ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಈಡೇರುವುದೇ ಜಿಲ್ಲಾ ಭವನ, ಮಹಾನಗರ ಪಾಲಿಕೆ ಕನಸು

ಕಲಬುರಗಿ ಸಚಿವ ಸಂಪುಟದ ಸಭೆ ಮೇಲೆ ಗಡಿ ಜಿಲ್ಲೆಗೆ ಹಲವು ನಿರೀಕ್ಷೆಗಳು
Published : 15 ಸೆಪ್ಟೆಂಬರ್ 2024, 5:11 IST
Last Updated : 15 ಸೆಪ್ಟೆಂಬರ್ 2024, 5:11 IST
ಫಾಲೋ ಮಾಡಿ
Comments

ಬೀದರ್‌: ಕಲಬುರಗಿಯಲ್ಲಿ ಸೆಪ್ಟೆಂಬರ್‌ 17ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಸಹಜವಾಗಿಯೇ ಗಡಿ ಜಿಲ್ಲೆ ಬೀದರ್‌ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ಸಭೆ ಸಂಬಂಧ ರಾಜ್ಯ ಸರ್ಕಾರವು ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲು ಸೂಚಿಸಿತ್ತು. ಈಗಾಗಲೇ ಜಿಲ್ಲಾಡಳಿತದಿಂದ ಪ್ರಸ್ತಾವ ಸಲ್ಲಿಸಲಾಗಿದ್ದು, ಬೀದರ್‌ ಜಿಲ್ಲಾ ಭವನ ನಿರ್ಮಾಣ ಆದ್ಯತೆ ಮೇರೆಗೆ ಮಾಡುವಂತೆ ಕೋರಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಬೀದರ್‌ ಜಿಲ್ಲಾಧಿಕಾರಿ ಕಚೇರಿ ಸಂಪೂರ್ಣ ಶಿಥಿಲಗೊಂಡಿದೆ. ಸಿದ್ದರಾಮಯ್ಯನವರ ಮೊದಲ ಅವಧಿ, ಆನಂತರದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸ ಜಿಲ್ಲಾ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೆಳವಣಿಗೆಗಳು ನಡೆದಿದ್ದವು. ಆದರೆ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು ಅವಧಿ ಕಳೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು, ಶೀಘ್ರದಲ್ಲೇ ಜಿಲ್ಲಾ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಹಲವು ಸಲ ಹೇಳಿದ್ದಾರೆ. ಆದರೆ, ಆ ‘ಶೀಘ್ರ’ ಸಮಯ ಯಾವಾಗ ಬರುತ್ತದೆ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.

ಶಿಥಿಲಗೊಂಡಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಹಲವು ಕಡೆಗಳಲ್ಲಿ ಬಿರುಕು ಮೂಡಿವೆ. ಮಳೆ ಬಂದಾಗಲೆಲ್ಲಾ ನೀರು ಜಿನುಗುತ್ತಿದೆ. ಅಧಿಕಾರಿಗಳು, ಸಿಬ್ಬಂದಿ ಆತಂಕದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮಸ್ಯೆ ಉದ್ಭವಿಸಿದಾಗಲೆಲ್ಲಾ ತೇಪೆ ಹಚ್ಚಿ ಸರಿಪಡಿಸಲಾಗುತ್ತಿದೆ. ಆದರೆ, ಶಾಶ್ವತ ಪರಿಹಾರ ಕಂಡುಕೊಳ್ಳುವುದು ಯಾವಾಗ ಎಂಬ ಪ್ರಶ್ನೆ ನಾಗರಿಕರಿಂದ ಕೇಳಿಬರುತ್ತಿವೆ.

ಜಿಲ್ಲಾಧಿಕಾರಿ ಕಚೇರಿ ಸಮೀಪದ ನಗರಸಭೆಯನ್ನು ತೆರವುಗೊಳಿಸಿ ಹಾಲಿ ಡಿ.ಸಿ ಕಚೇರಿ ಇರುವ ಜಾಗದಲ್ಲೇ ಹೊಸ ಜಿಲ್ಲಾ ಆಡಳಿತ ಭವನ ನಿರ್ಮಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಕಟ್ಟಡದ ವಿನ್ಯಾಸ ಕೂಡ ಸಿದ್ಧಗೊಂಡಿದೆ. ಆದರೆ, ನಿರ್ಮಾಣಕ್ಕೆ ಚಾಲನೆ ಕೊಡಲು ಹಿಂದೇಟು ಹಾಕಲಾಗುತ್ತಿದೆ. ‘ಗ್ಯಾರಂಟಿ’ ಯೋಜನೆಗಳಿಂದ ರಾಜ್ಯ ಸರ್ಕಾರದ ಬಳಿ ಅಗತ್ಯ ಅನುದಾನವಿಲ್ಲ. ಹೀಗಾಗಿಯೇ ಜಿಲ್ಲಾ ಆಡಳಿತ ಭವನ ನಿರ್ಮಾಣಕ್ಕೆ ಆಸಕ್ತಿ ತೋರಿಸುತ್ತಿಲ್ಲ ಎಂದು ವಿರೋಧ ಪಕ್ಷ ಬಿಜೆಪಿ ಆರೋಪಿಸಿದೆ. ಮೇಲ್ನೋಟಕ್ಕೆ ಇದು ವಾಸ್ತವವೂ ಅನಿಸುತ್ತಿದೆ.

