರೈತರಿಗೆ ಪರಿಹಾರ ಕೊಡುತ್ತಿಲ್ಲ. ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಶರಣು ಸಲಗರ್, ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ, ಮಾಜಿಶಾಸಕರಾದ ಪ್ರಕಾಶ್ ಖಂಡ್ರೆ, ಗುಂಡಪ್ಪ ವಕೀಲ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಉಲ್ಲಾಸಿನಿ, ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ಪೀರಪ್ಪ ಔರಾದೆ, ಸೂರ್ಯಕಾಂತ ಶೆಟಕಾರ, ಸಂಜೀವ ಪಾಟೀಲ, ನಂದಕಿಶೋರ್ ವರ್ಮಾ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.