ಔರಾದ್: ಆರು ಶಿಕ್ಷಕರ ಪೈಕಿ ಐವರ ವರ್ಗಾವಣೆ ವಿರೋಧಿಸಿ ತಾಲ್ಲೂಕಿನ ಗಡಿ ಗ್ರಾಮದ ಜಮಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು.
‘ಕಳೆದ ಒಂದು ತಿಂಗಳಲ್ಲಿ ಐವರು ಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಅವರ ಜಾಗಕ್ಕೆ ಒಬ್ಬ ಶಿಕ್ಷಕರೂ ನಮ್ಮ ಶಾಲೆಗೆ ಬಂದಿಲ್ಲ. ಹೀಗಾದರೆ ನಾವು ಏನು ಕಲಿಯಬೇಕು. ಈಗ ಅರ್ಧ ವಾರ್ಷಿಕ ಪರೀಕ್ಷೆ ಬರುತ್ತಿದೆ. ವಿಜ್ಞಾನ ಶಿಕ್ಷಕರು ಬಿಟ್ಟರೆ ಯಾವುದೇ ವಿಷಯ ಕಲಿಸುವ ಶಿಕ್ಷಕರಿಲ್ಲ. ಹೀಗಾದರೆ ನಮ್ಮ ಭವಿಷ್ಯ ಏನಾಗಬೇಕು’ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
‘ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಈ ಶಾಲೆಯ 154 ವಿದ್ಯಾರ್ಥಿಗಳು ಒಂದು ತಿಂಗಳಿನಿಂದ ಪಾಠ ಇಲ್ಲದೆ ಸಮ್ಮನೆ ಕುಳಿತು ಮನೆಗೆ ಹೋಗುತ್ತಿದ್ದಾರೆ. ನಮ್ಮ ಮಕ್ಕಳ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಿನ್ನಡೆಯಾದರೆ ಯಾರು ಹೊಣೆ’ ಎಂದು ಕಿಡಿ ಕಾರಿದರು.
‘ವರ್ಗಾವಣೆ ನಮ್ಮ ಕೈಯಲ್ಲಿ ಇಲ್ಲ. ಕೌನ್ಸೆಲಿಂಗ್‌ನಲ್ಲಿ ಈ ಶಾಲೆಯ ಐದು ಶಿಕ್ಷಕರು ವರ್ಗಾವಣೆಯಾಗಿ ಹೋಗಿದ್ದಾರೆ. ಸದ್ಯ ಅತಿಥಿ ಶಿಕ್ಷಕರನ್ನು ಬಳಸಿಕೊಂಡು ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಗೋಳು ಆಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹೊನ್ನಪ್ಪ ಎಸ್. ನಗನೂರ ಭರವಸೆ ನೀಡಿದರು.
‘ಒಂದೇ ಬಾರಿ ಐವರು ಶಿಕ್ಷಕರನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲ. ಶಿಕ್ಷಣ ನೀಡುವ ವಿಷಯದಲ್ಲಿ ನಮ್ಮ ತಾಲ್ಲೂಕಿನ ಮಕ್ಕಳಿಗೆ ತೊಂದರೆ ಆದರೆ ನಾನು ಸುಮ್ಮನಿರಲ್ಲ’ ಎಂದು ಔರಾದ್ ಶಾಸಕ ಪ್ರಭು ಚವಾಣ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.