ಇನ್ನು, ಜಿಲ್ಲಾಡಳಿತದಿಂದ ಕಳಿಸಿರುವ ಪ್ರಸ್ತಾವದಲ್ಲಿ ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಘೋಷಿಸಬೇಕೆಂದು ತಿಳಿಸಲಾಗಿದೆ. ಜಿಲ್ಲಾ ಆಡಳಿತ ಭವನದ ನಂತರ ಎರಡನೇ ಪ್ರಾಶಸ್ತ್ಯ ಇದಕ್ಕೆ ಕೊಡಲಾಗಿದೆ ಎಂದು ತಿಳಿದುಬಂದಿದೆ. ಈ ಹಿಂದಿನ ಬಿಜೆಪಿ ಸರ್ಕಾರ ತನ್ನ ಬಜೆಟ್‌ನಲ್ಲಿ ಮಹಾನಗರ ಪಾಲಿಕೆಯ ಘೋಷಣೆ ಮಾಡಿತ್ತು. ಆದರೆ, ಅದು ಕೆಲವು ತಾಂತ್ರಿಕ ಕಾರಣಗಳಿಂದ ಅನುಷ್ಠಾನಕ್ಕೆ ಬಂದಿರಲಿಲ್ಲ. ಮಹಾನಗರ ಪಾಲಿಕೆಗೆ ಬೇಕಿರುವ ಅಗತ್ಯ ಅರ್ಹತೆಗಳನ್ನು ಬೀದರ್‌ ನಗರ ಹೊಂದಿದೆ. ಎಲ್ಲ ಷರತ್ತುಗಳನ್ನು ಕೂಡ ಪೂರೈಸಿದೆ. ಹೀಗಾಗಿಯೇ ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ವಿಶೇಷ ಮುತುವರ್ಜಿ ವಹಿಸಿ, ಮಹಾನಗರ ಪಾಲಿಕೆ ಘೋಷಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಪಾಲಿಕೆ ಘೋಷಣೆ ಬಹುತೇಕ ಪಕ್ಕಾ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು. ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಬೀದರ್‌ ವಿಶ್ವವಿದ್ಯಾಲಯಕ್ಕೆ ವಿಶೇಷ ಅನುದಾನ ಕೊಟ್ಟು ಅದಕ್ಕೆ ಶಕ್ತಿ ತುಂಬಬೇಕು. ಜಿಲ್ಲೆಗೆ ಹೆಚ್ಚುವರಿ ಬಸ್‌ಗಳನ್ನು ಕೊಡಬೇಕು. ಜಿಲ್ಲೆಯ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು ಸೇರಿದಂತೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಆದರೆ, ಇವುಗಳಿಗೆ ಸ್ಪಂದನೆ ಸಿಗುವುದು ಅನುಮಾನ ಎಂದು ಗೊತ್ತಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಸ್ಥಳೀಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

- ‘ಮಹಾನಗರ ಪಾಲಿಕೆ ಪ್ರಸ್ತಾವ ಸಲ್ಲಿಕೆ’

ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಬೇಕಿರುವ ಎಲ್ಲ ಅರ್ಹತೆಗಳನ್ನು ಹೊಂದಿದೆ. ಈ ಸಂಬಂಧದ ಪ್ರಸ್ತಾವವನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ ಶಿವರಾಜ ರಾಠೋಡ್‌ ಪೌರಾಯುಕ್ತ ಬೀದರ್‌ ನಗರಸಭೆ

‘ಜಿಲ್ಲಾ ಭವನ ಹೊಸ ಗಾಂಧಿಗಂಜ್‌ ಆಗಲಿ’

‘ಹಲವು ವರ್ಷಗಳಿಂದ ಬೀದರ್‌ ನಗರದಲ್ಲಿ ಜಿಲ್ಲಾ ಭವನದ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಅದನ್ನು ಆದ್ಯತೆ ಮೇಲೆ ನಿರ್ಮಿಸಿದರೆ ಜಿಲ್ಲೆಯ ಜನರಿಗೆ ಎಲ್ಲ ಸೇವೆಗಳು ಒಂದೆಡೆ ಸಿಗುತ್ತವೆ. ಹಿಂದಿನ ಸರ್ಕಾರ ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಘೋಷಿಸಿತ್ತು. ಇನ್ನೂ ಅದು ನನೆಗುದಿಗೆ ಬಿದ್ದಿದೆ. ಅದನ್ನು ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಬೇಕು. ವ್ಯಾಪಾರ ವಹಿವಾಟಿಗೆ ಬೀದರ್‌ ಗಾಂಧಿ ಗಂಜ್‌ ಜಾಗ ಕಿರಿದಾಗಿದೆ. ನಗರ ಹೊರವಲಯದಲ್ಲಿ ನೂರು ಎಕರೆ ಜಾಗ ಕೊಟ್ಟು ಹೊಸ ಮಾರುಕಟ್ಟೆ ನಿರ್ಮಿಸಬೇಕು’ ಎನ್ನುತ್ತಾರೆ ಉದ್ಯಮಿ ಹಾಗೂ ಗಾಂಧಿ ಗಂಜ್‌ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಸವರಾಜ ಧನ್ನೂರ. ‘ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕೈಗಾರಿಕೆಗಳು ಜಿಲ್ಲೆಯಲ್ಲಿಲ್ಲ. ಅದಕ್ಕೆ ಪೂರಕವಾದ ವಾತಾವರಣವೂ ಇಲ್ಲ. ಹೊಸ ಕೈಗಾರಿಕೆಗಳು ಬರಬೇಕಾದರೆ ಅವುಗಳಿಗೆ ಕಡಿಮೆ ಬೆಲೆಯಲ್ಲಿ ಜಮೀನು ಕೊಡಬೇಕು. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು. ದೊಡ್ಡ ದೊಡ್ಡ ಬಂಡವಾಳಷಾಹಿಗಳಿಗೆ ಕಡಿಮೆ ಬಡ್ಡಿಯಲ್ಲಿ ಹೆಚ್ಚು ಸಾಲ ನೀಡಲಾಗುತ್ತಿದೆ. ಕಿರು ಹಾಗೂ ಮಧ್ಯಮ ವರ್ಗದ ಉದ್ಯಮಿಗಳಿಗೆ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸಲಾಗುತ್ತದೆ. ಇದೆಲ್ಲ ಬದಲಾದರೆ ಜಿಲ್ಲೆಯಲ್ಲಿ ಉದ್ಯಮಿಗಳು ಹೂಡಿಕೆ ಮಾಡಬಹುದು. ಈ ನಿಟ್ಟಿನಲ್ಲಿ ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

- ‘ತುರ್ತಾಗಿ ಬೆಳೆ ಪರಿಹಾರ ಕೊಡಿ

ರಸ್ತೆ ಗುಂಡಿ ಮುಚ್ಚಿಸಿ’ ಜಿಲ್ಲೆಯಲ್ಲಿ ಸುರಿದ ಹೆಚ್ಚಿನ ಮಳೆಗೆ ಉದ್ದು ಹೆಸರು ಹಾಳಾಗಿದೆ. ರೈತರಿಗೆ ಬೆಳೆ ಪರಿಹಾರ ಕೊಡಬೇಕು. ಇದು ತುರ್ತಾಗಿ ಆಗಬೇಕು. ಮಾಂಜ್ರಾ ನದಿ ತೀರದಲ್ಲಿ ಹೆಚ್ಚು ಬೆಳೆಗಳು ಹಾಳಾಗಿವೆ. ಎಲ್ಲ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಬಿಜೆಪಿಯ ಹಿಂದಿನ ಸಂಸದರು ಮಂಜೂರು ಮಾಡಿಸಿರುವ ಸೋಲಾರ್‌ ಪಾರ್ಕ್‌ ಸಿಪೆಟ್‌ ಕಾಲೇಜಿಗೆ ಜಾಗ ಕೊಡಬೇಕು. ಔರಾದ್‌–ನಾಂದೇಡ್‌ ರೈಲು ಮಾರ್ಗ ಸ್ವಾಧೀನಕ್ಕೆ ಕ್ರಮ ಜರುಗಿಸಬೇಕು. ಜಿಲ್ಲಾ ಸಂಕೀರ್ಣ ನಿರ್ಮಾಣ ಕೆಲಸ ಆರಂಭಿಸಬೇಕು. ಮಹಾನಗರ ಪಾಲಿಕೆ ಘೋಷಿಸಬೇಕು. ಸೋಮನಾಥ ಪಾಟೀಲ ಜಿಲ್ಲಾಧ್ಯಕ್ಷ ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT